ಧರ್ಮಸ್ಥಳ ಪ್ರಕರಣದ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮುಸುಕುದಾರಿ ಚಿನ್ನಯ್ಯನ ಜೊತೆ ಗ್ಯಾಂಗ್ ಬುರುಡೆ ಹಿಡಿದು ದೆಹಲಿಯಲ್ಲಿ ಕೆಲ ಪ್ರಮುಖರ ಭೇಟಿಯಾಗಿ ಮಾಸ್ಟರ್ ಪ್ಲಾನ್ ರೆಡಿ ಮಾಡಲಾಗಿತ್ತು.
ಧರ್ಮಸ್ಥಳ (ಆ.24) ಧರ್ಮಸ್ಥಳ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಬುರುಡೆ ಪ್ರಕರಣದ ಮೂಲಕ ಧರ್ಮಸ್ಥಳ ವಿರುದ್ದ ಷಡ್ಯಂತ್ರಕ್ಕೆ ಮುಂದಾಗಿದ್ದ ತಂಡದ ಅಸಲಿ ಕತೆಗಳು ಬಹಿರಂಗವಾಗುತ್ತಿದೆ. ದೂರುದಾರು ಮಸುಕುದಾರಿ ಚಿನ್ನಯ್ಯ ಬಂಧನದ ಬೆನ್ನಲ್ಲೇ ಬುರುಡೆ ಹಿಂದಿನ ಕತೆಗಳು ಹೊರಬರುತ್ತಿದೆ. ಇದೀಗ ಚಿನ್ನಯ್ಯ ತಂದಿದ್ದ ತಲೆಬುರುಡೆ ದೆಹಲಿಗೂ ಪ್ರಯಾಣ ಮಾಡಿತ್ತು ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಚಿನ್ನಯ್ಯನ ಜೊತೆ ಬುರುಡೆ ಹಿಡಿದು ಷಡ್ಯಂತ್ರ ಗ್ಯಾಂಗ್ ದೆಹಲಿಗೆ ತೆರಳಿ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ.
ದೆಹಲಿಗೆ ಬುರುಡೆ ತಗೆದುಕೊಂಡು ಹೋಗಿದ್ದ ಟೀಮ್
ಚಿನ್ನಯ್ಯ ಬುರುಡೆ ಹಿಡಿದು ಧರ್ಮಸ್ಥಳ ವಿರುದ್ಧ ಗಂಭೀರ ಆರೋಪ ಮಾಡಿದ್ದ. ಆದರೆ ಧರ್ಮಸ್ಥಳ ವಿರುದ್ಧ ಆರೋಪ ಮಾಡುವ ಮುನ್ನ ಚಿನ್ನಯ್ಯನ ಜೊತೆ ಗ್ಯಾಂಗ್ ಬುರುಡೆಯನ್ನು ಹಿಡಿದು ದೆಹಲಿಗೆ ತಲುಪಿತ್ತು. ದೆಹಲಿಯಲ್ಲಿ ಪ್ರತಿಷ್ಠಿತ ವ್ಯಕ್ತಿಯನ್ನು ಭೇಟಿಯಾಗಿ ಬುರುಡೆಯನ್ನು ತೋರಿಸಿ ಆರೋಪ ಮಾಡಿತ್ತು. ಧರ್ಮಸ್ಥಳದ ಸೌಜನ್ಯ ಪ್ರಕರಣ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟು ಬುರುಡೆ ದೂರು ಹಾಗೂ ಷಡ್ಯಂತ್ರವನ್ನು ಮತ್ತಷ್ಟು ಗಟ್ಟಿಗೊಳಿಸಲಾಗಿತ್ತು.
2 ವರ್ಷಗಳಿಂದ ಪ್ಲಾನ್
ಬುರುಡೆ ಪ್ರಕರಣವನ್ನು ಬರೋಬ್ಬರಿ 2 ವರ್ಷಗಳಿಂದ ಪ್ಲಾನ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸ್ವಚ್ಚತಾ ಕಾರ್ಮಿಕನ ಗುರುತಿಸಿ ಆತನಿಗೆ ಆರಂಭದಲ್ಲಿ ಮನಒಲಿಸಲು ಹಲವು ಬೇಡಿಕೆ ಇಡಲಾಗಿದೆ.ಬಳಿಕ ಬೆದರಿಕೆಯನ್ನು ಹಾಕಲಾಗಿದೆ. ಹೀಗಾಗಿ ಗ್ಯಾಂಗ್ ಪ್ಲಾನ್ ರೀತಿಯಲ್ಲೇ ಮುಸುಕುದಾರಿ ಚಿನ್ನಯ್ಯ ಆರೋಪ ಮಾಡಿ ಇದೀಗ ಅರೆಸ್ಟ್ ಆಗಿದ್ದಾನೆ.
