ಬೆಂಗಳೂರು[ಫೆ.27]: ರಾಜ್ಯದ 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಿರುವ ವಿವಿಧ ಲೇಖಕರ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಡಿಜಿಟಲೀಕರಿಸಿ ಬೆರಳ ತುದಿಯಲ್ಲೇ ಓದುಗರಿಗೆ ಲಭ್ಯಗೊಳಿಸುವ ದೇಶದ ಮೊದಲ ‘ಡಿಜಿಟಲ್‌ ಗ್ರಂಥಾಲಯ ಮತ್ತು ಡಿಜಿಟಲ್‌ ಆ್ಯಪ್‌’ ಬುಧವಾರ ಲೋಕಾರ್ಪಣೆ ಮಾಡಲಾಯಿತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಾರ್ವಜನಿಕ ಗ್ರಂಥಾಲಯ ಸಚಿವರೂ ಆದ ಎಸ್‌. ಸುರೇಶ್‌ ಕುಮಾರ್‌ ಅವರು, ಬುಧವಾರ ಬೆಂಗಳೂರಿನ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಡಿಜಿಟಲ್‌ ಗ್ರಂಥಾಲಯ ಮತ್ತು ಡಿಜಿಟಲ್‌ ಆ್ಯಪ್‌’ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಗ್ರಂಥಾಲಯವನ್ನೇ ಓದುಗರ ಮನೆ ಬಾಗಿಲಿಗೆ ತರಲು ಡಿಜಿಟಲ್‌ ಗ್ರಂಥಾಲಯ ಮತ್ತು ಆ್ಯಪ್‌ ವಿನ್ಯಾಸ ಮಾಡಲಾಗಿದೆ. ಮೊಬೈಲ್‌ನಲ್ಲಿಯೇ ಪತ್ರಿಕೆ ಓದುವಂತೆ ಆ್ಯಪ್‌ ಮೂಲಕ ಪುಸ್ತಕ, ನಿಯತ ಕಾಲಿಕೆಗಳನ್ನು ಓದಬಹುದು. ರಾಜ್ಯದ 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಿರುವ ಒಂದು ಲಕ್ಷ ಪುಸ್ತಕಗಳು (ಕೃತಿಸ್ವಾಮ್ಯಕ್ಕೆ ಒಳಪಟ್ಟಿರುವ ಪುಸ್ತಕಗಳನ್ನು ಹೊರತುಪಡಿಸಿ) ಮತ್ತು 58 ನಿಯತಕಾಲಿಕೆಗಳನ್ನು ಈಗಾಗಲೇ ಡಿಜಿಟಲೀಕರಿಸಿ ಓದುಗರಿಗಾಗಿ ಡಿಜಿಟಲ್‌ ಗ್ರಂಥಾಲಯದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಡಿಜಿಟಲ್‌ ಗ್ರಂಥಾಲಯದಲ್ಲಿ ಓದುಗನಾಗಿ ನೋಂದಾಯಿಸಿಕೊಳ್ಳಲು ತಮ್ಮ ಕಂಪ್ಯೂಟರ್‌, ಲ್ಯಾಪ್‌ಟಾಲ್‌, ಟ್ಯಾಬ್‌, ಮೊಬೈಲ್‌ ಮೂಲಕ ಡಿಜಿಟಲ್‌ ಗ್ರಂಥಾಲಯದಲ್ಲಿ ಲಾಗಿನ್‌ ಆಗಬೇಕು ಅಥವಾ ಡಿಜಿಟಲ್‌ ಆ್ಯಪನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ತನ್ಮೂಲಕ ಲಭ್ಯ ಪುಸ್ತಕಗಳು ಹಾಗೂ ನಿಯತಕಾಲಿಕೆಗಳನ್ನು ಓದಬಹುದು ಎಂದರು.

