ವಿಶ್ವಹಿಂದು ಪರಿಷತ್‌ನ 60ನೇ ವರ್ಷಾಚರಣೆ ಪ್ರಯುಕ್ತ ಅ.9ರಂದು ಮಂಗಳೂರಿನಲ್ಲಿ ನಡೆಯುವ ಬೃಹತ್‌ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಸುಮಾರು 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶೌರ್ಯ ಜಾಗರಣಾ ರಥಯಾತ್ರೆ ಸಮಿತಿ ಜಿಲ್ಲಾಧ್ಯಕ್ಷ ಎಚ್‌.ಕೆ.ಪುರುಷೋತ್ತಮ ತಿಳಿಸಿದ್ದಾರೆ.

 ಮಂಗಳೂರು (ಅ.8) :  ವಿಶ್ವಹಿಂದು ಪರಿಷತ್‌ನ 60ನೇ ವರ್ಷಾಚರಣೆ ಪ್ರಯುಕ್ತ ಅ.9ರಂದು ಮಂಗಳೂರಿನಲ್ಲಿ ನಡೆಯುವ ಬೃಹತ್‌ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಸುಮಾರು 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶೌರ್ಯ ಜಾಗರಣಾ ರಥಯಾತ್ರೆ ಸಮಿತಿ ಜಿಲ್ಲಾಧ್ಯಕ್ಷ ಎಚ್‌.ಕೆ.ಪುರುಷೋತ್ತಮ ತಿಳಿಸಿದ್ದಾರೆ.

ನಗರದ ಬಂಟ್ಸ್‌ಹಾಸ್ಟೆಲ್‌ನಲ್ಲಿ ರಥಯಾತ್ರೆ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ತಾಲೂಕಿನಲ್ಲಿರುವ ಪ್ರತಿ ಹಿಂದುಗಳ ಮನೆಗಳಿಗೆ ಭೇಟಿ ನೀಡಿ ಯಾತ್ರೆಯ ಉದ್ದೇಶವನ್ನು ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹಿಂದು ಬಾಂಧವರು ಆಗಮಿಸುವ ನಿರೀಕ್ಷೆ ಇದೆ ಎಂದರು.

ಸನಾತನ ಧರ್ಮ ನಾಶ ಮಾಡ್ತೇವೆ ಎನ್ನುವವರಿಗೆ ಪಾಠ ಕಲಿಸಬೇಕು: ಆರೆಸ್ಸೆಸ್ ಮುಖಂಡ ಪಟ್ಟಾಭಿರಾಮ

ಅಂದು ಬೆಳಗ್ಗೆ 10 ಗಂಟೆಗೆ ಅಡ್ಯಾರಿನಲ್ಲಿ ರಥವನ್ನು ಸ್ವಾಗತಿಸಿ ಸಂಜೆ 3 ಗಂಟೆಗೆ ಅಂಬೇಡ್ಕರ್‌ ವೃತ್ತದಿಂದ ಬೃಹತ್‌ ಶೋಭಾಯಾತ್ರೆ ಹೊರಡಲಿದೆ. ಇದನ್ನು ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಉದ್ಘಾಟಿಸುವರು. ಈ ಶೋಭಾಯಾತ್ರೆಯಲ್ಲಿ ನಮ್ಮ ದೇಶ, ಧರ್ಮಕ್ಕಾಗಿ ಹುತಾತ್ಮರಾದ ಮಹಾಪುರುಷರ ಸ್ತಬ್ಧ ಚಿತ್ರ ಇರಲಿದೆ. ಚಂಡೆ, ಕೊಂಬು ವಾದ್ಯಗಳೊಂದಿಗೆ ಅದ್ದೂರಿ ಶೋಭಾಯಾತ್ರೆ ನಡೆಯಲಿದೆ ಎಂದರು.

ಸಂಜೆ 4 ಗಂಟೆಗೆ ಕದ್ರಿ ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಸಭೆ ನಡೆಯಲಿದ್ದು, ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ ಅಧ್ಯಕ್ಷತೆ ವಹಿಸುವರು. ಓಂ ಶ್ರೀಶಕ್ತಿಗುರುಮಠ ಕ್ಷೇತ್ರದ ಶ್ರೀಮುಕ್ತಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಆರ್‌ಎಸ್‌ಎಸ್‌ ಮಂಗಳೂರು ವಿಭಾಗ ಸಹ ಸಂಘಚಾಲಕ ಸುನಿಲ್‌ ಆಚಾರ್‌, ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಭಾಗವಹಿಸಲಿದ್ದಾರೆ. ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಶೌರ್ಯ ಜಾಗರಣಾ ರಥಯಾತ್ರೆ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಹಿಂದು ಬಾಂಧವರು ಮಧ್ಯಾಹ್ನ ಅಂಗಡಿಗಳನ್ನು ಬಂದ್‌ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.

ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ, ವಿಭಾಗ ಸಂಯೋಜಕ ಭುಜಂಗ ಕುಲಾಲ್‌, ಜಿಲ್ಲಾ ಸಂಯೋಜಕ ನವೀನ್‌ ಮೂಡುಶೆಡ್ಡೆ ಇದ್ದರು.

ವಾಹನಗಳ ಪಾರ್ಕಿಂಗ್‌ ಎಲ್ಲೆಲ್ಲಿ?

ಶೌರ್ಯ ಜಾಗರಣಾ ಸಮಾವೇಶಕ್ಕೆ ಆಗಮಿಸುವವರಿಗೆ 8 ಕಡೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.

