ಧರ್ಮಸ್ಥಳದ ನೇತ್ರಾವತಿ ನದಿ ತೀರದ ಶವ ಹೂತಿಟ್ಟ ಪ್ರಕರಣದಲ್ಲಿ ಅನಾಮಿಕ ದೂರುದಾರರು 2 ಗಂಟೆ ತಡವಾಗಿ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ವಕೀಲರೊಂದಿಗೆ ಬಂದ ದೂರುದಾರರ ಮಾರ್ಗದರ್ಶನದಲ್ಲಿ 13ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ಆರಂಭವಾಗಲಿದೆ. ದೂರುದಾರನ ವಿಳಂಬದ ಕಾರಣ ತಿಳಿದಿಲ್ಲ.

ದಕ್ಷಿಣ ಕನ್ನಡ (ಆ.07): ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಶವ ಹೂತುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು (ಆ.07) ಉತ್ಖನನ ಕಾರ್ಯಾಚರಣೆಗಾಗಿ ಬೆಳಿಗ್ಗೆಯಿಂದಲೇ ಕಾಯುತ್ತಿದ್ದ ಅಧಿಕಾರಿಗಳಿಗೆ ಕೊನೆಗೂ ಸಮಾಧಾನ ಸಿಕ್ಕಿದೆ. ಪ್ರತಿ ದಿನಕ್ಕಿಂತ ಸುಮಾರು ಎರಡು ಗಂಟೆ ವಿಳಂಬವಾಗಿ ಅನಾಮಿಕ ದೂರುದಾರ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ.

ಖಾಸಗಿ ಕಾರಿನಲ್ಲಿ ವಕೀಲರೊಂದಿಗೆ ಆಗಮನ

ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನೀಡುತ್ತಿರುವ ದೂರುದಾರ, ಬೆಳಿಗ್ಗೆ 12 ಗಂಟೆಯಾದರೂ ಕಚೇರಿಗೆ ಬಾರದೇ ಇದ್ದುದರಿಂದ ಇಂದಿನ ಕಾರ್ಯಾಚರಣೆ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ, ಈಗ ಆತ ಖಾಸಗಿ ಕಾರಿನಲ್ಲಿ ತನ್ನ ವಕೀಲರ ತಂಡದೊಂದಿಗೆ ಎಸ್ಐಟಿ ಕಚೇರಿಗೆ ಹಾಜರಾಗಿದ್ದಾರೆ.

ದೂರುದಾರನ ಆಗಮನದಿಂದಾಗಿ ಇಂದಿನ ಸಮಾಧಿಯನ್ನು ಅಗೆದು ಶವ ಶೋಧ ಮಾಡುವ ಉತ್ಖನನ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಆದರೆ, ಆತ ಯಾಕೆ ವಿಳಂಬವಾಗಿ ಬಂದಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದೂರುದಾರನಿಗೆ 'ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್' ಅಡಿಯಲ್ಲಿ ಭದ್ರತೆ ನೀಡಲಾಗಿದ್ದು, ಈ ಕಾರಣದಿಂದ ಆತನಿಗೆ ಕೆಲವು ನಿರ್ದಿಷ್ಟ ಸ್ವಾತಂತ್ರ್ಯವನ್ನು ನೀಡಲಾಗಿದೆ. ಈ ಸ್ವಾತಂತ್ರ್ಯದ ನಡುವೆಯೂ, ದೂರುದಾರನ ಎಲ್ಲಾ ಚಟುವಟಿಕೆಗಳು ಪೊಲೀಸ್ ಕಣ್ಗಾವಲಿನಲ್ಲಿ ಇರುತ್ತವೆ.

ಈಗ ದೂರುದಾರ ಕಚೇರಿಗೆ ಬಂದಿರುವುದರಿಂದ, ಎಸ್ಐಟಿ ಅಧಿಕಾರಿಗಳು ಆತ ತೋರಿಸಿರುವ 13ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದು ಪ್ರಕರಣದ ಮುಂದಿನ ಹಂತದ ತನಿಖೆಗೆ ಮಹತ್ವದ ಪಾತ್ರ ವಹಿಸಲಿದೆ.