ಧರ್ಮಸ್ಥಳದ ಪಾಂಗಳ ಕ್ರಾಸ್‌ನಲ್ಲಿ ಯೂಟ್ಯೂಬ್ ವಿಡಿಯೋ ಮಾಡುತ್ತಿದ್ದವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಘಟನೆಯ ಬಳಿಕ ಪರ-ವಿರೋಧ ಗುಂಪುಗಳು ಸೇರಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ದಕ್ಷಿಣ ಕನ್ನಡ/ ಧರ್ಮಸ್ಥಳ (ಆ.06): ಧರ್ಮಸ್ಥಳದ ನೇತ್ರಾವದಿ ನದಿ ಬಳಿಯಿರುವ ಪಾಂಗಳ ಕ್ರಾಸ್‌ನಲ್ಲಿ ಯೂಟೂಬ್ ವಿಡಿಯೋ ಮಾಡುತ್ತಿದ್ದವರ ಮೇಲೆ ಸ್ಥಳೀಯರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಈ ಪಾಂಗಳ ಗ್ರಾಮ ಧರ್ಮಸ್ಥಳದಲ್ಲಿ ಹತ್ಯೆಗೀಡಾದ ಸೌಜನ್ಯಾಳ ಗ್ರಾಮ ಆಗಿದೆ. ಇಲ್ಲಿ ಯೂಟೂಬರ್‌ಗಳಾದ ಅಜಯ್, ಅಭಿಷೇಕ್, ಸಂತೋಷ್ ವಿಡಿಯೋ ಶೂಟ್ ಮಾಡುತ್ತಿದ್ದರು. ಆಗ ಸ್ಥಳಕ್ಕೆ ಬಂದ ಸ್ಥಳೀಯರು ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬವೊಂದರ ಮೇಲೆ ಸುಳ್ಳು ಆರೋಪ ಮಾಡಿ ವಿಡಿಯೋ ಮಾಡುತ್ತಿದ್ದೀರಿ ಎಂದು ಹಲ್ಲೆ ಮಾಡಿದ್ದಾರೆ.
ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ನಂತರ, ಅಲ್ಲಿ ಯೂಟೂಬರ್‌ಗಳ ಮೇಲೆ ಹಲ್ಲೆ ನಡೆದ ಘಟನೆ ನಡೆಯುತ್ತಿದ್ದಂತೆ ಪರ-ವಿರೋಧ ಎರಡೂ ಕಡೆಯ ಜನರು ಗುಂಪು ಸೇರಿದ್ದಾರೆ. ಆಗ ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಲು ಮುಂದಾಗಿದ್ದಾರೆ. ಆದರೂ, ಜನರು ಅಲ್ಲಿಂದ ತೆರಳದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅಲ್ಲಿಂದ ಜನರನ್ನು ಓಡಿಸಿದ್ದಾರೆ.
ಸೌಜನ್ಯಾಪರ ಹೋರಾಟದಲ್ಲಿ ಗುರುತಿಸಿಕೊಂಡ ಈ ಯೂಟೂಬರ್‌ಗಳು ಪಾಂಗಳ ಕ್ರಾಸ್‌ಗೆ ಬರುತ್ತಿದ್ದಂತೆ ಅಲ್ಲಿನ ಸ್ಥಳೀಯರು ಹಲ್ಲೆ ಮಾಡಿದ್ದ ಘಟನೆ ಇದೀಗ ಸುತ್ತಲಿನ ಗ್ರಾಮಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದ ನಂತರವೂ ಸುತ್ತಲಿನ ಗ್ರಾಮಸ್ಥರು ಬಂದು ಅಲ್ಲಿ ಜಮಾವಣೆ ಆಗುತ್ತಿದ್ದಾರೆ. ಜನರು ಸೇರದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರೂ, ಅವರನ್ನು ನಿಯಂತ್ರಣ ಮಾಡುವುದಕ್ಕೆ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಇನ್ನು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ.
ಇದೀಗ ಗಾಯಾಳುಗಳನ್ನು ಮಂಗಳೂರು ಹಾಗೂ ಉಜಿರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧರ್ಮಸ್ಥಳ ಭಾಗದಿಂದ ಬಂದ ಜನರು, ಪಾಂಗಳ ಗ್ರಾಮದ ಸೌಜನ್ಯಾ ಮನೆಗೆ ಕಲ್ಲು ತೂರಾಟ ಕೂಡ ನಡೆದಿದೆ ಎನ್ನಲಾಗುತ್ತಿದೆ. ಸೌಜನ್ಯಾ ಅವರ ಚಿಕ್ಕಪ್ಪನಿಗೆ ಸೇರಿದ ವಾಹನದ ಮೇಲೆ ಕಲ್ಲೆಸೆದು ಗಾಜು ಒಡೆದಿದ್ದಾರೆ. ಇನ್ನು ಯೂಟೂಬರ್‌ಗಳಿಗೆ ಸೇರಿದ ಓಮಿನಿ ವಾಹನವನ್ನೂ ಜಖಂ ಮಾಡಿದ್ದಾರೆ.