ಜುಲೈ 11ಕ್ಕೆ ನ್ಯಾಯಾಲಕ್ಕೆ ಹಾಜರಾಗಿದ್ದ ಚಿನ್ನಯ್ಯ
ದೆಹಲಿಯಿಂದ ಬಂದ ಬಳಿಕ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ದೂರುದಾರ ಚಿನ್ನಯ್ಯ ಬುರುಡೆಯೊಂದಿಗೆ ಪ್ರತ್ಯಕ್ಷನಾಗಿದ್ದ. ಬಳಿಕ ವಕೀಲರ ತಂಡ ಈತನಿಗೆ ನೆರವು ನೀಡಿತ್ತು. ಜುಲೈ 11ಕ್ಕೆ ನ್ಯಾಯಾಲಯಕ್ಕೆ ಹಾಜರಾದ ಮುಸುಕುದಾರಿ ದೂರುದಾರ ಬುರುಡೆ ಹಿಡಿದುಕೊಂಡು 164 ಸ್ಟೇಟ್‌ಮೆಂಟ್ ನೀಡಿದ್ದ. ನ್ಯಾಯಾಧೀಶರ ಮುಂದೆ ತಾನು ಧರ್ಮಸ್ಥಳದ ಮಾಜಿ ಸ್ವಚ್ಚತಾ ನೌಕರ. ತನ್ನ ಕೆಲಸದ ಅವಧಿಯಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ. ಬಹುತೇಕ ಮಹಿಳೆ ಹಾಗೂ ಮಕ್ಕಳ ಶವಗಳು. ಎಲ್ಲವೂ ಅನುಮಾನಸ್ಪದ ಸಾವು ಪ್ರಕರಣವಾಗಿದೆ. ಈ ಪೈಕಿ ಮಕ್ಕಳು ಹಾಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿತ್ತು ಎಂದು ಹೇಳಿಕೆ ನೀಡಿದ್ದ. ಈ ಪೈಕಿ ಒಂದು ಬುರುಡೆಯನ್ನು ತಾನು ತಂದಿದ್ದೇನೆ. ನನಗೆ ಪಾಪ ಪ್ರಜ್ಞೆ ಕಾಡಿ ಈ ರೀತಿ ಮಾಡಿದ್ದಾನೆ. ಬುರುಡೆ ತಂದಿರುವುದಕ್ಕೆ ತನಗೆ ಶಿಕ್ಷೆ ನೀಡಿದರೂ ನಾನು ಎದುರಿಸಲು ಸಿದ್ಧ. ಆದರೆ ಮೃತಪಟ್ಟವರಿಗೆ ನ್ಯಾಯ ಸಿಗಬೇಕು ಅನ್ನೋ ಕಾರಣದಿಂದ ಇದೀಗ ಬಯಲು ಮಾಡುತ್ತಿದ್ದೇನೆ. ನನಗೆ ಜೀವಬೆದರಿಕೆ ಇದೆ. ಸೂಕ್ತ ರಕ್ಷಣೆ ಒದಗಿಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದ.
ಬುರಡೆಯಿಂದ ಪ್ರಕರಣ ಮತ್ತಷ್ಟು ಗಂಭೀರ
ಬುರಡೆ ಕೈಯಲ್ಲಿ ಹಿಡಿದು ತಾನೇ ಹಲವು ಶವಗಳನ್ನು ಹೂತುಹಾಕಿದ್ದೇನೆ ಎಂದು ಗಂಭೀರ ಆರೋಪ ಮಾಡಿದ್ದ ಕಾರಣ ಬರುಡೆ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಎಸ್ಐಟಿ ತನಿಖೆಯಲ್ಲಿ ಇದೀಗ ಎಲ್ಲಾ ಷಡ್ಯಂತ್ರಗಳು ಬಯಲಾಗುತ್ತಿದೆ. ವ್ಯವಸ್ಥಿತವಾಗಿ ಮಾಡಿದ್ದ ಪ್ಲಾನ್ ಹೊರಬರುತ್ತಿದೆ.
