ಧರ್ಮಸ್ಥಳದ ಸಾಮೂಹಿಕ ವಿವಾಹಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣವರ್ ವಿರುದ್ಧ ಮಹಿಳಾ ಭಕ್ತರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಟ್ಟಣ್ಣವರ್ ಹೇಳಿಕೆ ಸಾವಿರಾರು ಕುಟುಂಬಗಳ ಘನತೆಗೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು (ಆ.29): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟೆಣ್ಣವರ್ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಕಾವೇರಿ ಕೇದಾರನಾಥ್ ಮತ್ತು ಇತರ ಮಹಿಳೆಯರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರುದಾರರು, ಹತ್ತಕ್ಕೂ ಹೆಚ್ಚು ಮಹಿಳೆಯರ ಜೊತೆ ಆಗಮಿಸಿ ದೂರು ಸಲ್ಲಿಸಿದ ಕಾವೇರಿ ಕೇದಾರನಾಥ್, ಧರ್ಮಸ್ಥಳದಲ್ಲಿ ಸಾಮೂಹಿಕ ಮದುವೆಯಾಗುವ ಹೆಣ್ಣು ಮಕ್ಕಳ ಬಗ್ಗೆ ಗಿರೀಶ್ ಮಟ್ಟಣ್ಣವರ್ ಹೀನವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. 'ಧರ್ಮಸ್ಥಳದಲ್ಲಿ ಲಕ್ಷಾಂತರ ಜೋಡಿಗಳು ವಿವಾಹವಾಗಿ ಸುಖಕರ ಜೀವನ ನಡೆಸುತ್ತಿದ್ದಾರೆ. ಬಡವರು ಮಾತ್ರವಲ್ಲ, ಅನೇಕ ಭಕ್ತರು ಹರಕೆ ಹೊತ್ತು ಇಲ್ಲಿ ಮದುವೆಯಾಗುತ್ತಾರೆ. ಆದರೆ, ಮಟ್ಟೆಣ್ಣವರ್ ಈ ಮದುವೆಗಳ ಬಗ್ಗೆ ಮತ್ತು ಅಲ್ಲಿ ಮದುವೆಯಾದ ಮಹಿಳೆಯರ ಬಗ್ಗೆ ಹೀನವಾಗಿ ಮತ್ತು ಅವರ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಧರ್ಮಸ್ಥಳದಂತಹ ಪವಿತ್ರ ಸ್ಥಳ ಮತ್ತು ಇಲ್ಲಿ ಮದುವೆಯಾದ ಮಹಿಳೆಯರ ಬಗ್ಗೆ ಅಸಹ್ಯಕರವಾಗಿ ಮಾತನಾಡಿದ್ದು, ಇಡೀ ಭಕ್ತ ಸಮೂಹಕ್ಕೆ ನೋವುಂಟು ಮಾಡಿದೆ' ಎಂದು ತಿಳಿಸಿದರು.
ಮಹಿಳಾ ಭಕ್ತರು ದೂರಿನೊಂದಿಗೆ, ಗಿರೀಶ್ ಮಟ್ಟೆಣ್ಣವರ್ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ವೀಡಿಯೊ ತುಣುಕನ್ನು ಕೂಡ ಮಹಿಳಾ ಆಯೋಗಕ್ಕೆ ಒದಗಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಮತ್ತು ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸಿದವರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ಅವರು ಕೇವಲ ಬಡವರು ಮಾತ್ರವಲ್ಲ, ಹರಕೆ ಹೊತ್ತು ಧರ್ಮಸ್ಥಳದಲ್ಲಿ ಮದುವೆಯಾಗುವ ಅನೇಕ ಕುಟುಂಬಗಳ ಘನತೆಗೂ ಕುಂದುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹೀಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಗಿರೀಶ್ ಮಟ್ಟೆಣ್ಣವರ್ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಮಹಿಳಾ ಆಯೋಗವನ್ನು ಒತ್ತಾಯಿಸಿದ್ದಾರೆ. ಈ ವಿಷಯವು ರಾಜ್ಯಾದ್ಯಂತ ಧರ್ಮಸ್ಥಳದ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಮಹಿಳಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
