ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್‌ನಲ್ಲಿ ಹೇಳಿಕೆ ನೀಡಲಿದ್ದಾನೆ. ಈ ಹಿಂದೆ ಹಣದಾಸೆಗೆ ಸುಳ್ಳು ಹೇಳಿದ್ದಾಗಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದ ಎಂದು ಮಾಜಿ ಮೇಲ್ವಿಚಾರಕ ಸುಂದರ ಗೌಡರು ಬಹಿರಂಗಪಡಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮಂಗಳೂರು (ಸೆ.27): ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನಿಂದ ಬಿಎನ್‌ಎಸ್‌ಎಸ್ 183 ಹೇಳಿಕೆ ದಾಖಲಿಸುವ ಮುಂದಿನ ಹಂತದ ಪ್ರಕ್ರಿಯೆ ಶನಿವಾರ ಬೆಳ್ತಂಗಡಿ ಕೋರ್ಟ್‌ನಲ್ಲಿ ನಡೆಯಲಿದೆ.
ಈ ಹಿಂದೆ ಎರಡು ಬಾರಿ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್‌ಗೆ ಬಂದು ನ್ಯಾಯಾಧೀಶರ ಎದುರು ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದ. ಗುರುವಾರ 2ನೇ ಬಾರಿಗೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಶನಿವಾರವೂ ಬೆಳ್ತಂಗಡಿ ಕೋರ್ಟ್‌ಗೆ ಆಗಮಿಸಲಿದ್ದಾನೆ. ಪ್ರಸ್ತುತ ಶಿವಮೊಗ್ಗ ಜೈಲಿನಲ್ಲಿರುವ ಈತನನ್ನು ಶನಿವಾರ ಬೆಳಗ್ಗೆ ಭದ್ರತೆಯೊಂದಿಗೆ ಬೆಳ್ತಂಗಡಿಗೆ ಕರೆ ತರಲಾಗುತ್ತದೆ.
ಇದನ್ನೂ ಓದಿ: ಸುಪ್ರೀಂ ಮುಖಭಂಗ ಬಚ್ಚಿಟ್ಟು ದೂರಿತ್ತಿದ್ದ ಬುರುಡೆ ಟೀಮ್!
ಹಣಕ್ಕಾಗಿ ಈ ರೀತಿ ಮಾಡಿದೆ ಎಂದಿದ್ದ ಚಿನ್ನಯ್ಯ: ಸುಂದರ
ಧರ್ಮಸ್ಥಳ ಸ್ನಾನಘಟ್ಟದ ಹಿಂದಿನ ಸೂಪರ್ ವೈಸರ್ ಸುಂದರ ಗೌಡ ಅವರು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಜತೆಗೆ ಮಾತನಾಡಿದ್ದು, ಚಿನ್ನಯ್ಯನ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದ್ದಾರೆ.
ಇತ್ತೀಚೆಗೆ ಎಸ್ಐಟಿ ನನ್ನನ್ನು ವಿಚಾರಣೆಗೆ ಕರೆದಾಗ ನನ್ನ ಹಾಗೂ ಚಿನ್ನಯ್ಯನನ್ನು ಎದುರು- ಬದುರು ಕೂರಿಸಿ ವಿಚಾರಣೆ ಮಾಡಿದ್ದಾರೆ. ಆಗ ಚಿನ್ನಯ್ಯ ನನ್ನ ಕಾಲಿಗೆ ಬಿದ್ದು ತಪ್ಪಾಯ್ತು ಅಂದಿದ್ದ. ನಾನು ಹಣದ ಆಸೆಗೆ ಈ ರೀತಿ ಮಾಡಿದೆ ಅಂತ ಕಣ್ಣೀರು ಹಾಕಿದ. ಷಡ್ಯಂತ್ರ ನಡೆದಿದೆ, ನಾನು ಹಣಕ್ಕಾಗಿ ಸುಳ್ಳು ಹೇಳಿದೆ ಅಂದ. ನಾನು ನನ್ನ ಹೇಳಿಕೆ ಕೊಟ್ಟು ಬಂದಿದ್ದೇನೆ, ನಾವು ತಪ್ಪು ಮಾಡಿಲ್ಲ ಎಂದರು.
1995ರಿಂದ 2000ವರೆಗೆ ನಾನು ಧರ್ಮಸ್ಥಳ ಸ್ನಾನಘಟ್ಟದಲ್ಲಿ ಇದ್ದೆ. ಆಗ ಈ ಚಿನ್ನಯ್ಯ ಹಾಗೂ ಆತನ ಕುಟುಂಬ ಕೂಡ ಸ್ವಚ್ಛತಾ ಕೆಲಸ ಮಾಡ್ತಿತ್ತು. ಚಿನ್ನಯ್ಯ ನಡತೆಯಲ್ಲಿ ಅಷ್ಟು ಸರಿ ಇದ್ದ ಮನುಷ್ಯ ಅಲ್ಲ. ನದಿಯಲ್ಲಿ ಮೃತದೇಹ ಸಿಕ್ಕಾಗ ಯಾತ್ರಿಕರು ನನ್ನ ಗಮನಕ್ಕೆ ತರುತ್ತಿದ್ದರು. ಆಗ ನಾವು ಮಾಹಿತಿ ಕಚೇರಿಗೆ ತಿಳಿಸುತ್ತಿದ್ದೇವು. ಆಗ ಪೊಲೀಸರು ಬರುತಿದ್ದರು. ಆಗ ಚಿನ್ನಯ್ಯ ಹೆಣ ಎತ್ತಿ ಕೊಡುವ ಕೆಲಸ ಮಾತ್ರ ಮಾಡುತ್ತಿದ್ದ. ಬಳಿಕ ಬೆಳ್ತಂಗಡಿ ಆಸ್ಪತ್ರೆಗೆ ಹೋಗಿ ಮುಂದಿನ ಕೆಲಸವನ್ನು ಪೊಲೀಸರೇ ಮಾಡ್ತಿದ್ರು. ನಾವಾಗಲಿ, ಚಿನ್ನಯ್ಯ ಆಗಲಿ ಯಾವುದೇ ಮೃತದೇಹ ಹೂಳುತ್ತಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರ ಮೂಲ ಪತ್ತೆ; ತುಮಕೂರು ಬಾರ್ ಕ್ಯಾಶಿಯರ್ ಸುಳಿವು ಕೊಟ್ಟ ಡಿಎಲ್!
ಚಿನ್ನಯ್ಯ ಮತ್ತು ವಿಠಲನಿಗೆ ಸಂಪರ್ಕ ಇದ್ದಿರಬಹುದು, ಅಲ್ಲೇ ವಿಠಲನ ಅಂಗಡಿ ಕೂಡ ಇತ್ತು ಎಂದು ಇದೇ ವೇಳೆ ಅವರು ಹೇಳಿದ್ದಾರೆ.


