ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾನೂನು ತನ್ನ ಕೆಲಸ ಮಾಡಲಿ ಎಂದರು. ಬಿಜೆಪಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವುದನ್ನು ಟೀಕಿಸಿದ ಅವರು, ಬಿಜೆಪಿ ಘಟನೆಗಳನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದರು.
ಚಿತ್ರದುರ್ಗ (ಆ.16): ಧರ್ಮಸ್ಥಳ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸೋಲ್ಲ. ಕಾನೂನು ಬೇಗ ತೀರ್ಮಾನ ಮಾಡಿ ಪ್ರಕರಣವನ್ನ ಇತ್ಯರ್ಥ ಪಡಿಸಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಧರ್ಮಸ್ಥಳ ಪ್ರಕರಣ ಸಂಬಂಧ ಇಂದು ಚಿತ್ರದುರ್ಗ ಜಿಲ್ಲೆಯ ತಾಳವಟ್ಟಿ ಗ್ರಾಮದಲ್ಲಿ ಮಾತನಾಡಿದ ಸಚಿವರು, ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ಅವರ ಮೇಲೆ ನನಗೆ ಅಪಾರ ಗೌರವವಿದೆ ಎಂದರು.
ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ:
ಧರ್ಮಸ್ಥಳಕ್ಕೆ ಬಿಜೆಪಿಯಿಂದ ಪಾದಯಾತ್ರೆ ವಿಚಾರಕ್ಕೆ ಕಿಡಿಕಾರಿದ ಸಚಿವರು, ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಇದೊಂದು ವಿಚಾರದಲ್ಲಂತಲ್ಲ. ಯಾವುದೇ ಘಟನೆ ನಡೆದರೂ ಬೆಂಕಿ ಹಚ್ಚುವ ಕೆಲಸ ಮಾಡ್ತಾರೆ. ಹಿಂದೆ ಆಪರೇಷನ್ ಸಿಂದೂರ್ ನಲ್ಲಿ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಯಾಕೆ ಅನಾಥರಾದರು ಎಂದು ಬಿಜೆಪಿಯವರು ನೋಡಲಿ. ಸಿಂದೂರ್ ಅಂತಾ ಹೆಸರಿಟ್ಟು ಎಲ್ಲಾ ಸಾವು ಆದ್ಮೆಲೆ ಬಂದು ಭಾಷಣ ಮಾಡ್ತಾರೆ.
ಎಲ್ಲ ಆದ ಬಳಿಕ ಬಂದು ಭಾಷಣ ಮಾಡಿ ಬೆಂಕಿ ಹಚ್ಚುವ ಕೆಲಸ ಬಿಜೆಪಿಯವರು ಮಾಡ್ತಾರೆ. ಯಾಕೆ ಪ್ರಕರಣ ನಡೆಯಿತೆಂದು ಯಾವನಾದರೂ ಬಿಜೆಪಿಯವನು ಮಾತನಾಡಿದ್ದಾನಾ? ಬಿಜೆಪಿಯವ್ರಿಗೆ ಕಾಮನ್‌ಸೆನ್ಸ್ ಇದೆಯಾ? ಘಟನೆ ನಡೆದ ವೇಳೆ ಪಹಲ್ಗಾಂನಲ್ಲಿ ಒಬ್ಬರೂ ಪೊಲೀಸ್ ಇರಲಿಲ್ಲ, ಪ್ರವಾಸಿಗರಿಗೆ ರಕ್ಷಣೆಯೇ ಇರಲಿಲ್ಲ. ಆ ಜಾಗದಲ್ಲಿ ಬಿಜೆಪಿಯವರ ಅಕ್ಕ-ತಂಗಿಯರು ಇದ್ದಿದ್ರೆ? ಅವರಿಗೆ ಅದೇ ಗತಿ ಆಗಿದ್ರೆ? ಬೇರೆಯವರ ಸಾವಿನಲ್ಲಿ ರಾಜಕೀಯ ಮಾಡ್ತಾರೆ, ಸಂಭ್ರಮಿಸ್ತಾರೆ. ಮತಗಳವು, ಸಾವಿನಲ್ಲಿ ಸಂಭ್ರಮ ಇದು ಬಿಜೆಪಿಯವರ ನೀಚ ಬುದ್ಧಿ ತೋರಿಸುತ್ತದೆ. ನಾವು ಇನ್ಮೇಲೆ ಇವರ ಕುತಂತ್ರಗಳನ್ನ ಸಹಿಸಿಕೊಳ್ಳಬಾರದು, ಹಿಂದೆ ಮುಂದೆ ನೋಡದೇ ಖಂಡಿಸಬೇಕು ಎಂದರು.
