Bengaluru: ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ನಾಲ್ವರು ಅರೆಸ್ಟ್!
ಮುನಿರತ್ನ ಹೂಡಿದ್ದ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನವಾಗಿದೆ.
ಬೆಂಗಳೂರು (ಡಿ.24): ಸರ್ಕಾರದ ವಿರುದ್ಧ ಶೇ.40 ಭ್ರಷ್ಟಾಚಾರ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆಂಪಣ್ಣ ಅವರನ್ನು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. ಕೆಂಪಣ್ಣ ಅವರ ಆರೋಪದ ಬೆನ್ನಲ್ಲೇ ತೋಟಗಾರಿಕಾ ಮತ್ತು ಯೋಜನಾ ಸಚಿವ ಮುನಿರತ್ನ ಅವರು 50 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.
ಸಚಿವ ಮುನಿರತ್ನ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ಹೂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಕೆಂಪಣ್ಣ ವಿರುದ್ಧ ನಾನ್‌ಬೇಲೆಬಲ್ ವಾರಂಟ್ ಹೊರಡಿಸಿತ್ತು ಡಿ.19 ರಂದು ನಾನ್‌ಬೇಲೆಬಲ್ ವಾರಂಟ್ ಹೊರಡಿಸಿದ್ದ 8 ನೇ ಎಸಿಎಂಎಂ ಕೋರ್ಟ್. ಆದ್ದರಿಂದ ವೈಯಾಲಿಕಾವಲ್ ಪೊಲೀಸರು ಕೆಂಪಣ್ಣ ಅವರನ್ನು ಬಂಧಿಸಿದ್ದಾರೆ. ಇವರೊಂದಿಗೆ ನಾಲ್ವರು ಪದಾಧಿಕಾರಿಗಳು ಸೇರಿ ಒಟ್ಟು ಐವರು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಕೆಂಪಣ್ಣ ಅವರೊಂದಿಗೆ ಗುತ್ತಿಗೆದಾರರ ಸಂಘದ ಇತರೆ ಪದಾಧಿಕಾರಿಗಳಾದ ನಟರಾಜು, ಗುರುಸಿದ್ದಪ್ಪ, ಕೃಷ್ಣಾ ರೆಡ್ಡಿ, ಕೂಡ ಬಂಧನವಾಗಿದೆ. ಇವರಲ್ಲಿ ನಟರಾಜ, ಗುತ್ತಿಗೆದಾರರ ಸಂಘದ ಖಜಾಂಜಿ, ಗುರುಸಿದ್ದಪ್ಪ ಅವರು ಸಂಘದ ಜಂಟಿ ಕಾರ್ಯದರ್ಶಿ, ಕೃಷ್ಣರೆಡ್ಡಿ, ಸಂಘದ ಉಪಾಧ್ಯಕ್ಷ ಆಗಿದ್ದರು. ಇವರೆಲ್ಲರೂ ಆಡಳಿತಾರೂಢ ರಾಜ್ಯ ಸರ್ಕಾರದ ವಿರುದ್ಧ ನೇರವಾಗಿ ಶೇ.40 ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು.
ಕಮಿಷನ್ ಆರೋಪ: ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ ಮುನಿರತ್ನ ಕೇಸ್!
ಪ್ರಧಾನಿಗೆ ಪತ್ರ ಬರೆದಿದ್ದ ಕೆಂಪಣ್ಣ: ಇನ್ನು ರಾಜ್ಯ ಸರ್ಕಾರದ ವಿರುದ್ಧ ಮಾಡಿದ್ದ ಶೇ.40 ಕಮಿಷನ್ ಆರೋಪದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದರು. ಇದರ ಬೆನ್ನಲ್ಲೆ ರಾಜ್ಯಾದ್ಯಂತ ಕೆಂಪಣ್ಣ ಅವರ ಹೆಸರು ಭಾರಿ ಪ್ರಚಾರಕ್ಕೆ ಬಂದಿತ್ತು. ಜೊತೆಗೆ ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಬಿಬಿಎಂಪಿಯಲ್ಲಿ ಶೇ.50 ಕಮಿಷನ್ ನಡೆಯುತ್ತಿದೆ ಎಂದು ಆರೋಪ ಮಾಡಿದ್ದರು. ಈಗ ಅವರಿಗೂ ಸಂಕಷ್ಟ ಎದುರಾಗಿದೆ.
