ನಿರ್ಮಾಣದ ಅಂತಿಮ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಸಮಾಜ ಸುಧಾರಕ ‘ಶ್ರೀ ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 

ಬೆಂಗಳೂರು (ಅ.21): ನಿರ್ಮಾಣದ ಅಂತಿಮ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಸಮಾಜ ಸುಧಾರಕ ‘ಶ್ರೀ ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಎಟಿಆರ್‌ 72 ಮಾದರಿ ವಿಮಾನ ಹಾರಾಟಕ್ಕಾಗಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವನ್ನು ಏರ್‌ ಬಸ್‌-320 ಮಾದರಿಯ ವಿಮಾನ ಬಂದಿಳಿಯುವ ಸಾಮರ್ಥ್ಯದ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು 347.92 ಕೋಟಿ ರು. ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ಹೆಸರು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೊದಲು ವಿಮಾನ ನಿಲ್ದಾಣವನ್ನು ಎಟಿಆರ್‌ 72 ಮಾದರಿಯ ವಿಮಾನ ಹಾರಾಟಕ್ಕಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಇದೀಗ ಏರ್‌ ಬಸ್‌-320 ಮಾದರಿಯ ವಿಮಾನ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 120 ಕೋಟಿ ರು. ನೀಡಲು ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಒಟ್ಟು 347.92 ಕೋಟಿ ರು. ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಎಸ್ಸಿ, ಎಸ್ಟಿ ಮೀಸಲು ಹೆಚ್ಚಳಕ್ಕೆ ಸುಗ್ರೀವಾಜ್ಞೆ: ಸಂಪುಟ ನಿರ್ಧಾರ

ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆರ್ಥಿಕ, ವಾಣಿಜ್ಯ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಗ್ರೀನ್‌ಫೀಲ್ಡ್‌ ದೇಶೀಯ ವಿಮಾನ ನಿಲ್ದಾಣವನ್ನು ಎಟಿಆರ್‌ 72 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ 220 ಕೋಟಿ ರು. ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಿ 2020ರ ಡಿ.14ರಂದು ಆದೇಶ ಹೊರಡಿಸಲಾಗಿತ್ತು. ಈ ವರ್ಷ ಸೆ.8ರಂದು ನಡೆದ ರಾಜ್ಯಮಟ್ಟದ ತಾಂತ್ರಿಕ ಸಲಹಾ ಮತ್ತು ಅಂದಾಜುಪಟ್ಟಿಪರಿಶೀಲನಾ ಸಮಿತಿಯು 120 ಕೋಟಿ ರು. ಹೆಚ್ಚುವರಿ ಅಂದಾಜುಪಟ್ಟಿಯನ್ನು ಪರಿಶೀಲಿಸಿತು. ಸುಧೀರ್ಘ ಚರ್ಚೆ ನಂತರ ಪರಿಷ್ಕೃತ ಅಂದಾಜನ್ನು ಸರ್ಕಾರದ ಅನುಮೋದನೆ ಪಡೆಯಲು ಸಮಿತಿ ನಿರ್ಧರಿಸಿತು. ಅಂತೆಯೇ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ.

ಸಚಿವ ಸೋಮಣ್ಣ ಕ್ರಿಯಾಶೀಲ ಜನಪ್ರತಿನಿಧಿ: ಸಿಎಂ ಬೊಮ್ಮಾಯಿ

ಪ್ರಸ್ತುತ ನಿರ್ಮಾಣ ಹಂತದಲ್ಲಿಯೇ ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್‌-72ರ ಮಾದರಿಯ ವಿಮಾನಗಳ ಹಾರಾಟದಿಂದ ಎ-320 ವಿಮಾನಗಳ ಹಾರಾಟದ ಸಾಮರ್ಥ್ಯದ ಹಂತಕ್ಕೆ ಒಂದೇ ಬಾರಿಗೆ ಉನ್ನತೀಕರಿಸಿ ನಿರ್ಮಿಸಿದರೆ ಮುಂದೆ ಆಗಬಹುದಾದ ಹೆಚ್ಚುವರಿ ವೆಚ್ಚ ವನ್ನು ಉಳಿಸಬಹುದಾಗಿದೆ. ಎ-320 ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಮಡುವುದರಿಂದ ಮುಂದಿನ 30 ವರ್ಷಗಳವರೆಗೆ ಯಾವುದೇ ವಿಸ್ತರಣೆಯ ಅಗತ್ಯ ಇರುವುದಿಲ್ಲ ಮತ್ತು ಎಲ್ಲಾ ಮಾದರಿಯ ವಿಮಾನಗಳ ಕಾರ್ಯಾಚರಣೆಯನ್ನು ಈ ವಿಮಾನ ನಿಲ್ದಾಣದಿಂದ ಕೈಗೊಳ್ಳಬಹುದಾಗಿದೆ.