ಧಾರವಾಡದ ಶಿರಡಿ ನಗರದಲ್ಲಿ ಹುಚ್ಚು ನಾಯಿಯೊಂದು ದಾಳಿ ಮಾಡಿ 9 ಜನರನ್ನು ಗಾಯಗೊಳಿಸಿದೆ. ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಪಗೊಂಡ ಸ್ಥಳೀಯ ನಿವಾಸಿಗಳು, ಅಂತಿಮವಾಗಿ ನಾಯಿ ಹಿಡಿದು ಹೊಡೆದು ಕೊಂದಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ (ಜ.28): ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರಡಿ ನಗರದಲ್ಲಿ ಇಂದು ಬೆಳಿಗ್ಗೆಯಿಂದಲೇ ಹುಚ್ಚು ನಾಯಿಯೊಂದು ಅಟ್ಟಹಾಸ ಮೆರೆದಿದೆ. ದಾರಿಯಲ್ಲಿ ಹೋಗುತ್ತಿದ್ದವರ ಮೇಲೆ ಏಕಾಏಕಿ ದಾಳಿ ಮಾಡಿರುವ ನಾಯಿ, ಮಧ್ಯಾಹ್ನದ ವೇಳೆಗೆ ಒಟ್ಟು 9 ಜನರನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಇದರಿಂದ ಇಡೀ ಬಡಾವಣೆಯ ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿತ್ತು.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹುಚ್ಚು ನಾಯಿ ದಾಳಿಯಿಂದ ಶೀತಲ್ ಕಬಾಡಿ, ಗಂಗವ್ವ ಉಪ್ಪಾರ್ ಹಾಗೂ ಲಕ್ಷ್ಮೀ ಮಾದರ ಸೇರಿದಂತೆ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 6 ಜನರಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಉಳಿದ ಮೂವರು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪಂಚಾಯತಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ನಾಯಿ ಹಾವಳಿ ಬಗ್ಗೆ ಬೆಳಿಗ್ಗೆಯಿಂದಲೇ ಸ್ಥಳೀಯ ನಿವಾಸಿಗಳು ಕ್ಯಾರಕೊಪ್ಪ ಗ್ರಾಮ ಪಂಚಾಯತಿ ಸಿಬ್ಬಂದಿಗೆ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಪಂಚಾಯತಿಯವರ 'ಡೋಂಟ್ ಕೇರ್' ಪ್ರವೃತ್ತಿಯೇ ಇಷ್ಟೊಂದು ಜನರಿಗೆ ಗಾಯವಾಗಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ನಾಯಿಯನ್ನು ಹೊಡೆದು ಕೊಂದ ಜನರು
ಪಂಚಾಯತಿ ಸಿಬ್ಬಂದಿ ಬಾರದ ಹಿನ್ನೆಲೆಯಲ್ಲಿ ರೋಸಿಹೋದ ಸ್ಥಳೀಯರೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಹತ್ತಾರು ಜನರು ಒಟ್ಟುಗೂಡಿ ನಾಯಿಯನ್ನು ಬೆನ್ನಟ್ಟಿ, ಕಲ್ಲು ಹಾಗೂ ಕಬ್ಬಿಣದ ಸಲಕರಣೆಗಳಿಂದ ಹೊಡೆದು ಕೊಂದಿದ್ದಾರೆ. ಹುಚ್ಚು ನಾಯಿ ಸಾವನ್ನಪ್ಪಿದ ಬಳಿಕವಷ್ಟೇ ಶಿರಡಿ ನಗರದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.


