ಬೆಂಗಳೂರು[ಫೆ.12]: ಕೇಜ್ರಿವಾಲ್‌ ಒಳ್ಳೆಯ ಕೆಲಸ ಮಾಡಿದ್ದರು, ಜನರು ಜಿಡಿಪಿ ಕುಸಿತದಿಂದ ರೋಸಿ ಹೋಗಿದ್ದರು. ಹಾಗಾಗಿ ದೆಹಲಿಯಲ್ಲಿ ಜನರು ಆಮ್‌ ಆದ್ಮಿ ಪಾರ್ಟಿ (ಆಪ್‌) ಕೈ ಹಿಡಿದಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಎಲ್ಲ ರೀತಿಯ ಸಂಪನ್ಮೂಲಗಳನ್ನು ಇಟ್ಟುಕೊಂಡಿದ್ದರು. ಅವರದೇ ಪಕ್ಷದ ಕೇಂದ್ರ ಸರ್ಕಾರ, ಸಂಸದರು ಇದ್ದರೂ ಗೆಲ್ಲಲು ಆಗಲಿಲ್ಲ. ಒಂದಂತೂ ಸತ್ಯ, ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಿದ್ದ ಬಿಜೆಪಿಯನ್ನು ಈಗ ಜನರೇ ‘ಬಿಜೆಪಿ ಮುಕ್ತ ಭಾರತ’ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತಿದೆ ಎಂದರು.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್‌ ಜಯಗಳಿಸುವುದೆಂದು ನಮಗೆ ಮೊದಲೇ ಗೊತ್ತಿತ್ತು. ಕಾಂಗ್ರೆಸ್‌ ನಾಲ್ಕೈದು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದುಕೊಂಡಿದ್ದೆವು, ಇದರಿಂದ ನಮಗೇನೂ ನಷ್ಟವಾಗಿಲ್ಲ ಎಂದು ಹೇಳಿದರು.

ಕೇಜ್ರಿ ಗೆಲುವಿನ ಸೀಕ್ರೆಟ್ ಫಾರ್ಮುಲಾ: ಮತ್ತೆ ಕೆಲಸ ಮಾಡಿತು PK ಪ್ಲಾನ್!

ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ:

ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೆಚ್ಚಿನ ಸ್ಥಾನ ಗಳಿಸಿದೆ. ಸಿಂದಗಿ, ಸಿರಗುಪ್ಪ, ಚಿಕ್ಕಬಳ್ಳಾಪುರ, ಹುಣಸೂರಿನಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್‌ 69 ಸ್ಥಾನ, ಬಿಜೆಪಿ 58 ಸ್ಥಾನ ಗೆದ್ದಿದೆ ಎಂದರು.

ನಿನ್ನೆ ಮಂತ್ರಿಯಾದ ಚಿಕ್ಕಬಳ್ಳಾಪುರದವರೊಬ್ಬರು ಏನು ಮಾಡಿದರೂ ಅಲ್ಲಿ ವರ್ಕೌಟ್‌ ಆಗಿಲ್ಲ. ಅಲ್ಲಿ ನಮಗೆ ಸ್ಪಷ್ಟಬಹುಮತ ಬಂದಿದೆ. ಹೊಸಕೋಟೆಯಲ್ಲಿ ನಮ್ಮವರಿಗೆ ಖರ್ಚು ಮಾಡುವ ಶಕ್ತಿ ಇರಲಿಲ್ಲ. ಎಂಟಿಬಿ ನಾಗರಾಜ್‌ ಹಣ ಖರ್ಚು ಮಾಡಿದ್ದಾರೆ. ಅದಕ್ಕೇ ಹೊಸಕೋಟೆಯಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

ದೇಶ ಗೆದ್ದ ಬಿಜೆಪಿಗೆ ದಿಲ್ಲಿ ಇನ್ನೂ ಮರೀಚಿಕೆ!

ಸದನ ನಡೆಸುವುದೇ ಅನುಮಾನ:

ದರಿದ್ರ ಸರ್ಕಾರ ಎಂಬ ತಮ್ಮ ಮಾತಿಗೆ ಸದನದಲ್ಲಿ ಉತ್ತರ ಕೊಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದೇನು ಉತ್ತರ ಕೊಡುತ್ತಾರೋ ಕೊಡಲಿ. ಅಷ್ಟಕ್ಕೂ ಸದನ ನಡೆಸುತ್ತಾರೋ ಇಲ್ಲವೋ ಅದೇ ಗೊತ್ತಿಲ್ಲ. ಹಿಂದೆ ಹೆದರಿಕೊಂಡು ಬೆಳಗಾವಿಯಲ್ಲಿ ಸದನ ನಡೆಸಲೇ ಇಲ್ಲ ಎಂದರು.