ಬೆಂಗಳೂರು[ಜ.26]: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ತನ್ನ ಪಾಲಿನ ನಿಗಮ-ಮಂಡಳಿ ನೇಮಕ ಪ್ರಕ್ರಿಯೆ ಮುಗಿಸಿದರೂ ಜೆಡಿಎಸ್ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಪಕ್ಷದ ಶಾಸಕರು, ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸಂಕ್ರಾಂತಿ ಬಳಿಕ ಖಾಲಿ ಇರುವ ಎರಡು ಸಚಿವ ಸ್ಥಾನ ಮತ್ತು ನಿಗಮ-ಮಂಡಳಿ ಸ್ಥಾನಗಳಿಗೆ ನೇಮಕ ಮಾಡುವುದಾಗಿ ಜೆಡಿಎಸ್ ವರಿಷ್ಠರು ಆಶ್ವಾಸನೆ ನೀಡಿದ್ದರು. ಆದರೆ, ಸಂಕ್ರಾಂತಿ ನಂತರ ೧೦ ದಿನಗಳ ಕಳೆದರೂ ನಿಗಮ-ಮಂಡಳಿಗೆ ನೇಮಕ ಮಾಡುವ ಯಾವುದೇ ಮುನ್ಸೂಚನೆ ಕಂಡುಬರುತ್ತಿಲ್ಲ. ಬದಲಿಗೆ, ಮುಂಬರುವ ವಿಧಾನ ಮಂಡಲದ ಬಜೆಟ್ ಅಧಿವೇಶನದ ಬಳಿಕ ನೇಮಕ ಪ್ರಕ್ರಿಯೆ ಕೈಗೊಳ್ಳುವುದಾಗಿ ಜೆಡಿಎಸ್ ನಾಯಕರು ಮತ್ತಷ್ಟು ವಿಳಂಬ ಮಾಡುತ್ತಿರುವುದಕ್ಕೆ ಆಕ್ರೋಶವೂ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಜೆಟ್ ಅಧಿವೇಶನದ ನಂತರ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಚುನಾವಣೆ ನಂತರ ಎಂದು ಮತ್ತೆ ವಿಳಂಬ ತಂತ್ರ ಅನುಸರಿಸಬಹುದು ಎಂಬ ಆತಂಕ ಪಕ್ಷದ ಶಾಸ ಕರು ಹಾಗೂ ಮುಖಂಡರನ್ನು ಕಾಡತೊಡಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ನಿಗಮ- ಮಂಡಳಿಗಳ ನೇಮಕ ಪ್ರಕ್ರಿಯೆ ಮುಗಿದು ಶಾಸಕರು ಸಹ ಅಧಿಕಾರ ಸ್ವೀಕರಿಸಿದ್ದಾರೆ. ಕೆಲಸ ವನ್ನೂ ಆರಂಭಿಸಿದ್ದಾರೆ.

ಆದರೆ, ಸರ್ಕಾರದ ಪಾಲುದಾರವಾಗಿದ್ದ ಜೆಡಿಎಸ್‌ನಲ್ಲಿ ಇನ್ನೂ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯೇ ಆರಂಭಗೊಂಡಿಲ್ಲ ಎಂದು ಪಕ್ಷದ ಶಾಸಕರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ತನ್ನ ಪಾಲಿನ ಸಚಿವ ಸ್ಥಾನ ಮತ್ತು ನಿಗಮ-ಮಂಡಳಿ ಗಳಿಗೆ ನೇಮಕ ಮಾಡಲು ಪಕ್ಷದ ವರಿಷ್ಠರು ವಿಳಂಬ ಧೋರಣೆ ಅನುಸರಿಸುತ್ತಿರುವುದು ಜೆಡಿಎಸ್‌ನಲ್ಲಿನ ಅಸಮಾಧಾನಕ್ಕೆ ಕಾರಣ. ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಪಕ್ಷದ ಹಲವು ಮುಖಂಡರು ವರಿಷ್ಠರ ಗಮನಕ್ಕೆ ಇದನ್ನು ತಂದಿದ್ದಾರೆ. ಆದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಪಕ್ಷದ ನಾಯಕರಲ್ಲಿಯೇ ಯಕ್ಷಪ್ರಶ್ನೆಯಾಗಿದೆ. ವಿನಾಕಾರಣ ಸಚಿವ ಸ್ಥಾನ, ನಿಗಮ-ಮಂಡಳಿ ಸ್ಥಾನಗಳನ್ನು ಭರ್ತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಕೆಲವರು ಆರೋಪವಾಗಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನವು ಜೆಡಿಎಸ್‌ಗೆ ಲಭಿಸಿದರೂ ನಾವು ಪಕ್ಷದ ಶಾಸಕರಾಗಿ ಆಯ್ಕೆಯಾಗಿ ಯಾವುದೇ ಅಧಿಕಾರ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ಇದೀಗ ಬಜೆಟ್ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅದರ ಸಿದ್ಧತೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಶಾಸಕರಿಗೆ ಯಾವುದೇ ಸ್ಥಾನಮಾನ ಸಿಗುವುದು ಕಷ್ಟ. ಬಜೆಟ್ ಬಳಿಕ ನಿಗಮ-ಮಂಡಳಿ ಸ್ಥಾನ ಭರ್ತಿ ಮಾಡುವ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ. ಆದರೆ, ಆ ಹೊತ್ತಿಗೆ ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾದರೆ ಚುನಾವಣೆವರೆಗೂ ಸಿಗುವುದು ಅನುಮಾನ ಇದೆ ಎಂಬ ಮಾತುಗಳು ಜೆಡಿಎಸ್ ಪಾಳೆಯದಲ್ಲಿ ಕೇಳಿಬಂದಿವೆ.