ನಂಬಿಕೆ ಎಂಬುದು ಬಹು ಸೂಕ್ಷ್ಮವಾದ ಸಂಗತಿ. ಅದು ಕನ್ನಡಿಯಿದ್ದಂತೆ. ಒಮ್ಮೆ ಅದು ಒಡೆದು ಹೋದರೆ ಮತ್ತೆ ಸರಿಪಡಿಸಲಾಗುವುದಿಲ್ಲ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಮೈಸೂರು (ಆ.30): ನಾಡಿನ ಪ್ರಸಿದ್ಧ ಶ್ರದ್ಧೆ ಹಾಗೂ ಭಕ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಧರ್ಮಸ್ಥಳ ಕ್ಷೇತ್ರವೂ ಒಂದು. ಅಂಥ ಕ್ಷೇತ್ರವನ್ನು ವಿವಾದಿತ ಕೇಂದ್ರದನ್ನಾಗಿಸಲು ಕೆಲವರು ಯತ್ನಿಸುತ್ತಿರುವುದು ವಿಷಾದನೀಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ. ನಂಬಿಕೆ ಎಂಬುದು ಬಹು ಸೂಕ್ಷ್ಮವಾದ ಸಂಗತಿ. ಅದು ಕನ್ನಡಿಯಿದ್ದಂತೆ. ಒಮ್ಮೆ ಅದು ಒಡೆದು ಹೋದರೆ ಮತ್ತೆ ಸರಿಪಡಿಸಲಾಗುವುದಿಲ್ಲ. ಒಂದು ಧಾರ್ಮಿಕ ಕ್ಷೇತ್ರದ ಮೇಲೆ ನಿರಂತರವಾಗಿ ಒಂದಲ್ಲ ಒಂದು ವಿವಾದವನ್ನು ಮುನ್ನೆಲೆಗೆ ತರುತ್ತಿರುವ ಪ್ರಯತ್ನಗಳು ಸೂಕ್ತವಾದುವಲ್ಲ ಎಂದು ತಿಳಿಸಿದ್ದಾರೆ.

ಧರ್ಮಸ್ಥಳ ಕರ್ನಾಟಕ ಮಾತ್ರವಲ್ಲದೇ ಜಗತ್ತಿನ ಅನೇಕ ಭಾಗಗಳ ಪರಂಪರಾಗತ ಸಹಬಾಳ್ವೆಗೆ ದ್ಯೋತಕವಾಗಿದೆ. ಅಲ್ಲಿ ಶಿವನನ್ನು ಪೂಜಿಸುವ ಅರ್ಚಕರು ವಿಷ್ಣು ಆರಾಧಕ ಮಾಧ್ವ ಸಂಪ್ರದಾಯದವರು. ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಜೈನ ಸಮುದಾಯದವರು. ಈ 3 ವಿಭಿನ್ನ ನಂಬಿಕೆಗಳು ಒಗ್ಗೂಡಿರುವ ಶ್ರೀಕ್ಷೇತ್ರದ ಮೂಲ ದೈವಕ್ಕೆ ಹೆಗ್ಗಡೆ ಕುಟುಂಬದ ಪರಂಪರೆಯವರೆಲ್ಲರೂ ಶ್ರದ್ಧಾ-ಭಕ್ತಿಗಳಿಂದ ನಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಇದು ಭಾವೈಕ್ಯತೆಗೆ ನಿಜವಾದ ತೋರುಗನ್ನಡಿ. ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಆದಷ್ಟು ಬೇಗ ಎಲ್ಲಾ ಕಾರ್ಮೋಡಗಳು ಕರಗಿ ಶಾಂತಿ-ನೆಮ್ಮದಿ ನೆಲೆಸುವಂತಾಗಲಿ ಎಂದು ಹಾರೈಸಿದ್ದಾರೆ.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಜನರ ಬದುಕನ್ನು ಸಮೃದ್ಧಗೊಳಿಸಿದ್ದು, ದೇವಾಲಯಗಳ ಜೀರ್ಣೋದ್ಧಾರ ಕೈಗೊಂಡಿದ್ದಾರೆ. 1972ರಿಂದಲೂ ಸಾಮೂಹಿಕ ವಿವಾಹ ನಡೆಸುತ್ತಿದ್ದಾರೆ. ಇಂತಹ ಪವಿತ್ರ ಕ್ಷೇತ್ರಕ್ಕೆ ಅಸಹಜ ಸಾವಿನ ಪ್ರಕರಣವನ್ನು ತಳಕು ಹಾಕಲು ಪ್ರಯತ್ನಿಸುವುದು ದುಡುಕಿನ ನಿರ್ಧಾರ. ಸತ್ಯ ಸದಾ ಮೌನಿ, ಸುಳ್ಳಿಗೆ ಆರ್ಭಟ ಜಾಸ್ತಿ. ಇಂಥ ಕೃತ್ಯಗಳನ್ನು ಸಮಗ್ರವಾಗಿ ತನಿಖೆ ಮಾಡಿ ಸತ್ಯವನ್ನು ಅನಾವರಣ ಮಾಡಬೇಕಾದುದು ಸರ್ಕಾರದ ಜವಾಬ್ದಾರಿ. ಆದಷ್ಟು ಶೀಘ್ರ ಕೂಲಂಕುಷವಾಗಿ ತನಿಖೆ ನಡೆಸಿ ಸತ್ಯವನ್ನು ಪತ್ತೆ ಹಚ್ಚಬೇಕು ಎಂದಿದ್ದಾರೆ.