ಭವಿಷ್ಯದಲ್ಲಿ ಓದುಗರ ಬೇಡಿಕೆ ಬಂದರೆ ರಾಜ್ಯದ ಇತರೆ 272 ಗ್ರಂಥಾಲಯಗಳನ್ನೂ ಡಿಜಿಟಲ್‌ ಗ್ರಂಥಾಲಯಗಳಾಗಿ ಅಭಿವೃದ್ಧಿಪಡಿಸುವ ಗುರಿಯೂ ಇದೆ ಎಂದು ತಿಳಿಸಿದರು.

ಪ್ರಕಾಶಕರಿಗೆ ತೊಂದರೆಯಿಲ್ಲ:

ಡಿಜಿಟಲ್‌ ಗ್ರಂಥಾಲಯದಿಂದ ಪ್ರಕಾಶಕರಿಗೆ ತೊಂದರೆ ಆಗುವುದಿಲ್ಲ. ಎಂದಿನಂತೆ ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಖರೀದಿ ಮಾಡಿ ಅನಂತರ ಡಿಜಿಟಲೀಕರಿಸಿ ಓದುಗರಿಗೆ ನೀಡಲಿದೆ. ಡಿಜಿಟಲ್‌ ಗ್ರಂಥಾಲಯದಲ್ಲಿ ಲಭಿಸುವ ಯಾವುದೇ ಪುಸ್ತಕಗಳನ್ನು ಓದುಗರು ಡೌನ್‌ಲೋಡ್‌ ಮಾಡಿಕೊಳ್ಳುವುದಾಗಲಿ, ಪ್ರಿಂಟ್‌ಔಟ್‌, ನಕಲು ಮಾಡಲು ಸಾಧ್ಯವಾಗುವುದಿಲ್ಲ. ಕೇವಲ ನಿಗದಿತ ದಿನಗಳಲ್ಲಿ ಅವರು ಓದಿ ಮುಗಿಸಬಹುದಾಗಿರುತ್ತದೆ. ಪ್ರಕಾಶಕರ ಹಿತಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

2500 ಪುಸ್ತಕ ದೇಣಿಗೆ:

ತಮ್ಮ ಬಳಿ ಪ್ರಸ್ತುತ 3500 ಪುಸ್ತಕಗಳಿದ್ದು, ಶೀಘ್ರದಲ್ಲಿ ಕಾರ್ಯಕ್ರಮ ಆಯೋಜಿಸಿ ಗ್ರಂಥಾಲಯಕ್ಕೆ ಒದಗಿಸಲಾಗುವುದು ಎಂದು ಇದೇ ವೇಳೆ ಸುರೇಶ್‌ ಕುಮಾರ್‌ ಮಾಹಿತಿ ನೀಡಿದರು.

1 ಕೋಟಿ ಪುಸ್ತಕ ಡಿಜಿಟಲೀಕರಣದ ಗುರಿ:

ಸಾರ್ವಜನಿಕ ಗ್ರಂಥಾಲಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಮಾತನಾಡಿ, ಡಿಜಿಟಲ್‌ ಗ್ರಂಥಾಲಯದಲ್ಲಿ ಪ್ರಸ್ತುತ ಒಂದು ಲಕ್ಷದಷ್ಟುಪುಸ್ತಕಗಳನ್ನು ಡಿಜಿಟಲೀಕರಿಸಲಾಗಿದೆ. ಆದಷ್ಟುಬೇಗ ಸುಮಾರು ಒಂದು ಕೋಟಿ ಪುಸ್ತಕಗಳನ್ನು ಡಿಜಿಟಲೀಕರಿಸುವ ಗುರಿ ಹೊಂದಲಾಗಿದೆ. ಜತೆಗೆ ಹಂತ ಹಂತವಾಗಿ 272 ಗ್ರಂಥಾಲಯಗಳಿಗೂ ಡಿಜಿಟಲ್‌ ಟಚ್‌ ನೀಡಲಾಗುವುದು. ಕನ್ನಡದಲ್ಲಿ ಹಳೆಯ ಮೌಲ್ಯಯುತ ಕೃತಿಗಳಿವೆ. ಅವುಗಳ ಪ್ರತಿಗಳು ಎಲ್ಲೂ ಸಿಗುತ್ತಿಲ್ಲ. ಅಂತಹ ಪುಸ್ತಕಗಳು ಕೂಡ ನಮ್ಮ ಡಿಜಿಟಲ… ಗ್ರಂಥಾಲಯದಲ್ಲಿ ಓದುಗರಿಗೆ ದೊರೆಯಲಿವೆ ಎಂದರು.

