ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅರ್ಮೇನಿಯಾ ಸಿನಿಮಾಗಳಿಗೆ ಸಿಕ್ಕ ಮನ್ನಣೆಯನ್ನು ನಿರ್ದೇಶಕ ಎಡ್ಗರ್ ಬಾಗ್ದಸಾರ್ಯನ್ ಶ್ಲಾಘಿಸಿದ್ದಾರೆ. ಭಾರತೀಯ ನಟರೊಂದಿಗೆ ಸಿನಿಮಾ ಮಾಡುವ ಯೋಜನೆಯನ್ನೂ ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರು (ಮಾ.5): ‘ವಿಶ್ವ ರಾಜಕೀಯ ಸ್ಥಿತ್ಯಂತ್ರದಲ್ಲಿ ಅರ್ಮೇನಿಯಾ ರಾಷ್ಟ್ರದ ಕಲಾತ್ಮಕ ಸಿನಿಮಾಗಳು ಬಡವಾಗಿವೆ. ಒಂದೆಡೆ ನಮ್ಮ ನೆಲದ ಸಿನಿಮಾಗಳನ್ನು ರಷ್ಯಾದ ಜೊತೆ ಸಮೀಕರಿಸಿ ಯುರೋಪಿಯನ್‌ ರಾಷ್ಟ್ರಗಳು ತಿರಸ್ಕರಿಸುತ್ತಿವೆ. ಇನ್ನೊಂದೆಡೆ ರಷ್ಯಾವೂ ಕಡೆಗಣಿಸುತ್ತಿದೆ. ಅಲ್ಲೆಲ್ಲೂ ಸಿಗದ ಮಾನ್ಯತೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಕ್ಕಿರುವುದು ಖುಷಿ ಕೊಟ್ಟಿದೆ’ ಎಂದು ಅರ್ಮೇನಿಯಾದ ನಿರ್ದೇಶಕ ಎಡ್ಗರ್‌ ಬಾಗ್ದಸಾರ್ಯನ್ ಹೇಳಿದ್ದಾರೆ.

ಎಡ್ಗರ್‌ ನಿರ್ದೇಶನದ ‘ಯಾಶಾ ಆ್ಯಂಡ್‌ ಲಿಯೋನಿಡ್ ಬ್ರೇಝ್ನೇವ್’ ಅರ್ಮೇನಿಯಾ ಭಾಷೆಯ ಸಿನಿಮಾ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಪ್ರದರ್ಶನದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ‘ಭಾರತೀಯ ನಟರನ್ನಿಟ್ಟುಕೊಂಡು ಹೊಸ ಸಿನಿಮಾ ಮಾಡುವ ಯೋಜನೆ ಇದೆ’ ಎಂದು ಹೇಳಿದರು.

ಇದನ್ನೂ ಓದಿ: BIFFES 2025: ಆಸ್ಕರ್‌ ಪಟ್ಟಿಯಲ್ಲಿರುವ ಸಿನಿಮಾ ಪ್ರದರ್ಶನಕ್ಕೆ ಕಿಕ್ಕಿರಿದ ಜನಸಂದಣಿ

ಚಲನ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ ‘ಪೈರ್‌’ ನಿರ್ದೇಶಕ ವಿನೋದ್‌ ಕಾಪ್ರಿ ತನ್ನ ಸಿನಿಮಾದ ವಸ್ತು ವಿಚಾರಗಳ ಬಗ್ಗೆ ವಿವರ ಹಂಚಿಕೊಂಡರು. ‘ಹಿಮಾಲಯದ ಹಳ್ಳಿಗಳು ಜನರಿಲ್ಲದೇ ಬೆಂಗಾಡಾಗುತ್ತಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ತಪ್ಪಲಿನ ಹಳ್ಳಿಗಳಲ್ಲೂ ಈ ಸ್ಥಿತಿ ಇದೆ ಎಂಬುದು ಇಲ್ಲಿನ ಪತ್ರಕರ್ತರಿಂದ ತಿಳಿದುಬಂತು. ಪತ್ರಕರ್ತನಾಗಿದ್ದ ನಾನು ಮುಂಬಯಿಯ ಬಾಲಿವುಡ್ ಸಂಸ್ಕೃತಿಗೆ ಬಂಡಾಯವೆದ್ದು ಸಿನಿಮಾ ನಿರ್ದೇಶನಕ್ಕಿಳಿದೆ’ ಎಂದರು.

ಅಸ್ಸಾಮಿ ನಿರ್ದೇಶಕ ಡಾ। ಜಯಂತ ಮದಾಬ್‌ ದತ್ತ, ‘ಅಸ್ಸಾಮಿನ ಬುಡಕಟ್ಟು ಜನ ದುಸ್ತರ ಬದುಕನ್ನು ಕಟ್ಟಿಕೊಡುವ ನನ್ನ ಚಿತ್ರ ‘ಯಕಾಸಿ'ಸ್ ಡಾಟರ್’ ಚಿತ್ರೋತ್ಸವದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ನಮ್ಮ ಸಿನಿಮಾಗಳು ಹಳ್ಳಿ ಜನರನ್ನೂ ತಲುಪಬೇಕು. ಹೀಗಾಗಿ ನಮ್ಮೂರಿನ ಹಳ್ಳಿಗಳಲ್ಲಿ ಸಿನಿಮೋತ್ಸವ ಮಾಡುವ ತಯಾರಿಯಲ್ಲಿದ್ದೇನೆ’ ಎಂದರು.

ಕಿರ್ಗಿಸ್ತಾನ್‌ ನಿರ್ದೇಶಕ ದಸ್ತನ್‌ ಝಾಫರ್‌ ರಿಸ್ಕೆಲ್ದಿ ತಮ್ಮ ದೇಶದಲ್ಲಿ ಸಿನಿಮಾ ನಿರ್ದೇಶನ ಮಾಡುವಾಗಿನ ಸವಾಲುಗಳನ್ನು ಹಂಚಿಕೊಂಡರು.