ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ 'ನಾರಿ ಶಕ್ತಿ' ಕಾರ್ಯಕ್ರಮದಲ್ಲಿ, ಸ್ಲೀವ್‌ಲೆಸ್ ಕುರ್ತಿ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬರನ್ನು ಕೇಂದ್ರ ಸಚಿವರಿಗೆ ಸ್ವಾಗತ ಕೋರದಂತೆ ತಡೆಯಲಾಗಿದೆ. ಮಹಿಳಾ ಸಬಲೀಕರಣದ ಕುರಿತಾದ ಕಾರ್ಯಕ್ರಮದಲ್ಲೇ ವಿದ್ಯಾರ್ಥಿನಿಯ ಉಡುಗೆಯ ಬಗ್ಗೆ ತಾರತಮ್ಯ ಎಸಗಲಾಗಿದೆ.
ನವದೆಹಲಿ (ಏ.15): ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಲು ಆಯೋಜಿಸಿದ್ದ 'ನಾರಿ ಶಕ್ತಿ' ಕಾರ್ಯಕ್ರಮದಲ್ಲೇ ವಿದ್ಯಾರ್ಥಿನಿಯೊಬ್ಬಳಿಗೆ ಅವಮಾನವಾಗಿರುವ ಘಟನೆ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ. ಕೇಂದ್ರ ಸಚಿವ ಮನ್ಸುಖ್ ಮಾಂಡವಿಯ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಬೇಕಿದ್ದ 19 ವರ್ಷದ ವಿದ್ಯಾರ್ಥಿನಿ ಸಾರಾ ಶರ್ಮಾ ಅವರನ್ನು 'ಸ್ಲೀವ್‌ಲೆಸ್ ಕುರ್ತಿ' ಧರಿಸಿದ್ದಾಳೆ ಎಂಬ ಕಾರಣಕ್ಕೆ ಮಂತ್ರಿಗಳಿದ್ದ ವೇದಿಕೆಗೆ ಹೋಗದಂತೆ ತಡೆಯಲಾಗಿದೆ.
ಏಪ್ರಿಲ್ 12ರಂದು ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಡಿ ಕಾರ್ಯನಿರ್ವಹಿಸುವ 'ಮೇರಾ ಯುವ ಭಾರತ್' (MY Bharat) ವತಿಯಿಂದ 'ಮಹಿಳಾ ಯುವ ಸಂಸತ್ತು' ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಥೀಮ್ "ನಾರಿ ಶಕ್ತಿ: ವಿಕಸಿತ ಭಾರತದ ಧ್ವನಿ - ಅಂತರ್ಗತ ಪ್ರಜಾಪ್ರಭುತ್ವದ ಬಲವರ್ಧನೆ" ಎಂದಾಗಿತ್ತು.
ದೌಲತ್ ರಾಮ್ ಕಾಲೇಜಿನ 19 ವರ್ಷದ ವಿದ್ಯಾರ್ಥಿನಿ ಸಾರಾ ಶರ್ಮಾ, ಈ ಅಣಕು ಸಂಸತ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯ ಅವರನ್ನು ವೇದಿಕೆಯ ಮೇಲೆ ಸನ್ಮಾನಿಸುವ ಕ್ಷಣ ಹತ್ತಿರ ಬಂದಾಗ, ಸಚಿವಾಲಯದ ಅಧಿಕಾರಿಯೊಬ್ಬರು ಸಾರಾಳನ್ನು ತಡೆದು ನಿಲ್ಲಿಸಿದ್ದಾರೆ. ಆಕೆ ಸ್ಲೀವ್‌ಲೆಸ್ ಕುರ್ತಿ ಧರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಬದಲಿಗೆ ಬೇರೊಬ್ಬ ವಿದ್ಯಾರ್ಥಿನಿಯನ್ನು ವೇದಿಕೆಗೆ ಕಳುಹಿಸಲಾಗಿದೆ.
"ಸಂಸತ್ತಿನಲ್ಲೇ ಸ್ಲೀವ್‌ಲೆಸ್ ಬ್ಲೌಸ್ ಧರಿಸಲ್ವಾ?" ವಿದ್ಯಾರ್ಥಿನಿಯ ಅಳಲು
ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ಸಾರಾ ಶರ್ಮಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ. "ಎಲ್ಲರ ಮುಂದೆ ಸಚಿವಾಲಯದ ಅಧಿಕಾರಿಗಳು ನನ್ನ ಬಟ್ಟೆಯ ಬಗ್ಗೆ ಕಾಮೆಂಟ್ ಮಾಡಿದ್ದು ನನಗೆ ತುಂಬಾ ಅಸಹ್ಯ ಮತ್ತು ಮುಜುಗರ ತಂದಿದೆ" ಎಂದು ಸಾರಾ ಹೇಳಿದ್ದಾರೆ. "ನಮಗೆ ಭಾರತೀಯ ಉಡುಗೆ ತೊಡುವಂತೆ ತಿಳಿಸಲಾಗಿತ್ತು. ಅದರಂತೆ ನಾನು ನೀಲಿ ದುಪ್ಪಟ್ಟಾ ಇರುವ ಬಿಳಿ ಬಣ್ಣದ ಸೂಟ್ ಧರಿಸಿದ್ದೆ. ಸ್ಲೀವ್‌ಲೆಸ್ ಉಡುಗೆಗೆ ನಿಷೇಧವಿದೆ ಎಂದು ಎಲ್ಲಿಯೂ ಉಲ್ಲೇಖಿಸಿರಲಿಲ್ಲ. ಮಹಿಳೆಯರ ಬಗ್ಗೆ ನಡೆಯುವ ಕಾರ್ಯಕ್ರಮದಲ್ಲೇ ನನ್ನ ಬಟ್ಟೆ ಸಮಸ್ಯೆಯಾಗಿದ್ದು ವಿಪರ್ಯಾಸ. ಸಂಸತ್ತಿನಲ್ಲಿ ಸಂಸದರು ಸ್ಲೀವ್‌ಲೆಸ್ ಬ್ಲೌಸ್ ಇರುವ ಸೀರೆಗಳನ್ನು ಧರಿಸುವುದಿಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.
ಗಣ್ಯರ ಉಪಸ್ಥಿತಿ
ಈ ಕಾರ್ಯಕ್ರಮದಲ್ಲಿ ಸಚಿವ ಮನ್ಸುಖ್ ಮಾಂಡವಿಯ ಅವರೊಂದಿಗೆ ಯುವಜನ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿತೇಶ್ ಕುಮಾರ್ ಮಿಶ್ರಾ, MY Bharat ಸಿಇಒ ಪ್ರಿಯಾಂಕಾ ಶುಕ್ಲಾ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸಿಮ್ರಿತ್ ಕೌರ್ ಭಾಗವಹಿಸಿದ್ದರು. 500ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಹಿಳಾ ನಾಯಕತ್ವ ಮತ್ತು 'ನಾರಿ ಶಕ್ತಿ ವಂದನ್ ಅಧಿನಿಯಮ'ದ ಬಗ್ಗೆ ಚರ್ಚೆಗಳು ನಡೆದವು. ಆದರೆ, ಮಹಿಳಾ ಸ್ವಾತಂತ್ರ್ಯದ ಮಾತಿನ ನಡುವೆಯೇ ವಿದ್ಯಾರ್ಥಿನಿಯ ಉಡುಗೆಯ ಬಗ್ಗೆ ತಾರತಮ್ಯ ಎಸಗಿರುವುದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಚಿವಾಲಯದಿಂದ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.


