Asianet Suvarna News Asianet Suvarna News

ಡಿಜಿಟಲ್‌ ಗ್ರಂಥಾಲಯದಲ್ಲಿ ಈಗ 11 ಲಕ್ಷ ಓದುಗರು

ಫೆ.27ಕ್ಕೆ ಒಂದು ವರ್ಷ| ಹೊಸ ಪ್ರಯತ್ನಕ್ಕೆ ವ್ಯಾಪಕ ಸ್ಪಂದನೆ| ಎಲ್ಲ ಜಿಲ್ಲೆಗಳ ಪೈಕಿ ನೋಂದಣಿಯಲ್ಲಿ ಬೆಂಗಳೂರು ನಗರ (1,60,917) ಅಗ್ರಸ್ಥಾನ| ಕಲಬುರಗಿ ಜಿಲ್ಲೆ (1,02,509) ಎರಡನೇ ಸ್ಥಾನ| ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಆತಂಕದ ನಡುವೆ ಡಿಜಿಟಲ್‌ ಗ್ರಂಥಾಲಯಗಳಿಗೆ ಸಾಹಿತ್ಯ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ| 

Digital Library Now Has 11 Lakh Readers grg
Author
Bengaluru, First Published Jan 26, 2021, 7:49 AM IST

ಬೆಂಗಳೂರು(ಜ.26): ರಾಜ್ಯ ಗ್ರಂಥಾಲಯ ಇಲಾಖೆಯ ‘ಗ್ರಂಥಾಲಯಗಳ ಡಿಜಿಟಲೀಕರಣ’ ಫೆ.27ಕ್ಕೆ ಒಂದು ವರ್ಷ ಪೂರೈಸಲಿದೆ. ಕಳೆದ 11 ತಿಂಗಳಲ್ಲಿ 10.99 ಲಕ್ಷ ಮಂದಿ ಓದುಗರು ಡಿಜಿಟಲ್‌ ಗ್ರಂಥಾಲಯಗಳಲ್ಲಿ ನೋಂದಣಿಯಾಗಿದ್ದಾರೆ.

ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಆತಂಕದ ನಡುವೆ ಡಿಜಿಟಲ್‌ ಗ್ರಂಥಾಲಯಗಳಿಗೆ ಸಾಹಿತ್ಯ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯಾದ್ಯಂತ ಜ.25ರವರೆಗೆ ಇ- ಆವೃತ್ತಿಯಲ್ಲಿ ಒಟ್ಟು 10,99,984 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೇ ಅಳವಡಿಕೆಯಾದ ಇ-ಪುಸ್ತಕ (10,39,204) ಹಾಗೂ ವಿಡಿಯೋಗಳನ್ನು (5,47,040) ಒಟ್ಟು 15.86 ಲಕ್ಷ ಬಾರಿ ಓದುಗರು (ವೀವ್ಸ್‌) ವೀಕ್ಷಿಸಿದ್ದಾರೆ ಎಂದು ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್‌ ಹೊಸಮನಿ ಮಾಹಿತಿ ನೀಡಿದರು.

ದೇಶದ ಮೊದಲ ಡಿಜಿಟಲ್‌ ಲೈಬ್ರರಿ ಆರಂಭ!

ಗ್ರಂಥಾಲಯ ಇಲಾಖೆ 2020ರ ಫೆ. 27ರಂದು ರಾಜ್ಯದಲ್ಲಿನ 272 ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಿತು. ಬಳಿಕ ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲ ಗ್ರಂಥಾಲಯಗಳು ಬಂದ್‌ ಆಗಿದ್ದರಿಂದ ನಿರಾಶರಾಗಿದ್ದ ಲಕ್ಷಾಂತರ ಓದುಗರನ್ನು ತಣಿಸುವಲ್ಲಿ ಈ ಡಿಜಿಟಲ್‌ ಗ್ರಂಥಾಲಯ ಯೋಜನೆ ಯಶಸ್ವಿಯಾಯಿತು. ಅಂದಿನಿಂದ ಈವರೆಗೆ ಓದುಗರ ಸಂಖ್ಯೆ ಹೆಚ್ಚುತ್ತಿದ್ದು, ಈವರೆಗೆ ನೋಂದಣಿಯಾದವರ ಪೈಕಿ ವಿದ್ಯಾರ್ಥಿಗಳು 1,18,435 ಹಾಗೂ ಇತರರು 1,17,933 ನಷ್ಟಿದ್ದಾರೆ.

ಎಲ್ಲ ಜಿಲ್ಲೆಗಳ ಪೈಕಿ ನೋಂದಣಿಯಲ್ಲಿ ಬೆಂಗಳೂರು ನಗರ (1,60,917) ಅಗ್ರಸ್ಥಾನದಲ್ಲಿದ್ದು, ಕಲಬುರಗಿ ಜಿಲ್ಲೆ (1,02,509) ಎರಡನೇ ಸ್ಥಾನದಲ್ಲಿದೆ. ಈ ಡಿಜಿಟಲೀಕರಣಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಡಾ.ಸತೀಶ್‌ಕುಮಾರ್‌ ಹೊಸಮನಿ, ಆಸಕ್ತರು ವೆಬ್‌ಸೈಟ್‌ www.karnatakadigitalpublibrary.org ನಲ್ಲಿ ಅಥವಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮೊಬೈಲ್‌ ಆ್ಯಪ್‌ ಮೂಲಕ ಲಾಗಿನ್‌ ಆಗಿ ಲಭ್ಯವಿರುವ ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಓದಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios