ಮಧುಮೇಹದಿಂದ ಬಳಲುತ್ತಿರುವ ಕಾರಣ ಪರಿತ್ಯಜಿಸಿರುವ ಪತ್ನಿ ಮತ್ತು ಆಕೆಯ ಸುಪರ್ದಿಯಲ್ಲಿರುವ ಮಗನಿಗೆ ಕೌಟುಂಬಿಕ ನ್ಯಾಯಾಲಯದ ನಿರ್ದೇಶನದಂತೆ ಮಾಸಿಕ ಹತ್ತು ಸಾವಿರ ರು. ಜೀವನಾಂಶ ಪಾವತಿಸಲು ಆಗುವುದಿಲ್ಲ ಎಂಬ ವ್ಯಕ್ತಿಯೊಬ್ಬರ ವಾದವನ್ನು ತಿರಸ್ಕರಿಸಿರುವ ಹೈಕೋರ್ಚ್‌, ಮಧುಮೇಹವು ನಿರ್ವಹಣೆ ಮಾಡುವಂತಹ ಕಾಯಿಲೆಯಾಗಿರುವ ಕಾರಣ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಬೇಕು ಎಂದು ಆದೇಶಿಸಿದೆ.

ಬೆಂಗಳೂರು (ಆ.22) :  ಮಧುಮೇಹದಿಂದ ಬಳಲುತ್ತಿರುವ ಕಾರಣ ಪರಿತ್ಯಜಿಸಿರುವ ಪತ್ನಿ ಮತ್ತು ಆಕೆಯ ಸುಪರ್ದಿಯಲ್ಲಿರುವ ಮಗನಿಗೆ ಕೌಟುಂಬಿಕ ನ್ಯಾಯಾಲಯದ ನಿರ್ದೇಶನದಂತೆ ಮಾಸಿಕ ಹತ್ತು ಸಾವಿರ ರು. ಜೀವನಾಂಶ ಪಾವತಿಸಲು ಆಗುವುದಿಲ್ಲ ಎಂಬ ವ್ಯಕ್ತಿಯೊಬ್ಬರ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಮಧುಮೇಹವು ನಿರ್ವಹಣೆ ಮಾಡುವಂತಹ ಕಾಯಿಲೆಯಾಗಿರುವ ಕಾರಣ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಬೇಕು ಎಂದು ಆದೇಶಿಸಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ 38 ವರ್ಷದ ಕೆ.ಜಿ.ಅನಂತಕುಮಾರ್‌ ಸಲ್ಲಿಸಿರುವ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠ ಈ ಆದೇಶ ಮಾಡಿದೆ.

ಸಮ್ಮತಿಯ ಲೈಂಗಿಕತೆ, ಗರ್ಭಪಾತ ಮಾಡಲು ವೈದ್ಯರು ಅಪ್ರಾಪ್ತ ವಯಸ್ಕರ ಹೆಸರು ಬಹಿರಂಗಪಡಿಸಬೇಕಿಲ್ಲ; ಹೈಕೋರ್ಟ್

ವೈದ್ಯಕೀಯ ವಿಜ್ಞಾನ ಸಾಕಷ್ಟುಮುಂದುವರಿರುವ ಕಾರಣ ಮಧುಮೇಹವನ್ನು ನಿರ್ವಹಣೆ ಮಾಡಬಹುದಾಗಿದೆ. ಸೂಕ್ತ ವೈದ್ಯಕೀಯ ಆರೈಕೆಯಿದ್ದರೆ ಆ ಕಾಯಿಲೆಯನ್ನು ನಿರ್ವಹಿಸಬಹುದು. ಆದರೆ, ಮಧುಮೇಹವಿದೆ ಎಂಬ ಕಾರಣಕ್ಕೆ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲಾಗದು. ಕೌಟುಂಬಿಕ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ಸೂಚಿಸಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅರ್ಜಿದಾರರಿಂದ ಬೇರ್ಪಟ್ಟಿರುವ ಪತ್ನಿ, ಮಗನೊಂದಿಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದು ಇತ್ಯರ್ಥಕ್ಕೆ ಬಾಕಿಯಿರುವ ಮಧ್ಯೆ ತನಗೂ ಮತ್ತು ಅಪ್ರಾಪ್ತ ಮಗನಿಗೂ ಜೀವನಾಂಶ ಪಾವತಿಸಲು ಪತಿಗೆ ನಿರ್ದೇಶಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿ ಮತ್ತು ಮಗನಿಗೆ ಮಾಸಿಕ 10 ಸಾವಿರ ರು. ಜೀವನಾಂಶ ನೀಡುವಂತೆ 2023ರ ಏ.21ರಂದು ಅರ್ಜಿದಾರರಿಗೆ ನಿರ್ದೇಶಿಸಿತ್ತು.

