ಸೋಮಣ್ಣ ಕಾಂಗ್ರೆಸ್‌ಗೆ ಬರ್ತೀನಿ ಅಂದಿಲ್ಲ, ನಾನೂ ಕರೆದಿಲ್ಲ: ಡಿಕೆಶಿ
- ಸೋಮಣ್ಣ ಕಾಂಗ್ರೆಸ್‌ಗೆ ಬರ್ತೀನಿ ಅಂದಿಲ್ಲ, ನಾನೂ ಕರೆದಿಲ್ಲ: ಡಿಕೆಶಿ
- ವೈರಲ್ ಆಗಿರುವ ಫೋಟೋ ಬೆಳಗಾವಿ ಅಧಿವೇಶನ ಬಳಿಕ ವಿಮಾನ ಪ್ರಯಾಣದ್ದು
- ಬಿಜೆಪಿಯಲ್ಲಿ ಸಿ.ಟಿ.ರವಿಯೇ ಹೈಕಮಾಂಡ್, ಬಿಎಸ್‌ವೈಗಿಂತ ಅವರು ದೊಡ್ಡವರು
ಬೆಂಗಳೂರು (ಮಾ.15) : ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರಲಿದ್ದಾರೆ ಎಂಬ ದಟ್ಟವದಂತಿಗಳು ಹರಿದಾಡುತ್ತಿರುವ ನಡುವೆಯೇ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದುವರೆಗೂ ಸೋಮಣ್ಣ ಅವರು ಕಾಂಗ್ರೆಸ್‌ಗೆ ಬರುವುದಾಗಿ ಅವರೂ ಹೇಳಿಲ್ಲ. ನಾನೂ ಕೂಡ ಬನ್ನಿ ಎಂದು ಅವರನ್ನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ವದಂತಿಯ ನಡುವೆಯೇ ಡಿ.ಕೆ.ಶಿವಕುಮಾರ್(DK Shivakumar) ಮತ್ತು ಸೋಮಣ್ಣ(V Somanna) ಅವರು ಒಟ್ಟಿಗೆ ವಿಮಾಣದಲ್ಲಿ ಪ್ರಯಾಣಿಸಿರುವ ಫೋಟೋವೊಂದು ವೈರಲ್ಲಾಗಿದ್ದು ವದಂತಿಗಳಿಗೆ ಇನ್ನಷ್ಟುಪುಷ್ಟಿನೀಡಿದಂತಾಗಿದೆ. ಈ ಸಂಬಂಧ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಮತ್ತು ಸೋಮಣ್ಣ ಕಳೆದ ಬೆಳಗಾವಿ ಅಧಿವೇಶನ ಮುಗಿಸಿಕೊಂಡು ಒಟ್ಟಿಗೆ ವಿಮಾಣದಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಿದ್ದೆವು. ಆಗ ತೆಗೆದಿರುವ ಫೋಟೋವನ್ನು ಈಗ ಯಾರೋ ವೈರಲ್ ಮಾಡಿದ್ದಾರೆ ಎಂದರು.
Assembly Election: ಸಚಿವ ಸೋಮಣ್ಣ ಜೊತೆ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ?
ಅಲ್ಲದೆ, ಸೋಮಣ್ಣ ಅವರು ನಮ್ಮ ತಾಲೂಕಿನವರು. ಧರ್ಮ ಹಾಗೂ ತಾಲೂಕಿನ ಕೆಲಸಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅವರು ನಮ್ಮ ಊರಿಗೆ ಆಗಾಗ್ಗೆ ಬರುತ್ತಿರುತ್ತಾರೆ. ನಮ್ಮಿಬ್ಬರ ನಡುವೆ ಬಾಂಧವ್ಯವಿದೆ. ನಾವಿಬ್ಬರೂ ಒಟ್ಟಿಗೆ ಪ್ರಯಾಣಿಸಬಾರದಾ. ರಾಜಕಾರಣವೇ ಬೇರೆ, ಬಾಂಧ್ಯವ್ಯವೇ ಬೇರೆ. ಕಾಂಗ್ರೆಸ್ ಸೇರುವುದಾಗಿ ಅವರೂ ಎಂದೂ ಹೇಳಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ನಾನೂ ಅವರಿಗೆ ಹೇಳಿಲ್ಲ. ನಾವು ನಮ್ಮ ಕೆಲಸ ಮಾಡಿಕೊಂಡು ಇದ್ದೇವೆ ಎಂದರು.
ಇನ್ನು ಕೆಲ ಹಾಲಿ ಸಚಿವರು ಕಾಂಗ್ರೆಸ್ ಸೇರಲಿದ್ದಾರಂತಲ್ಲ ಎಂಬ ಪ್ರಶ್ನೆಗೆ, ಈ ವಿಚಾರವಾಗಿ ನಾನು ಈಗ ಏನನ್ನೂ ಹೇಳುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ. ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಆದರೆ ನಾನು ಯಾವುದೇ ಸಚಿವರ ಜತೆ ಸಂಪರ್ಕ ಮಾಡಿಲ್ಲ. ಆದರೆ ಹಾಲಿ ಶಾಸಕರುಗಳು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳುತ್ತಿದ್ದು, ಆ ಕ್ಷೇತ್ರಗಳಲ್ಲಿ ನಮ್ಮದೇ ಪಕ್ಷದ ನಾಯಕರು ಕಾರ್ಯಕರ್ತರು ಇದ್ದಾರೆ. ಹೀಗಾಗಿ ಈಗ ಪಕ್ಷಕ್ಕೆ ಅವರ ಅಗತ್ಯವಿಲ್ಲ. ನಾವು ಕೆಲವು ಕ್ಷೇತ್ರಗಳ ಬಗ್ಗೆ ಮಾತ್ರ ಈ ವಿಚಾರವಾಗಿ ಚಿಂತನೆ ಮಾಡುತ್ತಿದ್ದು, ನಾವು ಈಗಲೇ ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದರು.
ಸಿ.ಟಿ.ರವಿಗೆ ಟಾಂಗ್:
ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(CT Ravi) ಅವರೇ ಹೈಕಮಾಂಡ್ ಆಗಿದ್ದು, ಯಡಿಯೂರಪ್ಪ(BS Yadiyurappa) ಅವರಿಗಿಂತ ಬಹಳ ದೊಡ್ಡವರಾಗಿದ್ದಾರೆ. ಹೀಗಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ (BY Vijayendra)ಅವರ ಟಿಕೆಟ್ ಬಗ್ಗೆ ಮಾತನಾಡಿದ್ದಾರೆ ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಸಚಿವ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ: ಯಡಿಯೂರಪ್ಪ ಪ್ರತಿಕ್ರಿಯೆ
ವಿಜಯೇಂದ್ರಗೆ ಶಿಕಾರಿಪುರ ಟಿಕೆಟ್ ನೀಡುವ ವಿಚಾರವಾಗಿ ಸಿ.ಟಿ ರವಿ ಹೇಳಿಕೆ ಕುರಿತು ಪ್ರಶ್ನೆಗೆ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಪಿತೂರಿ ನಡೆದಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಜನ ಯಡಿಯೂರಪ್ಪ ಅವರ ಮುಖ ನೋಡಿ ಹಿಂದೆ ಬಿಜೆಪಿಗೆ ಮತಹಾಕಿದ್ದರು. ಆದರೆ, ಈಗ ಯಡಿಯೂರಪ್ಪ ಅವರ ಕಣ್ಣೀರು ರಾಜ್ಯ ರಾಜಕಾರಣದ ಚಿತ್ರಣ ಬದಲಿಸಲಿದೆ ಎಂದರು.