ನವದೆಹಲಿ [ನ.13]:  ಯಾರ್ರಿ ನಾನ್ ಶಾಸಕ ಅಲ್ಲ ಅಂತ ನಿಮಗೆ ಹೇಳಿದ್ದು, ನಾನೇನೂ ಎಕ್ಸ್ ಎಂಎಲ್ಲೇನಾ?’ ಎಂದು ಕರ್ನಾಟಕ ಭವನ 1 ರಲ್ಲಿ ರೂಮ್ ನಿರಾಕರಿಸಿದ ಸಿಬ್ಬಂದಿಗೆ ಯಲ್ಲಾಪುರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಗರಂ ಆದ ಘಟನೆ ಗುರುವಾರ ರಾತ್ರಿ ನಡೆದಿದೆ.

ರಾಜ್ಯಪಾಲರು, ಹೈ ಕೋರ್ಟ್ ನ್ಯಾಯಮೂರ್ತಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ನಿಗಮ ಮಂಡಳಿಯ ಮುಖ್ಯಸ್ಥರು, ಮಾಜಿ ಸಚಿವರು ಮತ್ತು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕೆಬಿ1  ರಲ್ಲಿ ಕೊಠಡಿ ಪಡೆಯಲು ಅರ್ಹರು. ಶಾಸಕರಾಗಿರುವ ಶಿವರಾಮ್ ಹೆಬ್ಬಾರ್ ಅವರಿಗೆ ಕರ್ನಾಟಕ ಭವನದಲ್ಲಿ ರೂಮ್ ಪಡೆಯಲು ಅವಕಾಶವಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಮ್ಮ ಅನರ್ಹತೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಹೆಬ್ಬಾರ್ ದೆಹಲಿಗೆ ಆಗಮಿಸಿ ಕೆಬಿ1ರಲ್ಲಿ ರೂಮ್ ಪಡೆಯಲು ಮುಂದಾಗಿದ್ದರು. ಆದರೆ ನಾವು ಇಲ್ಲಿ ನಿಮಗೆ ರೂಮ್ ನೀಡಲು ಸಾಧ್ಯವಿಲ್ಲ. ಸಿಎಂ, ಡಿಸಿಎಂ, ಮಿನಿಸ್ಟರ್ ಗಳಿಗೆ ಮಾತ್ರ ಇಲ್ಲಿ ರೂಮ್ ನೀಡಲು ಸಾಧ್ಯ. ಶಾಸಕರು ಮತ್ತು ಮಾಜಿ ಶಾಸಕರಿಗೆ ಕೆಬಿ2ನಲ್ಲಿ ರೂಮ್ ಇದೆ ಎಂದು ಭವನದ ಸಿಬ್ಬಂದಿ ಹೇಳಿದರು. 

ಆಗ ತಕ್ಷಣವೇ ಕೋಪಗೊಂಡ ಹೆಬ್ಬಾರ್, ನಾನೇನು ಎಕ್ಸ್ ಎಂಎಲ್‌ಎ ನಾ? ಯಾರು ನಿಮಗೆ ಹೇಳಿದ್ದು ಎಂದು ಕೋಪದಿಂದ ನುಡಿದರು. ಬಳಿಕ ಖಾಸಗಿ ಹೊಟೇಲ್‌ಗೆ ಹೆಬ್ಬಾರ್ ತೆರಳಿದರು.