ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ಮಹಜರು ವೇಳೆ ಬಂಗ್ಲೆಗುಡ್ಡದಲ್ಲಿ ದೊರೆತ ಏಳು ತಲೆ ಬುರುಡೆ, ಅಸ್ಥಿಪಂಜರದ ಕುರುಹು ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ಎಸ್‌ಐಟಿ ಸಿದ್ಧತೆ ನಡೆಸಿದೆ.
ಮಂಗಳೂರು/ ಬೆಳ್ತಂಗಡಿ (ಸೆ.21): ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ಮಹಜರು ವೇಳೆ ಬಂಗ್ಲೆಗುಡ್ಡದಲ್ಲಿ ದೊರೆತ ಏಳು ತಲೆ ಬುರುಡೆ, ಅಸ್ಥಿಪಂಜರದ ಕುರುಹು ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ಎಸ್‌ಐಟಿ ಸಿದ್ಧತೆ ನಡೆಸಿದೆ. ಈ ನಡುವೆ ಅಲ್ಲಿ ಸಿಕ್ಕ 1 ಅಸ್ಥಿಪಂಜರ ಕೊಡಗು ಮೂಲದ ಯು.ಬಿ.ಅಯ್ಯಪ್ಪ ಅವರದ್ದು ಎಂದು ಖಚಿತವಾಗಿದ್ದು, ಶನಿವಾರ ಅವರ ಮಗನ ವಿಚಾರಣೆ ನಡೆಸಲಾಗಿದೆ.
ಬಂಗ್ಲೆಗುಡ್ಡ ಅರಣ್ಯದಲ್ಲಿ ದೊರೆತ ಒಂದು ಅಸ್ಥಿಪಂಜರದ ಬಳಿ ಗುರುತಿನ ಚೀಟಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಹೊರತುಪಡಿಸಿ ಉಳಿದ ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ಅವುಗಳನ್ನು ಎಸ್‌ಐಟಿ ತಂಡ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಿದೆ. ಅಲ್ಲದೇ ಆ ಜಾಗದಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಯಾರದ್ದು ಎಂದು ಗುರುತು ಹಚ್ಚಲು ಎಸ್‌ಐಟಿ ದೂರು ದಾಖಲಿಸಲಿದೆ.
ಒಂದು ಅಸ್ಥಿಪಂಜರದ ಬಳಿ ಗುರುತಿನ ಚೀಟಿ ಮತ್ತು ವಾಕಿಂಗ್ ಸ್ಟಿಕ್ ಪತ್ತೆಯಾಗಿತ್ತು. ಇದು ಕೊಡಗು ಮೂಲದ ಯು.ಬಿ.ಅಯ್ಯಪ್ಪ ಅವರದ್ದು ಎಂಬುದು ಬಹುತೇಕ ಖಚಿತಗೊಂಡಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಅಯ್ಯಪ್ಪ ಅವರ ಪುತ್ರ ಜೀವನ್ ಶನಿವಾರ ಬೆಳ್ತಂಗಡಿ ಎಸ್ಐಟಿ ಠಾಣೆಗೆ ಆಗಮಿಸಿದ್ದರು. ಈ ವೇಳೆ ಜೀವನ್‌ರಿಂದ ತಂದೆಯ ನಾಪತ್ತೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕಿದೆ.
ಕೇಸ್‌ನಲ್ಲಿ ಷಡ್ಯಂತ್ರ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ಸಂಬಂಧ ಮೂಲ ದೂರುದಾರ ಚಿನ್ನಯ್ಯ ಸಾಕಷ್ಟು ಸುಳ್ಳು ಹೇಳಿರುವುದು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಅರ್ಥವಾಗಿದೆ. ಇದರ ಹಿಂದೆ ಷಡ್ಯಂತ್ರ ಇದ್ದು, ಯಾವ ಕಾರಣಕ್ಕಾಗಿ ಮಾಡಲಾಯಿತು ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ರಾಜ್ಯ ಸರ್ಕಾರದ ಅಭಿಯೋಜಕರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಧರ್ಮಸ್ಥಳದಲ್ಲಿ ತಾವು ತೋರಿಸುವ ಸ್ಥಳಗಳಲ್ಲಿ ಉತ್ಖನನ ನಡೆಸಲು ಎಸ್‌ಐಟಿಗೆ ಸೂಚನೆ ನೀಡಬೇಕು ಎಂದು ಕೋರಿ ಧರ್ಮಸ್ಥಳ ಗ್ರಾಮದ ಪಂಗಳ ಮನೆಯ ಪುರಂದರ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠಕ್ಕೆ ಸರ್ಕಾರದ (ಎಸ್‌ಐಟಿ) ಪರ ವಾದ ಮಂಡಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಈ ವಿಷಯ ತಿಳಿಸಿದರು.
ಕೆಲ ಸಮಯ ಅರ್ಜಿದಾರರ ಮತ್ತು ಸರ್ಕಾರಿ ಅಭಿಯೋಜಕರ ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿ ಮೂಲ ದೂರುದಾರನಾಗಿದ್ದ ಸಿ.ಎನ್.ಚಿನ್ನಯ್ಯ ಆರೋಪಿಯಾಗಿದ್ದಾರೆ. ಹಾಗಾಗಿ, ಆತನ ಬಳಿಯಿದ್ದ ಮಾಹಿತಿಗೆ ಹೊರತಾದ ಹೆಚ್ಚಿನ ಮಾಹಿತಿ/ದಾಖಲೆಯಿದ್ದಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ಸೂಚಿಸಿ ಸೆ.26ಕ್ಕೆ ವಿಚಾರಣೆ ಮುಂದೂಡಿತು.


