ಜಮೀರ್ ಅಹ್ಮದ್ ಖಾನ್‌ಗೆ ಎಸಿಬಿ ಶಾಕ್, ಬಿಟ್ಟೂ ಬಿಡದೆ ಕಾಡ್ತಿರುವ ಐಎಂಎ ಉರುಳು..!
* ಶಾಸಕ ಜಮೀರ್ ಅಹಮದ್ ಖಾನ್ ಗೆ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್
* ಜಮೀರ್ ಮನೆ ಮೇಲೆ ಎಸಿಬಿ ದಾಳಿ
* 40ಕ್ಕೂ ಅಧಿಕ ಎಸಿಬಿ ಅಧಿಕಾರಿಗಳ ತಂಡದಿಂದ ಎಸಿಬಿ ದಾಳಿ
* ಫ್ರೇಜರ್ ಟೌನ್‌ನಲ್ಲಿ ಜಮೀರ್ ನಿವಾಸ
ಬೆಂಗಳೂರು(ಜು.05): ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ನಡೆಸಿದೆ. ಹೌದು ಅಕ್ರಮ ಆಸ್ತಿ ಪ್ರಕರಣದಲ್ಲಿ ಚಾಮರಾಜಪೇಟೆ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಬಿ ಝಡ್ ಜಮೀರ್ ಅಹಮದ್ ಖಾನ್ ಅವರಿಗೆ ಸೇರಿದ ಆಸ್ತಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ಆರಂಭಿಸಿದ್ದಾರೆ. 40 ಅಧಿಕಾರಿಗಳ ತಂಡವು ಏಕಕಾಲದಲ್ಲಿ ಐದು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಫ್ರೇಜರ್ ಟೌನ್ ನಲ್ಲಿ ಜಮೀರ್ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಕಳೆದ ವರ್ಷವೂ ಜಮೀರ್ ನಿವಾಸದ ಮೇಲೆ ಐಟಿ ದಾಳಿ ನಡೆಸಿತ್ತು. ಇನ್ನು ಕೆಲ ದಿನಗಳ ಹಿಂದಷ್ಟೇ ಕೆ.ಜಿ.ಎಫ್ ಬಾಬು ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ದಾಳಿ ವೇಳೆ ಜಮೀರ್ ಜೊತೆಗಿನ ಹಣದ ವ್ಯವಹಾರದ ಕುರಿತು ಬಯಲಾಗಿತ್ತು. ಮುಂದುವರೆದ ಭಾಗವಾಗಿ ಎಸಿಬಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಶಾಸಕ ಜಮೀರ್ ಅಹಮದ್‌ಗೆ ಸೇರಿದ ಐದು ಶಾಲೆಗಳಲ್ಲಿ ದಾಳಿ ಪರಿಶೀಲನೆ ನಡೆದಿದ್ದು, ಇಡಿ ನೀಡಿದ ವರದಿ ಆಧರಿಸಿ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಲ್ಲೆಲ್ಲಿ ದಾಳಿ?
1. ಕಂಟೋನ್ಮೆಂಟ್ ರೋಡ್ ಶಾಸಕರಾದ ಶ್ರೀ ಜಮೀರ್ ಅಹಮದ್ ಖಾನ್ ನಿವಾಸ
2. ರಿಚ್ಮಂಡ್ ಟೌನ್ ನ ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್
3.ಸದಾಶಿವನಗರದಲ್ಲಿರುವ ಅತಿಥಿ ಗೃಹ
4. ಬನಶಂಕರಿಯಲ್ಲಿರುವ ಜಿ ಕೆ ಅಸೋಸಿಯೇಟ್ಸ್ ಕಚೇರಿ
5 .ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ
ಅಹ್ಮದ್ ಖಾನ್ ಅವರ ಅನುಯಾಯಿಗಳು ಸ್ಥಳದಲ್ಲಿ ಜಮಾಯಿಸುವುದನ್ನು ತಪ್ಪಿಸಲು ಸ್ಥಳೀಯ ಪೊಲೀಸರು ಎಲ್ಲಾ ಸ್ಥಳಗಳಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.