Asianet Suvarna News Asianet Suvarna News

ರಾಜ್ಯದಲ್ಲಿ 7000ದ ಗಡಿ ದಾಟಿದ ಡೆಂಘೀ ಜ್ವರ, ತುರ್ತು ಸ್ಥಿತಿ ಘೋಷಿಸಿ: ಡಾ.ಸಿ.ಎನ್‌.ಮಂಜುನಾಥ್‌

ರಾಜ್ಯಾದ್ಯಂತ ಡೆಂಘೀ ಹರಡುತ್ತಿರುವುದರಿಂದ ಕೋವಿಡ್‌ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಹೀಗಾಗಿ ‘ವೈದ್ಯಕೀಯ ತುರ್ತು ಸ್ಥಿತಿ’ ಎಂದು ಘೋಷಿಸಬೇಕು ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಆಗ್ರಹಿಸಿದ್ದಾರೆ. 

Dengue fever has crossed the 7000 mark in the state of emergency has been declared says Dr CN Manjunath gvd
Author
First Published Jul 7, 2024, 10:25 AM IST

ಬೆಂಗಳೂರು (ಜು.07): ರಾಜ್ಯಾದ್ಯಂತ ಡೆಂಘೀ ಹರಡುತ್ತಿರುವುದರಿಂದ ಕೋವಿಡ್‌ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಹೀಗಾಗಿ ‘ವೈದ್ಯಕೀಯ ತುರ್ತು ಸ್ಥಿತಿ’ ಎಂದು ಘೋಷಿಸಬೇಕು ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಘೀ ಜ್ವರ ನಿಯಂತ್ರಣ ಎಂದರೆ ಸೊಳ್ಳೆಗಳ ನಿಯಂತ್ರಣ. ಡೆಂಘೀ ಕಾಯಿಲೆಗೆ ನಿಖರವಾದ ಚಿಕಿತ್ಸೆ ಇಲ್ಲ. ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯವಾಗಿದೆ. ಡೆಂಘೀ ಜ್ವರ ನಿಯಂತ್ರಣ ಆಗದೆ ಇದ್ದಲ್ಲಿ ಮಾರಕ ಕಾಯಿಲೆಗಳಾದ ಚಿಕೂನ್ ಗುನ್ಯಾ, ಝೀಕಾ ವೈರಸ್ ಕಾಯಿಲೆ ಬರಬಹುದು ಎಂದು ಎಚ್ಚರಿಸಿದರು.

ದುಬಾರಿ ದರ ಪಡೆದರೆ ಕ್ರಮಕ್ಕೆ ಆಗ್ರಹ: ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ಪಡೆದರೆ ಅಂತಹ ಆಸ್ಪತ್ರೆ, ಘಟಕಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಂತಹ ಲ್ಯಾಬೊರೇಟರಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದ ಅವರು, ಫ್ಲೈಓವರ್, ಅಂಡರ್ ಪಾಸ್, ಅಗೆದ ರಸ್ತೆ, ಸೇತುವೆ ಮೊದಲಾದವು ಸಕಾಲದಲ್ಲಿ ಮುಗಿಯುತ್ತಿಲ್ಲ. ಕಾಮಗಾರಿಗಳು ಅರ್ಧಕ್ಕೆ ನಿಲ್ಲುವುದರಿಂದ ಮಳೆ ಬಂದಾಗ ಅಲ್ಲೆಲ್ಲಾ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಚನ್ನಪಟ್ಟಣ ಅಭ್ಯರ್ಥಿ ಅಂತಿಮವಾಗಿಲ್ಲ: ಯೋಗೇಶ್ವರ್‌ ಹೇಳಿಕೆಯನ್ನು ಸ್ಪಷ್ಟವಾಗಿ ಅಲ್ಲಗಳೆದ ಎಚ್‌ಡಿಕೆ

ಟಾಸ್ಕ್‌ ಫೋರ್ಸ್‌ ರಚಿಸಿ: ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆಲಸ ಮಾಡಬೇಕಿದೆ. ಡೆಂಘೀ ನಿಯಂತ್ರಣಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಬೇಕು. ಈ ಟಾಸ್ಕ್ ಫೋರ್ಸ್, ಪರಿಣತರ ಸಲಹೆ ಪಡೆಯಬೇಕು ಎಂದರು. ಮಳೆಗಾಲದ ಸಮಸ್ಯೆಗಳಿಗೆ ಬೇಸಿಗೆ ಕಾಲದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಒಬ್ಬ ವೈದ್ಯರು ಸೇರಿ 6-7 ಜನರು ಸತ್ತಿದ್ದು, ಸಾವಿರಾರು ಜನ ಸೋಂಕಿತರಿದ್ದಾರೆ. ಮಕ್ಕಳಲ್ಲೂ ಡೆಂಘೀ ಜ್ವರ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲಾ ಶಾಲಾ- ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿ, ಶಾಲಾ ಆಡಳಿತದ ಜೊತೆ ಸಭೆ ನಡೆಸಬೇಕು. ಡೆಂಘೀ ಸಂಕೀರ್ಣ ಸ್ಥಿತಿ ತಲುಪಿದರೆ ಅದಕ್ಕೆ ಚಿಕಿತ್ಸೆಯೇ ಇಲ್ಲ ಎಂದು ಒತ್ತಿ ಹೇಳಿದರು.

