ಧರ್ಮ​ಸ್ಥ​ಳ : ಶ್ರೀ ಕ್ಷೇತ್ರ ಧರ್ಮ​ಸ್ಥ​ಳದ ರತ್ನ​ಗಿ​ರಿ​ಯ​ಲ್ಲಿ​ರುವ ವಿರಾಟ್‌ ವಿರಾಗಿ ಭಗವಾನ್‌ ಬಾಹು​ಬಲಿ ಸ್ವಾಮಿಗೆ 12 ವರ್ಷ​ಗಳ ಬಳಿಕ ಆಯೋ​ಜಿ​ಸ​ಲಾ​ಗಿ​ರು​ವ ಚತುರ್ಥ ಮಸ್ತ​ಕಾ​ಭಿ​ಷೇಕ ಪ್ರಧಾನ ಕಾರ್ಯ​ಕ್ರಮಗಳು ಫೆ.15ರ  ಶನಿ​ವಾ​ರ​ ಪ್ರಾರಂಭಗೊಳ್ಳಲಿದ್ದು, ಸೋಮ​ವಾ​ರದ ತನಕ ನಡೆ​ಯ​ಲಿ​ವೆ.

ಶನಿ​ವಾರ ಬೆಳಗ್ಗೆ 6.30ರಿಂದ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ, 8.45ರಿಂದ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಗೆ ಚತುರ್ಥ ಮಹಾ ಮಸ್ತಕಾಭಿಷೇಕ ನಡೆ​ಯಲಿದೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕುಟುಂಬಸ್ಥರಿಂದ ಹಾಗೂ ಶ್ರಾವಕರಿಂದ ಬಾಹುಬಲಿ ಸ್ವಾಮಿಗೆ ಪ್ರಥಮ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆ​ಯಲಿದೆ.

ಶ್ರೀ 108 ವರ್ಧ​ಮಾನ ಸಾಗ​ರಜೀ ಮುನಿ ಮಹಾ​ರಾ​ಜರ ಸಾನ್ನಿಧ್ಯ ಹಾಗೂ ನೇತೃ​ತ್ವ​ದಲ್ಲಿ ಕಾರ್ಯ​ಕ್ರ​ಮ​ಗಳು ನಡೆ​ಯ​ಲಿವೆ. ಶ್ರೀ ವಾತ್ಸ​ಲ್ಯ​ವಾ​ರಿಧಿ 108 ಪುಷ್ಪ​ದಂತ ಸಾಗರ ಮುನಿ ಮಹಾ​ರಾ​ಜರು ಉಪ​ಸ್ಥಿ​ತ​ರಿ​ರು​ವರು. ಶ್ರವ​ಣ​ಬೆ​ಳ​ಗೊಳ ಜೈನ ಮಠದ ಶ್ರೀ ಚಾರು​ಕೀರ್ತಿ ಭಟ್ಟಾರ​ಕರು ಮಾರ್ಗ​ದ​ರ್ಶ​ನ ನೀಡು​ವರು. ಕಾರ್ಕ​ಳದ ಶ್ರೀ ಲಲಿ​ತ​ಕೀರ್ತಿ ಭಟ್ಟಾ​ರಕ ಸ್ವಾಮೀಜಿ ದಿವ್ಯ ಉಪ​ಸ್ಥಿ​ತಿ​ಯಲ್ಲಿ ಧಾರ್ಮಿಕ ಕಾರ್ಯ​ಕ್ರ​ಮ​ಗಳು ನಡೆ​ಯ​ಲಿವೆ. ಸಂಜೆ ಧ್ವಜ ಪೂಜೆ, ಶ್ರೀ ಬಲಿ ವಿಧಾನ, ಮಹಾಮಂಗಳಾರತಿ ಕಾರ್ಯ​ಕ್ರ​ಮ​ಗಳು ನಡೆ​ಯ​ಲಿವೆ.

ವಿವಿಧ ಗ್ರಂಥ ಲೋಕಾರ್ಪಣೆ:

ಗುರುವಾರ ವಿವಿಧ ಜೈನ ಗ್ರಂಥಗಳ ಲೋಕಾರ್ಪಣೆ ಆಯಿತು. ಪಂಚಮಹಾವೈಭದಲ್ಲಿ ಬಾಹುಬಲಿಯ ಯುದ್ಧ ಘೋಷಣೆ, ಭರತ ಮತ್ತು ಬಾಹುಬಲಿ ನಡುವೆ ಧರ್ಮಯುದ್ಧದ ಸನ್ನಿವೇಶ ನಡೆಯಿತು. ಇದೇ ವೇಳೆ ನಿರಂತರ ಆರನೇ ದಿನವೂ ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿಗೆ 216 ಕಲಶಗಳ ಪಾದಾಭಿಷೇಕ ನೆರವೇರಿತು. ಈ ಸಂದರ್ಭದಲ್ಲಿ ಬಾಹುಬಲಿ ಗೀತಾಂಜಲಿ ಭಾಗ-2 ಜೈನ ಧರ್ಮ ಕುರಿತ ಕೃತಿ ಆಚಾರ್ಯ ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿ ಮಹಾರಾಜ್‌ ಲೋಕಾರ್ಪಣೆಗೊಳಿಸಿದರು. ಕೊಲ್ಲಾಪುರ ನಾಂದಿನಿ ತೇರದಾಳ ಜೈನಮಠದ ಶ್ರೀ ಜಿನಸೇನ ಭಟ್ಟಾರಕ ಪಟ್ಟಾರಕ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ ವಿವಿಧ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿದರು. ನಾಡೋಜ ಡಾ.ಹಂ.ಪ.ನಾಗರಾಜಯ್ಯ ಇದ್ದ​ರು.

