ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿದ ಬುರುಡೆ ಗ್ಯಾಂಗ್ ಸದಸ್ಯರಿಗೆ ಸಂಕಷ್ಟ ಹೆಚ್ಚಾಗುತ್ತಿದೆ. ಕೇಸ್ ಉಲ್ಟಾ ಹೊಡೆಯುತ್ತಿದ್ದಂತೆ ಸೈಲೆಂಟ್ ಆಗಿರುವ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಇದೀಗ ಮಾನವ ಹಕ್ಕು ಆಯೋಗದಲ್ಲಿ ದೂರು ದಾಖಲಾಗಿದೆ. 

ಬೆಂಗಳೂರು (ಆ.27) ಬುರುಡೆ ತೋರಿಸಿ ಧರ್ಮಸ್ಥಳ ವಿರುದ್ಧ ಗಂಭೀರ ಆರೋಪ ಮಾಡಿ ರಾಜ್ಯದ ಜನತೆಯನ್ನು ತಪ್ಪುದಾರಿಗೆ ಎಳೆದಿರುವ ಆರೋಪ ಎದುರಿಸುತ್ತಿರುವ ಬುರುಡೆ ಗ್ಯಾಂಗ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬುರುಡೆ ಕೇಸ್ ಉಲ್ಟಾ ಆಗುತ್ತಿದ್ದಂತೆ ಬುರುಡೆ ಗ್ಯಾಂಗ್ ಸದಸ್ಯರು ಕೋರ್ಟ್, ಜಾಮೀನು, ವಿಚಾರಣೆ ಎಂದು ಅಲೆಯುತ್ತಿದ್ದಾರೆ. ಇದರ ನಡುವೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಆರೋಪ ಹೊತ್ತಿರುವ ಗಿರೀಶ್ ಮಟ್ಟಣ್ಣನವರ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಾಗಿದೆ.

ರೌಡಿಶೀಟರ್‌ನ್ನು ಮಾನವ ಹಕ್ಕು ಆಯೋಗದವರು ಎಂದು ಸುಳ್ಳು ಹೇಳಿದ್ದ ಮಟ್ಟಣ್ಣನವರ್

ಗಿರೀಶ್ ಮಟ್ಟಣ್ಣನವರ್ ವಿರುದ್ಧ ಹಿಂದೂ ಮುಖಂಡ ಸುರೇಶ್ ಗೌಡ ದೂರು ದಾಖಲಿಸಿದ್ದಾರೆ. ಹುಬ್ಭಳ್ಳಿ ಮೂಲದ ರೌಡಿಶೀಟರ್ ಮದನ್ ಬುಗಾಡಿ ಎಂಬಾತನನ್ನು ಮಾನವ ಹಕ್ಕುಗಳ ಆಯೋಗದವರು ಎಂದು ಧರ್ಮಸ್ಥಳ ಪೊಲೀಸರಿಗೆ ಗಿರೀಶ್ ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಧರ್ಮಸ್ಥಳ ಪೊಲೀಸರ ಎದುರು ಸುಳ್ಳು ಹೇಳಿದ್ದಾರೆ. ಇಷ್ಟೇ ಅಲ್ಲ ಮಾನವ ಹಕ್ಕುಗಳ ಆಯೋಗದ ಹೆಸರನ್ನು ಬಳಸಿಕೊಂಡಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ.

ಗಿರೀಶ್ ಮಟ್ಟಣ್ಣನವರ್ ವಿರುದ್ದ ಸತತ ದೂರು

ಗಿರೀಶ್ ಮಟ್ಟಣ್ಣನವರ್ ವಿರುದ್ಧ ಸದ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಾಗಿದೆ. ಇದಕ್ಕೂ ಮೊದಲು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ತೆರಳಿದ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪದಡಿ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಸೇರಿದಂತೆ ಕೆಲ ಸದಸ್ಯರ ವಿರುದ್ದ ದೂರು ದಾಖಲಾಗಿದೆ. ಈ ಕುರಿತು ವಿಚಾರಣೆಗೆ ಹಾಜರಾಗಲು ಜಯಂತ್ ಟಿ ಸೇರಿದಂತೆ ಇತರರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಧರ್ಮಸ್ಥಳ ವಿರುದ್ಧ ಗಂಭೀರ ಆರೋಪ ಮಾಡಿರುವ ಗಿರೀಶ್ ಮಟ್ಟಣ್ಣನವರ್

ಗಿರೀಶ್ ಮಟ್ಟಣ್ಣನವರ್ ಧರ್ಮಸ್ಥಳ ವಿರುದ್ದ ಯೂಟ್ಯೂಬ್ ವಿಡಿಯೋ ಮೂಲಕ, ಕೆಲ ವೇದಿಕೆಗಳಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಧರ್ಮಸ್ಥಳ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಳವಲ್ಲ ಎಂದು ಆರೋಪಿಸಿದ್ದಾರೆ. ಧರ್ಮಸ್ಥಳ ಸಾಮೂಹಿಕ ಮದುವೆಯಾುವ ಜೋಡಿಗಳಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತದೆ ಎಂದು ಆರೋಪಿಸಿದ್ದಾರೆ. ಇನ್ನು ಧರ್ಮಸ್ಥಳದ ಆಟೋ ಚಾಲಕರು ಹೆಣ್ಣು ಮಕ್ಕಳನ್ನು ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗ್ಯಾಂಗ್ ಪ್ಲಾನ್ ಉಲ್ಟಾ

ಧರ್ಮಸ್ಥಳ ವಿರುದ್ಧ ಸೌಜನ್ಯ ಪ್ರಕರಣ ಹಿಡಿದು ಹೋರಾಟ ಮಾಡುತ್ತಿದ್ದ ಇದೇ ಬುರುಡೆ ಗ್ಯಾಂಗ್ ಬಳಿಕ ನೂರಾರು ಶವ ಹೂತಿಟ್ಟ ಪ್ರಕರಣ ಮೂಲಕ ತಮ್ಮ ಹೋರಾಟ ವಿಸ್ತರಿಸಲು ಮುಂದಾಗಿದ್ದರು. ಆದರೆ ಪ್ರಕರಣ ಕೆಲವೇ ದಿನಗಳಲ್ಲಿ ಉಲ್ಟಾ ಹೊಡೆದಿತ್ತು. ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ಅರೆಸ್ಟ್ ಆದ ಬಳಿಕ ನಡೆದ ಘಟನೆ ಹಾಗೂ ಸ್ಫೋಟಕ ಮಾಹಿತಿ ತೆರೆದಿಟ್ಟಿದ್ದಾನೆ. ಇತ್ತ ಅನನ್ಯಾ ಭಟ್ ನಾಪತ್ತೆ ಎಂದು ಬಂದ ಸುಜಾತಾ ಭಟ್ ತನಗೆ ಮಗಳೇ ಇರಲಿಲ್ಲ ಎಂದು ಹೇಳಿಕೆ ನೀಡಿ ಎಸ್ಐಟಿ ವಿಚಾರಣೆ ಎದುರಿಸುತ್ತಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್‌ಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಲು ಸಜ್ಜಾಗಿದ್ದಾರೆ.