-ಅಡ್ಯಾರ್‌, ಕಣ್ಣೂರು, ಪಡೀಲ್‌ನಿಂದ ಬರುವ ಬಸ್‌ಗಳು ಪಂಪ್‌ವೆಲ್‌, ಕಂಕನಾಡಿ, ಬಲ್ಮಠ ಮೂಲಕ ಬಂದು ಅಂಬೇಡ್ಕರ್‌ ವೃತ್ತದಲ್ಲಿ ಇಳಿಸಿ ಕೇಂದ್ರ ಮೈದಾನದಲ್ಲಿ ಪಾರ್ಕಿಂಗ್‌ ಮಾಡುವುದು.

-ಮುಡಿಪು, ಕೊಣಾಜೆ, ಉಳ್ಳಾಲ ಕಡೆಯಿಂದ ಬರುವ ಬಸ್‌ಗಳು ಪಂಪ್‌ವೆಲ್‌, ಕಂಕನಾಡಿ, ಬಲ್ಮಠ ಮೂಲಕ ಬಂದು ಅಂಬೇಡ್ಕರ್‌ ವೃತ್ತದಲ್ಲಿ ಇಳಿಸಿ ಕೇಂದ್ರ ಮೈದಾನದಲ್ಲಿ ಪಾರ್ಕಿಂಗ್‌ ಮಾಡುವುದು.

-ಮೂಡುಬಿದಿರೆ, ಕೈಕಂಬ, ಗುರುಪುರ, ವಾಮಂಜೂರು, ಮೂಡುಶೆಡ್ಡೆ, ನೀರುಮಾರ್ಗ, ಕುಲಶೇಖರ ಕಡೆಯಿಂದ ಬರುವ ಬಸ್‌ಗಳು ನಂತೂರು ರಸ್ತೆಯಾಗಿ ಸಂತ ಆಗ್ನೇಸ್‌ ಮೂಲಕ ಬಂದು ಅಂಬೇಡ್ಕರ್‌ ವೃತ್ತದಲ್ಲಿ ಇಳಿಸಿ ಕೇಂದ್ರ ಮೈದಾನಕ್ಕೆ ಮುಂದುವರಿಯುವುದು.

-ಮೂಲ್ಕಿ, ಸುರತ್ಕಲ್‌, ಬೈಂಕಪಾಡಿ, ಕುಳಾಯಿ, ಕೋಡಿಕಲ್‌, ಕೊಟ್ಟಾರದಿಂದ ಬರುವ ಬಸ್‌ಗಳು ಲೇಡಿಹಿಲ್‌, ಲಾಲ್‌ಬಾಗ್‌ ಮೂಲಕ ಬೆಸೆಂಟ್‌ನಲ್ಲಿ ಎಡಕ್ಕೆ ತಿರುಗಿ ಜೈಲ್‌ ರೋಡ್‌ ರಸ್ತೆಯಾಗಿ ಕರಂಗಲ್ಪಾಡಿಯಲ್ಲಿ ಇಳಿಸಿ ಪಿವಿಎಸ್‌ ಮೂಲಕ ಕೇಂದ್ರ ಮೈದಾನ ತಲುಪುವುದು.

-ಕಿನ್ನಿಗೋಳಿ, ಕಟೀಲು, ಬಜ್ಪೆ, ಕಾವೂರು, ಬೊಂದೇಲ್‌, ಮರವೂರು ಮೂಲಕ ಬರುವು ವಾಹನಗಳು ಯೆಯ್ಯಾಡಿ, ಕೆಟಿಪಿ, ಬಿಜೈ, ಲಾಲ್‌ಬಾಗ್‌, ಬೆಸೆಂಟ್‌ನಿಂದ ಎಡಕ್ಕೆ ತಿರುಗಿ ಜೈಲ್‌ ರೋಡ್‌ ಮೂಲಕ ಕರಂಗಲ್ಪಾಡಿಯಿಂದ ಕೇಂದ್ರ ಮೈದಾನಕ್ಕೆ ಮುಂದುವರಿಯುವುದು.

ರಾಜ್ಯಾದ್ಯಂತ ಬಜರಂಗದಳದ ಶೌರ್ಯ ರಥಯಾತ್ರೆ: ಲವ್ ಜಿಹಾದ್,ಗೋ ಹತ್ಯೆ, ಸನಾತನ ಧರ್ಮದ ಜಾಗೃತಿ

-ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಬರುವ ಮಂದಿ ಬಂಟ್ಸ್‌ಹಾಸ್ಟೆಲ್‌ನ ಶ್ರೀರಾಮಕೃಷ್ಣ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್‌ ಮಾಡಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವುದು.

-ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನದಲ್ಲಿ ಆಗಮಿಸುವವರು ಬಲ್ಮಠ ಶಾಂತಿ ನಿಲಯ ಮೈದಾನದಲ್ಲಿ ಪಾರ್ಕಿಂಗ್‌ ಮಾಡುವುದು. ಅಲ್ಲದೆ ಸಿ.ವಿ. ನಾಯಕ್‌ ಹಾಲ್‌ ಮೈದಾನದಲ್ಲಿ ಕೂಡ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮ ನಡೆಯುವ ಕದ್ರಿ ಮೈದಾನ ಸುತ್ತಮುತ್ತ, ಮಲ್ಲಿಕಟ್ಟೆ ವೃತ್ತದ ಸುತ್ತಮುತ್ತ ಯಾವುದೇ ವಾಹನ ಪಾರ್ಕಿಂಗ್‌ಗೆ ಅವಕಾಶ ಇಲ್ಲ ಎಂದು ಯಾತ್ರೆಯ ಜಿಲ್ಲಾಧ್ಯಕ್ಷ ಪುರುಷೋತ್ತಮ್‌ ತಿಳಿಸಿದರು.