ಧರ್ಮಸ್ಥಳ ನೇತ್ರಾವತಿ ನದಿ ತೀರದ ಶವ ಹೂಳುವ ಪ್ರಕರಣದ 13ನೇ ಪಾಯಿಂಟ್ ಉತ್ಖನನ ಇಂದು ಸ್ಥಗಿತವಾಗುವ ಸಾಧ್ಯತೆಯಿದೆ. ದೂರುದಾರರು ಎಸ್ಐಟಿ ಕಚೇರಿಗೆ ಹಾಜರಾಗದ ಕಾರಣ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ದೂರುದಾರರ ಸಂಪರ್ಕಕ್ಕೆ ಪ್ರಯತ್ನ ಮುಂದುವರೆದಿದೆ.
ದಕ್ಷಿಣ ಕನ್ನಡ (ಆ.07): ನೇತ್ರಾವತಿ ನದಿ ತೀರದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು (ಆ.07) ನಡೆಯಬೇಕಿದ್ದ 13ನೇ ಪಾಯಿಂಟ್‌ನ ಉತ್ಖನನ ಕಾರ್ಯಾಚರಣೆಯು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಪ್ರಕರಣದ ಮುಖ್ಯ ದೂರುದಾರನಾದ ಅನಾಮಿಕ ವ್ಯಕ್ತಿ ಮಧ್ಯಾಹ್ನ 12 ಗಂಟೆ ಕಳೆದರೂ ಎಸ್ಐಟಿ ಕಚೇರಿಗೆ ಹಾಜರಾಗದೇ ಇರುವುದು ಇದಕ್ಕೆ ಕಾರಣವಾಗಿದೆ.
ದೂರುದಾರ ಇನ್ನೂ ಬಂದಿಲ್ಲ: ಅಧಿಕಾರಿಗಳಲ್ಲಿ ಗೊಂದಲ
ಇಂದಿನ ಕಾರ್ಯಾಚರಣೆಗಾಗಿ ಎಸ್ಐಟಿ ಅಧಿಕಾರಿಗಳು, ಸಹಾಯಕ ಆಯುಕ್ತರು (AC) ಸೇರಿದಂತೆ ಎಲ್ಲಾ ಸಂಬಂಧಿತ ಅಧಿಕಾರಿಗಳು ಈಗಾಗಲೇ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಿದ್ದಾರೆ. ದೂರುದಾರನು ತೋರಿಸಿದ 13ನೇ ಸ್ಥಳದಲ್ಲಿ ಉತ್ಖನನ ನಡೆಸಲು ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಈವರೆಗೆ ಅನಾಮಿಕ ದೂರುದಾರನ ಸುಳಿವೇ ಇಲ್ಲ.
ಕಳೆದ ವಾರಗಳಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆದು ಕೆಲವು ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಈಗ ದೂರುದಾರನೇ ಗೈರಾಗಿರುವುದರಿಂದ ಮುಂದಿನ ಕಾರ್ಯಚರಣೆ ನಡೆಸಲು ಅಧಿಕಾರಿಗಳಿಗೆ ತೊಡಕಾಗಿದೆ. ಇದು ಈ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯಾಚರಣೆ ನಡೆಯುವುದು ಅನುಮಾನವಾಗಿದೆ. ದೂರುದಾರನ ಸಂಪರ್ಕಕ್ಕಾಗಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆತ ಯಾಕೆ ಗೈರಾಗಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಉತ್ಖನನ ವಿಳಂಬ, ತಾಲೂಕು ಕಚೇರಿಗೆ ತೆರಳಿದ ಎಸಿ ಸ್ಟೆಲ್ಲಾ ವರ್ಗೀಸ್
ನೇತ್ರಾವತಿ ನದಿ ತೀರದ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆಯಬೇಕಿದ್ದ ಉತ್ಖನನ ಕಾರ್ಯಾಚರಣೆಯಲ್ಲಿ ವಿಳಂಬವಾಗಿದ್ದು, ಈ ನಡುವೆ ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲಾ ವರ್ಗೀಸ್ ಅವರು ಎಸ್ಐಟಿ ಕಚೇರಿಯಿಂದ ತಾಲೂಕು ಕಚೇರಿಗೆ ತೆರಳಿದ್ದಾರೆ. ಈ ಘಟನೆಯು ಪ್ರಕರಣದ ತನಿಖೆಯಲ್ಲಿ ಉಂಟಾಗಿರುವ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.
ಉತ್ಖನನ ವಿಳಂಬಕ್ಕೆ ಕಾರಣವೇನು?
ಸುಮಾರು ಒಂದೂವರೆ ಗಂಟೆಗಳ ಕಾಲ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿದ್ದ ಎಸಿ ಸ್ಟೆಲ್ಲಾ ವರ್ಗೀಸ್, ಇಂದು ಉತ್ಖನನ ಕಾರ್ಯ ಇದೆ ಎಂದು ಹೇಳಿದ್ದರೂ, ತಡವಾದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ಸ್ವಲ್ಪ ಕೆಲಸ ಇದೆ ಎಂದು ಹೊರಟಿದ್ದಾರೆ. ಉತ್ಖನನ ವಿಳಂಬದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, 'ವಿಳಂಬದ ಬಗ್ಗೆ ಎಸ್ಐಟಿಗೆ ಗೊತ್ತು, ನನಗೆ ಮಾಹಿತಿ ಇಲ್ಲ' ಎಂದು ಹೇಳಿ ತೆರಳಿದ್ದಾರೆ.
ಪ್ರಕರಣದ ದೂರುದಾರನ ಅನುಪಸ್ಥಿತಿಯಿಂದಾಗಿ ಉತ್ಖನನ ಕಾರ್ಯ ಆರಂಭವಾಗಿಲ್ಲ ಎಂದು ತಿಳಿದುಬಂದಿದೆ. ದೂರುದಾರನನ್ನು ಸಂಪರ್ಕಿಸಲು ಎಸ್ಐಟಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಗೊಂದಲದ ನಡುವೆಯೇ ಎಸಿ ಅವರು ಕಚೇರಿ ಬಿಟ್ಟು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂದಿನ ಉತ್ಖನನ ಕಾರ್ಯಕ್ಕಾಗಿ ಎಸ್ಐಟಿ ತಂಡ, ಪೊಲೀಸರು ಮತ್ತು ಇತರೆ ಅಧಿಕಾರಿಗಳು ಸಜ್ಜಾಗಿದ್ದರು. ಆದರೆ, ದೂರುದಾರ ಆಗಮಿಸದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಇದು ತನಿಖೆಯ ವೇಗಕ್ಕೆ ಅಡ್ಡಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ಮತ್ತಷ್ಟು ಮಾಹಿತಿ ನೀಡುವ ನಿರೀಕ್ಷೆಯಿದೆ.