ಪಠ್ಯಪುಸ್ತಕ-ಮಾದರಿ ಪ್ರಶ್ನೆಪತ್ರಿಕೆಗಳೂ ಲಭ್ಯ:

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶಕುಮಾರ್‌ ಹೊಸಮನಿ ಮಾತನಾಡಿ,ಡಿಜಿಟಲ್‌ ಗ್ರಂಥಾಲಯದಲ್ಲಿ ಲೇಖಕರ ಪುಸ್ತಕಗಳು ಮಾತ್ರವಲ್ಲದೆ, 1ರಿಂದ 12ನೇ ತರಗತಿವರೆಗಿನ ರಾಜ್ಯ ಪಠ್ಯಕ್ರಮ ಮತ್ತು ಎನ್‌ಸಿಇಆರ್‌ಟಿ ಪಠ್ಯಕ್ರಮದ ಪಠ್ಯಪುಸ್ತಕಗಳು ಹಾಗೂ ಪ್ರಮುಖ ತರಗತಿಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಕೂಡ ಲಭ್ಯವಿದೆ. ಹಾಗಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಗ್ರಂಥಾಲಯ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ರಾಜೇಂದ್ರ ಕುಮಾರ್‌, ಮಲ್ಲೇಶ್‌, ಪ್ರಕಾಶಕರಾದ ಪ್ರಕಾಶ್‌ ಕಂಬತ್ತಳ್ಳಿ, ಸೃಷ್ಟಿನಾಗೇಶ್‌, ಡಿಜಿಟಲ್‌ ಪೋರ್ಟಲ್‌ ವಿಭಾಗದ ವಾಣಿ, ರತ್ನಾ ಕಾಳೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಲಾಗಿನ್‌ ಆಗುವುದು ಹೇಗೆ?

ಓದುಗರು ತಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಡಿಜಿಟಲ್‌ ಗ್ರಂಥಾಲಯದ ವೆಬ್‌ಪೋರ್ಟಲ್‌ನಲ್ಲಿ (ಟd್ಝs.ಞಜ್ಞಿಠಿಚಿಟಟk.್ಚಟಞ) ತಮ್ಮ ಹೆಸರು, ಮೊಬೈಲ್‌ ನಂಬರ್‌, ಪಾಸ್‌ವರ್ಡ್‌ ದಾಖಲಿಸಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲಿ ಲಾಗಿನ್‌ ಆದ ಬಳಿಕ ಅದೇ ಪಾಸ್‌ವರ್ಡ್‌ ಬಳಸಿ ತಮ್ಮ ಮನೆ, ಕಚೇರಿ ಅಥವಾ ಇನ್ಯಾವುದೇ ಸ್ಥಳದಿಂದ ಇಲಾಖೆಯ ವೆಬ್‌ಪೋರ್ಟಲ್‌ ಮೂಲಕ ಡಿಜಿಟಲ್‌ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದಬಹುದು. ಅಥವಾ ಮೊಬೈಲ್‌ನಲ್ಲಿ ‘ಜ್ಞಾನ ದೀಪಿಕೆ’ ಎಂಬ ಡಿಜಿಟಲ್‌ ಗ್ರಂಥಾಲಯದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ಲಾಗಿನ್‌ ಆಗಿ ಪುಸ್ತಕ ಓದಿಕೊಳ್ಳಬಹುದು.