ಗಾಳಿಗೆ ಚಪ್ಪರ ಕುಸಿದು ನಾಲ್ವರಿಗೆ ಗಾಯ

ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದ ಹಿಂಭಾಗದಲ್ಲಿ ಆದಿನಾಥ ಮಹಾರಾಜನಿಂದ ಬಾಹುಬಲಿ ವೈರಾಗ್ಯವರೆಗಿನ ಕಥಾನಕ ಪಂಚ ಮಹಾವೈಭವ ದೃಶ್ಯರೂಪಕದ ಬೃಹತ್‌ ಪೆಂಡಾಲ್‌ ಗುರುವಾರ ಮಧ್ಯಾಹ್ನ ನಂತರ ಬೀಸಿದ ಗಾಳಿಗೆ ಧರಾಶಾಹಿಯಾಗಿದೆ. ಈ ವೇಳೆ ಪೆಂಡಾಲಿನಲ್ಲಿ ಇದ್ದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರಿಗೆ ಸಣ್ಣಪುಟ್ಟಗಾಯಗಳಾ​ಗಿ​ವೆ. ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಇದ್ದುದರಿಂದ ತಕ್ಷಣದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಸುಮಾರು ಐದಾರು ಲಕ್ಷ ರು. ಮೌಲ್ಯದ ಅತ್ಯಾಧುನಿಕ ಐದು ಸೌಂಡ್‌ ಸಿಸ್ಟಮ್, ಎಲ್‌ ಇಡಿ ಬಲ್ಬ್​ಗಳು ನಾಶಗೊಂಡಿವೆ. ಅರಮನೆಯ ಅಲಂಕಾರ, ವೇದಿಕೆಯೂ ಸಂಪೂರ್ಣ ನಾಶವಾಗಿದೆ.

ಒಂದು ಗಂಟೆ ಮುಂಚೆ ಆಗಿದ್ದರೆ ಎಲ್ಲರೂ ಅಲ್ಲಿರುತ್ತಿದ್ದರು. ಆ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ದೈವ ಮಹಾದುರಂತವನ್ನು ತಪ್ಪಿಸಿದ್ದಾರೆ. 20 ದಿನದ ಹಿಂದೆಯೇ ಮನದಲ್ಲಿ ಒಂದು ಶಂಕೆ ಮೂಡಿತ್ತು. ಬೆಳಗ್ಗಿನ ಜಾವ ನಿದ್ರೆ ಬರುತ್ತಿರಲಿಲ್ಲ, ಅದಕ್ಕಾಗಿ ಜ್ಯೋತಿಷಿಗಳ ಬಳಿ ಪ್ರಶ್ನೆ ಕಳಿಸಿದ್ದೆ. ಜ್ಯೋತಿಷಿಗಳು ಸಹ ಏನೋ ಘಟನೆ ನಡೆಯುವ ಸಂಭವ ಇದೆ. ಅದಕ್ಕೆ ಕೆಲವೊಂದು ಪೂಜಾ ಕಾರ್ಯ ನೆರವೇರಿಸಿದಲ್ಲಿ ಘಟನೆಯ ತೀವ್ರತೆ ಕಡಿಮೆಯಾಗಬಹುದು ಎಂದಿದ್ದರು.

-ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ

ನನಗೆ ಈಗ ಸಿಟ್ಟು ಬರುವುದಿಲ್ಲ: ಮೊಯ್ಲಿ

‘ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಕೃತಿಯನ್ನು ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ, ಪ್ರತಿದಿನ ನಸುಕಿನ ನಾಲ್ಕು ಗಂಟೆಗೆ ಎದ್ದು ಬರೆದು ಪೂರ್ಣಗೊಳಿಸಿದ್ದೇನೆ, ಅಹಿಂಸೆಯೇ ಇದರ ಮೂಲದ್ರವ್ಯ. ಅದರ ಗದ್ಯಾನುವಾದವೂ ಇದೀಗ ಆಗಿದೆ. ಈ ಕೃತಿಯ ರಚನೆಯಿಂದ ನನ್ನಲ್ಲೇ ಪರಿವರ್ತನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ ಹೇಳಿದರು. ನನಗೆ ಈಗ ಸಿಟ್ಟು ಬರುವುದಿಲ್ಲ, ಈ ಬದಲಾವಣೆ ಬಗ್ಗೆ ಎಲ್ಲರೂ ಕೇಳುತ್ತಿದ್ದಾರೆ. ಅದರ ಹಿಂದಿರುವ ಮುಖ್ಯ ಕಾರಣ ಇದೇ ಆಗಿದೆ. ಕಾವ್ಯದಿಂದ ಬೇರೆ ಯಾರು ಬದಲಾಗುತ್ತಾರೋ ಗೊತ್ತಿಲ್ಲ, ನಾನಂತೂ ಬದಲಾಗಿದ್ದೇನೆ ಎಂದು ಮೊಯ್ಲಿ ಹೇಳಿದರು.