Asianet Suvarna News Asianet Suvarna News

ಮುಷ್ಕರ ನಿರತ ಎನ್‌ಎಚ್‌ಎಂ ಸಿಬ್ಬಂದಿ ಮೇಲೆ ಎಸ್ಮಾ ಜಾರಿಗೆ ನಿರ್ಧಾರ

ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಕಾಯಂ ಮಾಡುವಂತೆ ಒತ್ತಾಯಿಸಿ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ 48 ಗಂಟೆಗಳ ಒಳಗಾಗಿ ಸೇವೆಗೆ ಹಾಜರಾಗುವಂತೆ ಆರೋಗ್ಯ ಇಲಾಖೆ ಮಾ.16 ರಂದು ನೋಟಿಸ್‌ ಜಾರಿ ಮಾಡಿತ್ತು. ಹೀಗಿದ್ದರೂ ಕಾಯಂ ಮಾಡುವಂತೆ ಒತ್ತಾಯಿಸಿ ನೌಕರರು ಮುಷ್ಕರ ಮುಂದುವರೆಸಿದ್ದಾರೆ.

Decision to Implement Esma on NHM Employees in Karnataka grg
Author
First Published Mar 19, 2023, 6:31 AM IST

ಬೆಂಗಳೂರು(ಮಾ.20):  ಆರೋಗ್ಯ ಇಲಾಖೆ ನೋಟಿಸ್‌ ನೀಡಿರುವ ಹೊರತಾಗಿಯೂ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಒಳಗುತ್ತಿಗೆ ನೌಕರರ ಮೇಲೆ ಎಸ್ಮಾ ಕಾಯಿದೆ ಅಡಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿರುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಕಾಯಂ ಮಾಡುವಂತೆ ಒತ್ತಾಯಿಸಿ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ 48 ಗಂಟೆಗಳ ಒಳಗಾಗಿ ಸೇವೆಗೆ ಹಾಜರಾಗುವಂತೆ ಆರೋಗ್ಯ ಇಲಾಖೆ ಮಾ.16 ರಂದು ನೋಟಿಸ್‌ ಜಾರಿ ಮಾಡಿತ್ತು. ಹೀಗಿದ್ದರೂ ಕಾಯಂ ಮಾಡುವಂತೆ ಒತ್ತಾಯಿಸಿ ನೌಕರರು ಮುಷ್ಕರ ಮುಂದು ವರೆಸಿದ್ದಾರೆ.

ಮುಷ್ಕರ ನಿರತ ಎನ್‌ಹೆಚ್‌ಎಂ ಸಿಬ್ಬಂದಿಗೆ ಶಾಕ್‌: ಕರ್ತವ್ಯಕ್ಕೆ ಹಾಜರಾಗುವಂತೆ ಡೆಡ್‌ಲೈನ್‌

ಯಾವ ರಾಜ್ಯದಲ್ಲೂ ಕಾಯಂ ಮಾಡಿಲ್ಲ: ಈ ಹಿನ್ನೆಲೆಯಲ್ಲಿ ಟಿಪ್ಪಣಿ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, ಕರ್ನಾಟಕ ರಾಜ್ಯ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಸಂಘದವರು ಫೆ.13ರಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಭೇಟಿ ಮಾಡಿ ಬೇರೆ ರಾಜ್ಯಗಳಲ್ಲಿ ಎನ್‌ಎಚ್‌ಎಂ ಒಳ ಗುತ್ತಿಗೆ ನೌಕರರನ್ನು ಕಾಯಂ ಮಾಡಲಾಗಿದೆ. ಅದರಂತೆ ರಾಜ್ಯದಲ್ಲೂ ಕಾಯಂ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿಯಲ್ಲಿ ಸೂಚಿಸಿದ್ದ ರಾಜ್ಯಗಳ ಪೈಕಿ ಮಣಿಪುರ ರಾಜ್ಯವನ್ನು ಹೊರತುಪಡಿಸಿದರೆ ಒಡಿಶಾ, ಪಂಜಾಬ್‌, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ರಾಜಸ್ತಾನ ಇತರೆ ರಾಜ್ಯಗಳ ದಾಖಲೆಗಳನ್ನು ಪರಿಶೀಲಿಸಿದ್ದು, ಎನ್‌ಎಚ್‌ ಎಂ ಒಳಗುತ್ತಿಗೆ ನೌಕರರನ್ನು ಯಾವ ರಾಜ್ಯದಲ್ಲೂ ಕಾಯಂಗೊಳಿಸಿಲ್ಲ. ಇನ್ನು ನೌಕರರ ಬೇಡಿಕೆಗೆ ಸ್ಪಂದಿಸಿ ಶೇ.15 ರಷ್ಟುವೇತನ ಹೆಚ್ಚಳ ಮಾಡಲಾಗಿದೆ.

ಆರೋಗ್ಯ ಇಲಾಖೆ ತುರ್ತು ಸೇವೆ ಒದಗಿಸುವ ಇಲಾಖೆಯಾಗಿದ್ದು, ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಒಂದು ತಿಂಗಳಿಂದ ಪ್ರತಿಭಟನೆಯನ್ನು ಮುಂದುವರೆಸುತ್ತಿರುವುದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಧಕ್ಕೆಯಾಗಿರುತ್ತದೆ. ಸೇವೆಗೆ ಹಾಜರಾಗುವಂತೆ ನೀಡಿದ ಸೂಚನೆಯನ್ನು ಧಿಕ್ಕರಿಸಿ ಪ್ರತಿಭಟನೆಯನ್ನು ಮುಂದುವರೆಸುವ ವರ್ತನೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ ಎಸ್ಮಾ ಕಾಯಿದೆ ಅಡಿ ಕ್ರಮ ಕೈಗೊಂಡು ಕರ್ತವ್ಯಕ್ಕೆ ಹಾಜರಾಗದ ಪ್ರತಿಭಟನಾಕಾರರ ಮೇಲೆ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Follow Us:
Download App:
  • android
  • ios