ಆ ಆದೇಶ ಪ್ರಶ್ನಿಸಿ ಹೈಕೋರ್ಚ್‌ ಮೆಟ್ಟಿಲೇರಿದ್ದ ಅರ್ಜಿದಾರರು, ತಾನು ಮಧುಮೇಹದಿಂದ ಬಳಲುತ್ತಿರುವ ಕಾರಣ ಜೀವನಾಂಶ ಪಾವತಿಸಲಾಗುತ್ತಿಲ್ಲ. ಪತ್ನಿ ಉದ್ಯೋಗ ಮಾಡುತ್ತಿರುವುದರಿಂದ ಆಕೆಗೆ ಜೀವನಾಂಶದ ಅಗತ್ಯವಿಲ್ಲ. ಪತ್ನಿ ಅಪ್ರಾಪ್ತ ಮಗುವಿನೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದಾರೆ. ಮೇಲಾಗಿ ಜೀವನಾಂಶ ಮೊತ್ತವೂ ಹೆಚ್ಚಿದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯ ಆದೇಶ ರದ್ದುಪಡಿಸಬೇಕು ಎಂದು ವಾದ ಮಂಡಿಸಿದ್ದರು.

ಈ ವಾದವನ್ನು ಒಪ್ಪದ ನ್ಯಾಯಪೀಠ, ಸದೃಢ ವ್ಯಕ್ತಿಯು ತನ್ನನ್ನು ಅವಲಂಬಿಸಿರುವ ಕುಟುಂಬದವರನ್ನು ನೋಡಿಕೊಳ್ಳುವುದು ಅವಶ್ಯಕವಾಗಿದೆ. ಸಂಸತ್‌ ಜಾರಿಗೆ ತಂದಿರುವ ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 125, ಮಹಿಳೆಯರ ವಿರುದ್ಧದ ಕೌಟುಂಬಿಕದ ದೌರ್ಜನ್ಯ ತಡೆ ಕಾಯ್ದೆ-2005 ಮತ್ತು ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್‌ 24 ಪ್ರಕಾರ ಪತಿಗೆ ದೈಹಿಕವಾಗಿ ದುಡಿಯುವ ಸಾಮರ್ಥ್ಯವಿದ್ದರೆ, ಆತ ಪತ್ನಿ ಹಾಗೂ ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶ ಪಾವತಿಸಲೇಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ. 

ಲಂಚ ಸ್ವೀಕಾರ ಸಾಬೀತಿಗೆ ಬೇಡಿಕೆಯ ಸಾಕ್ಷ್ಯವೂ ಅನಿವಾರ್ಯ: ಹೈಕೋರ್ಟ್‌

ಪ್ರಸ್ತುತ ಜೀವನವು ದುಬಾರಿಯಾಗಿರುವ ಸಂದರ್ಭದಲ್ಲಿ ದುಡಿಯಲು ಸಾಮರ್ಥ್ಯ ಹೊಂದಿರುವ ಪತಿ, ಪತ್ನಿ ತನ್ನ ಮತ್ತು ಮಗುವಿನ ಆರೈಕೆ ಸಾಕಾಗುವಷ್ಟುದುಡಿಯುತ್ತಿದ್ದರೂ ಜೀವನಾಂಶ ಪಾವತಿಸಬೇಕು ಎಂದು ಅಭಿಪ್ರಾಯಪಟ್ಟಿದೆ.