ಉತ್ತರ ಕರ್ನಾಟಕ ಭಾಗದಲ್ಲಿ ಶೇ.10ರಷ್ಟು, ಬೆಂಗಳೂರು ಭಾಗದಲ್ಲಿ ಶೇ.7.5ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದ ಡಿ.ಕೆಂಪಣ್ಣ.
ಬೆಂಗಳೂರು(ಮಾ.15): ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿರುವ ಮಧ್ಯೆಯೇ ಚೀಫ್ ಎಂಜಿನಿಯರ್‌ಗಳು ಶೇ.7.5ರಿಂದ ಶೇ. 10ರವರೆಗೆ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಕಾಲಮಿತಿಯಲ್ಲಿ ಜೇಷ್ಠತೆ ಆಧಾರದಲ್ಲಿ ಬಾಕಿ ಮೊತ್ತ ಬಿಡುಗಡೆ ಮಾಡದಿದ್ದರೆ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ, ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳಿಂದ ಬರೋಬ್ಬರಿ 22 ಸಾವಿರ ಕೋಟಿ ಬಿಡುಗಡೆ ಆಗಬೇಕಿದೆ. ಲೋಕೋಪಯೋಗಿ ಇಲಾಖೆಯಿಂದ 5 ಸಾವಿರ ಕೋಟಿ, ನೀರಾವರಿ ಇಲಾಖೆ 8000 ಕೋಟಿ ಹಾಗೂ ಬಿಬಿಎಂಪಿಯಿಂದ 3000 ಕೋಟಿ ಬರಬೇಕು. ಈ ನಡುವೆ ಒಂದಿಷ್ಟು ಮೊತ್ತವನ್ನು ಬಿಡುಗಡೆಗೆ ಸರ್ಕಾರ ಮುಂದಾಗಿದ್ದು, ಎಂಟು ದಿನಗಳಲ್ಲಿ ವಿಭಾಗೀಯ ಕಚೇರಿಗಳಿಗೆ ಎಲ್‌ಒಸಿ (ಲೆಟರ್ ಆಫ್ ಕ್ರೆಡಿಟ್) ಬರುವ ಮಾಹಿತಿಯಿದೆ. ಆದರೆ, ಚೀಫ್ ಎಂಜಿನಿಯರ್‌ಗಳು ಕಮಿಷನ್ ಕೇಳುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಶೇ.10ರಷ್ಟು, ಬೆಂಗಳೂರು ಭಾಗದಲ್ಲಿ ಶೇ.7.5ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.
Bengaluru: ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ನಾಲ್ವರು ಅರೆಸ್ಟ್!
ಕಮೀಷನ್ ಹಿಂದೆ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿದ ಅವರು, ಶೇ.80ರಷ್ಟು ಮೊತ್ತವನ್ನು ಹಿರಿತನದ ಆಧಾರದಲ್ಲಿ ಹಾಗೂ ಶೇ.20ರಷ್ಟು ಮೊತ್ತವನ್ನು ವಿವೇಚನಾ ಕೋಟಾದಡಿ ಬಿಡುಗಡೆ ಮಾಡಬೇಕು. ಆದರೆ ರಾಜಕಾರಣಿಗಳ ಮೂಲಕ ಪ್ರಭಾವ ಬೀರಿದವರಿಗೆ, ಕಮೀಷನ್ ಕೊಡುವವರಿಗೆ ಬಿಲ್ ಮಂಜೂರಾಗುತ್ತಿದೆ ಎಂದು ದೂರಿದರು.
ಎರಡು, ಮೂರನೇ ಹಂತದ ನಗರದಲ್ಲಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಜಿಲ್ಲೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದರೂ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಚುನಾವಣೆ ಅಧಿಸೂಚನೆ ಪ್ರಕಟಿಸುವ ಮುನ್ನವೇ ಹಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಎಲ್ಲ ಇಲಾಖೆಗಳ ಕಚೇರಿಯಲ್ಲಿ ಕಾಮಗಾರಿಯ ಜೇಷ್ಠತಾ ಪಟ್ಟಿಯನ್ನು ನಾಮಫಲಕದಲ್ಲಿ ಹಾಕಬೇಕು. ಎಷ್ಟುಕಾಮಗಾರಿ ಆಗಿದೆ, ಬಾಕಿ ಮೊತ್ತವೆಷ್ಟು, ಎಷ್ಟು ಬಿಡುಗಡೆ ಮಾಡಲಾಗುತ್ತಿದೆ ಎಂಬುದನ್ನು ಪ್ರಕಟಿಸಬೇಕು ಎಂದು ಕೆಂಪಣ್ಣ ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ ಇದ್ದರು.