Dharwad Car Catches Fire: ಧಾರವಾಡ ನಗರದಲ್ಲಿ ಚಲಿಸುತ್ತಿದ್ದ ಕಾರೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ತಕ್ಷಣವೇ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಾರವಾಡ (ಡಿ.27): ರಾಜ್ಯದಲ್ಲಿ ಡಿಸೆಂಬರ್ ತಿಂಗಳು ಗಂಡಾಂತರಕಾರಿಯಾಗಿ ಪರಿಣಮಿಸಿದೆ. ಕಳೆದ ಒಂದು ವಾರದಿಂದ ಬಸ್, ಮನೆ, ಅನಿಲ ಸ್ಫೋಟ ಹೀಗೆ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತಲೇ ಇವೆ. ಇಂದು ಈ ದುರಂತಗಳ ಸರಣಿಗೆ ಮತ್ತೊಂದು ಭೀಕರ ಘಟನೆ ಸೇರ್ಪಡೆಯಾಗಿದ್ದು, ಚಲಿಸುತ್ತಿದ್ದ ಕಾರು ಸುಟ್ಟು ಭಸ್ಮವಾಗಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ

ಧಾರವಾಡ ನಗರದ ಕೋರ್ಟ್ ವೃತ್ತದಿಂದ ಕೆಸಿಡಿ ಕಾಲೇಜಿನ ಕಡೆಗೆ ಹೊರಟಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನಗರದ ಎಲ್ಐಸಿ ಕಚೇರಿ ಹತ್ತಿರವಿರುವ ಎಸ್‌ಬಿಐ ಬ್ಯಾಂಕ್ ಬಳಿ ತಲುಪುತ್ತಿದ್ದಂತೆ ಕಾರಿನ ಎಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹೊಗೆ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಕಾರಿನಾದ್ಯಂತ ವ್ಯಾಪಿಸಿದೆ.

ಪ್ರಾಣಾಪಾಯದಿಂದ ಪಾರು

ಅಗ್ನಿ ಅವಘಡಕ್ಕೀಡಾದ ಕಾರು ನಿಜಾಮುದ್ದಿನ ಎಂಬುವರಿಗೆ ಸೇರಿದ್ದಾಗಿದ್ದು, ಅದರ ನಂಬರ್ GA 06 D 3919 ಎಂದು ತಿಳಿದುಬಂದಿದೆ. ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣ ಕಾರಿನಲ್ಲಿದ್ದ ಇಬ್ಬರು ತಕ್ಷಣವೇ ಕೆಳಗಿಳಿದಿದ್ದಾರೆ. ಇದರಿಂದಾಗಿ ದೊಡ್ಡ ಮಟ್ಟದ ಜೀವಹಾನಿ ತಪ್ಪಿದಂತಾಗಿದ್ದು, ಇಬ್ಬರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಡಿಸೆಂಬರ್‌ನಲ್ಲಿ ಅವಘಡಗಳ ಸರಣಿ

ರಾಜ್ಯದಲ್ಲಿ ಕಳೆದ ವಾರದಿಂದ ಅಗ್ನಿ ಅವಘಡಗಳ ಸರಣಿಯೇ ಮುಂದುವರಿದಿದೆ. ಎಲ್ಲಿ ನೋಡಿದರೂ ಬೆಂಕಿ, ಸಾವು-ನೋವುಗಳ ಸುದ್ದಿಯೇ ಕೇಳಿಬರುತ್ತಿದೆ. ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ರಾಜ್ಯದ ಪಾಲಿಗೆ 'ಗಂಡಾಂತರ'ದ ತಿಂಗಳಾಗಿ ಮಾರ್ಪಟ್ಟಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.