ಆರೋಗ್ಯ ಇಲಾಖೆ ಐಸಿಯುಗೆ ಸೇರಿದೆ: ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ದಿವಾಳಿ ಅಂಚಿನಲ್ಲಿದೆ. ರಾಜ್ಯದ ಆರೋಗ್ಯ ಇಲಾಖೆ ಐಸಿಯುಗೆ ಸೇರಿದಂತಿದೆ ಎಂದು ಟೀಕಿಸಿದರು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಡೆಂಘೀ ಮಹಾಮಾರಿ ಇದೆ. ಕಳೆದ ಒಂದು ತಿಂಗಳಿನಿಂದ ಅದು ರಾಜ್ಯವನ್ನೇ ಆವರಿಸಿದೆ. ಡೆಂಘೀ, ಮಲೇರಿಯಾ, ವೈರಲ್ ಜ್ವರ ಸಾಮಾನ್ಯವಾಗಿ ಋತುವಿಗೆ ಅನುಗುಣವಾಗಿ ಬರುತ್ತವೆ. ಸರ್ಕಾರ ಇದರ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇವಲ ಪ್ರವಾಸದಲ್ಲಿ ಇರುತ್ತಾರೆ. ಅವರ ಪಕ್ಷದ ಚಟುವಟಿಕೆಯಲ್ಲಿ ಅವರು ಬ್ಯುಸಿ ಇರುತ್ತಾರೆ. ಆದರೆ, ತಮ್ಮ ಇಲಾಖೆ ಜವಾಬ್ದಾರಿ ಕಡೆ ಗಮನ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ನಾರಾಯಣ ಕೆ, ಸಹ ಸಂಚಾಲಕ ಡಾ.ಯೋಗಾನಂದ, ರಾಜ್ಯ ವಕ್ತಾರ ಅಶೋಕ್ ಕೆ.ಎಂ. ಗೌಡ ಉಪಸ್ಥಿತರಿದ್ದರು.

ರಾಜ್ಯದಲ್ಲಿ 7000ದ ಗಡಿ ದಾಟಿದ ಡೆಂಘೀ ಜ್ವರ: ರಾಜ್ಯದಲ್ಲಿ ಜು.6ರ ಶನಿವಾರ ಬರೋಬ್ಬರಿ 175 ಮಂದಿಗೆ ಡೆಂಘೀ ಜ್ವರ ದೃಢಪಟ್ಟಿದ್ದು, ತನ್ಮೂಲಕ ಪ್ರಸಕ್ತ ವರ್ಷದಲ್ಲಿ ದೃಢಪಟ್ಟ ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 7000ದ ಗಡಿ ದಾಟಿದೆ. ಜತೆಗೆ ಕಳೆದ ಒಂದೇ ತಿಂಗಳಲ್ಲಿ ಮಹಾಮಾರಿಗೆ 6 ಮಂದಿ ಬಲಿಯಾಗಿದ್ದಾರೆ. ಜು.6ರ ವೇಳೆಗೆ ರಾಜ್ಯಾದ್ಯಂತ 5,098 ಮಂದಿಗೆ ಡೆಂಘೀ ದೃಢಪಟ್ಟಿದ್ದರೆ ಬಿಬಿಎಂಪಿ ವ್ಯಾಪ್ತಿಯ 1,908 ಮಂದಿ ಸೇರಿ 7,006 ಮಂದಿಗೆ ಡೆಂಘಿ ವರದಿಯಾಗಿದೆ.

1.17 ಲಕ್ಷ ಮಂದಿಗೆ ಡೆಂಘಿ ಲಕ್ಷಣಗಳು ವರದಿಯಾಗಿದ್ದು 53 ಸಾವಿರ ಮಂದಿಯ ರಕ್ತ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಐಜಿಎಂ ಲಿಸಾ ಪರೀಕ್ಷೆಯಲ್ಲಿ 3,040, ಎನ್‌ಎಸ್‌1 ಆ್ಯಂಟಿಜನ್‌ ಪರೀಕ್ಷೆಯಲ್ಲಿ 3,964 ಸೇರಿ 7,006 ಮಂದಿಗೆ ಡೆಂಘಿ ದೃಢಪಟ್ಟಿದೆ. ಈ ಪೈಕಿ ಮೇ 1ರ ವೇಳೆಗೆ ಕೇವಲ 3,794ರಷ್ಟಿದ್ದ ಪ್ರಕರಣಗಳು ಕಳೆದ ಒಂದು ತಿಂಗಳಲ್ಲಿ ಬಹುತೇಕ ದ್ವಿಗುಣಗೊಂಡಿವೆ. ಕಳೆದ 35 ದಿನಗಳಲ್ಲಿ ಬರೋಬ್ಬರಿಗೆ 3,212 ಮಂದಿಗೆ ಡೆಂಘಿ ದೃಢಪಟ್ಟಿರುವುದು ತೀವ್ರ ಆತಂಕ ಸೃಷ್ಟಿಸಿದೆ.

ಎಚ್‌ಡಿಕೆ ಜನತಾದರ್ಶನಕ್ಕೆ ಸಚಿವ ಚಲುವರಾಯಸ್ವಾಮಿ ಜನಸ್ಪಂದನ ಸಡ್ಡು!

ಆರು ಮಂದಿ ಬಲಿ: ಶನಿವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 115, ಮಂಡ್ಯ 26, ಗದಗ 8, ವಿಜಯಪುರ 9, ಉಡುಪಿ 2, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ. ಇನ್ನು ಕಳೆದ ಒಂದು ತಿಂಗಳಲ್ಲಿ ಹಾಸನದಲ್ಲಿ ಇಬ್ಬರು, ಬೆಂಗಳೂರು, ಶಿವಮೊಗ್ಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರು ಡೆಂಘಿ ಜ್ವರಕ್ಕೆ ಬಲಿಯಾಗಿದ್ದಾರೆ.

Latest Videos
Follow Us:
Download App:
  • android
  • ios