ಸೆಪ್ಟಂಬರ್‌ನಲ್ಲಿ ಪ್ರಕರಣ ದಾಖಲು: ತೋಟಗಾರಿಕಾ ಸಚಿವ ಮುನಿರತ್ನ ಸೇರಿದಂತೆ ಸರ್ಕಾರ ವಿರುದ್ಧ 40% ಕಮೀಷನ್ ಆರೋಪ ಮಾಡಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರಿಗೆ ದಾಖಲೆ ಕೊಡಿ ಎಂದು ಸಚಿವ ಮುನಿರತ್ನ ಅವರು ಸೆಪ್ಟಂಬರ್ ತಿಂಗಳಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾಗಿ ತಿಳಿಸಿದ್ದರು. 50 ಕೋಟಿ ಮಾನನಷ್ಟ ಪ್ರಕರಣವನ್ನು 4 ತಿಂಗಳ ಒಳಗಡೆ ಇತ್ಯರ್ಥ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದೇವೆ. ಸೆ.21ಕ್ಕೆ ಕೋರ್ಟ್‌ನಲ್ಲಿ ನನ್ನ ಹೇಳಿಕೆ ದಾಖಲಾಗುತ್ತದೆ. ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಾಗುತ್ತದೆ ಎಂದು ತಿಳಿಸಿದ್ದರು. ಇದರ ಜೊತೆಗೆ ಅವರ ಜೊತೆಗಿರುವ 18 ಮಂದಿ ವಿರುದ್ಧ ಕ್ರಿಮಿನಲ್ ಮಾನಷ್ಟ ಕೇಸ್ ಹೂಡಿದ್ದೇನೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದರು.
40ರಷ್ಟು ಕಮಿಷನ್ ಆರೋಪ ನ್ಯಾಯಾಂಗ ತನಿಖೆಯಾಗಲಿ: ಡಿಕೆಶಿ
ಸುಳ್ಳು ಆರೋಪ ಮಾಡಿ ತಪ್ಪಿಸಿಕೊಳ್ಳಲಾಗಲ್ಲ: ದಾಖಲೆ ಇಲ್ಲದೆ ಸುಳ್ಳು ಆರೋಪ ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಚಾರಕ್ಕಾಗಿ ಪ್ರಧಾನಮಂತ್ರಿಗೆ ಪತ್ರ ಬರೆಯೋದಲ್ಲ. ದಾಖಲೆ ಇದ್ದರೆ ಬಿಡುಗಡೆ ಮಾಡಿ ಕಮಿಷನ್ ಪಡೆದ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಬಯಲಿಗೆ ತರಲಿ. ಯಾವುದೋ ಒಂದು ಅರ್ಜಿ ಕೊಟ್ಟತಕ್ಷಣ ನ್ಯಾಯಾಂಗ ತನಿಖೆ ಮಾಡಿಸಲು ಸಾಧ್ಯವಿಲ್ಲ. ಸೂಕ್ತ ದಾಖಲೆ ಇದ್ದರೆ ಬಿಡುಗಡೆಗೊಳಿಸಲಿ. ಸುಮ್ಮನೆ 14 ತಿಂಗಳಿಂದ ಗಾಳಿಯಲ್ಲಿ ಗುಂಡು ಹೊಡೆದುಕೊಂಡು ಓಡಾಡುವುದು ಸರಿಯಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಸಚಿವ ಮುನಿರತ್ನ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸವಾಲು ಹಾಕಿದ್ದ ಕೆಂಪಣ್ಣ: ಸಚಿವ ಮುನಿರತ್ನ ಅವರು ನನ್ನ ವಿರುದ್ಧ 50 ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿರುವುದು ತುಂಬಾ ಸಂತಸದ ಸಂಗತಿ. ಅವರನ್ನು ಕೈಮುಗಿದು ಪ್ರಾರ್ಥಿಸುತ್ತೇನೆ. ಮೊದಲು ಮೊಕದ್ದಮೆ ದಾಖಲಿಸಲಿ. ನ್ಯಾಯಾಲಯಕ್ಕೆ ಎಲ್ಲಾ ರೀತಿಯ ದಾಖಲೆಗಳನ್ನೂ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿರುಗೇಟು ನೀಡಿದ್ದರು.