Asianet Suvarna News Asianet Suvarna News

ಸಚಿವ ಸೋಮಣ್ಣ ಕ್ರಿಯಾಶೀಲ ಜನಪ್ರತಿನಿಧಿ: ಸಿಎಂ ಬೊಮ್ಮಾಯಿ

ಪ್ರಜಾಪ್ರಭುತ್ವದಲ್ಲಿ ಕ್ರಿಯಾಶೀಲ ಜನಪ್ರತಿನಿಧಿಗಳ ಅಗತ್ಯ ಹೆಚ್ಚಿದ್ದು, ಅಂತಹ ಸಾಲಲ್ಲಿ ನಿಲ್ಲುವ ಸಚಿವ ವಿ.ಸೋಮಣ್ಣ ಯುವ ರಾಜಕಾರಣಿಗಳಿಗೆ ಮಾದರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

CM Basavaraj Bommai Talks About Minister V Somanna At Bengaluru gvd
Author
First Published Oct 21, 2022, 6:49 AM IST

ಬೆಂಗಳೂರು (ಅ.21): ಪ್ರಜಾಪ್ರಭುತ್ವದಲ್ಲಿ ಕ್ರಿಯಾಶೀಲ ಜನಪ್ರತಿನಿಧಿಗಳ ಅಗತ್ಯ ಹೆಚ್ಚಿದ್ದು, ಅಂತಹ ಸಾಲಲ್ಲಿ ನಿಲ್ಲುವ ಸಚಿವ ವಿ.ಸೋಮಣ್ಣ ಯುವ ರಾಜಕಾರಣಿಗಳಿಗೆ ಮಾದರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಶ್ರೀ ವಿ.ಸೋಮಣ್ಣ ಅಭಿನಂದನಾ ಸಮಿತಿ’ ಹೊರತಂದ ವಸತಿ ಸಚಿವ ಸೋಮಣ್ಣ ಅವರ ಕುರಿತಾದ ಅಭಿನಂದನಾ ಗ್ರಂಥ ‘ವಿಜಯಪಥ’ ಬಿಡುಗಡೆ ಮಾಡಿ ಮಾತನಾಡಿದರು. ಇಂತಹ ಕ್ಲಿಷ್ಟಕರ, ಕ್ರಿಯಾಶೀಲ ವ್ಯಕ್ತಿತ್ವವೇ ಸೋಮಣ್ಣ ಅವರ ಯಶಸ್ಸಿಗೆ ಕಾರಣ. 

ದಣಿವರಿಯದೆ ಸಾರ್ವಜನಿಕ ಹಿತಕ್ಕೆ ಪ್ರಾಮುಖ್ಯತೆ ನೀಡುವುದು ಅವರ ಗುಣ. ಅವರನ್ನು ಜನಪ್ರಿಯ ಮಂತ್ರಿ ಎನ್ನುವುದಕ್ಕೆ ಹೆಚ್ಚಾಗಿ ಜನೋಪಯೋಗಿ ಮಂತ್ರಿ ಎನ್ನಬಹುದು ಎಂದು ಬಣ್ಣಿಸಿದರು. ಹೆಚ್ಚು ಓದದಿದ್ದರೂ ಕಾನೂನು ಕಟ್ಟಳೆ ದಾಟಿ ಅಧಿಕಾರಿಗಳಿಂದ ಜನತೆಗಾಗಿ ಕೆಲಸ ಮಾಡಿಸಿಕೊಳ್ಳುವ ಜಾಣ್ಮೆ ಸೋಮಣ್ಣ ಅವರಲ್ಲಿದೆ. ಮಠಗಳು ಹಾಗೂ ಸರ್ಕಾರದ ನಡುವಿನ ಕೊಂಡಿಯಂತಿದ್ದಾರೆ. ಅವರಿಗೆ ವಿಜಯಪಥ ಅಂತಿಮವಾದ ಘಟ್ಟಅಲ್ಲ. ಇನ್ನೊಂದು ದಶಕದ ಬಳಿಕ ಅವರಿಂದ ಮತ್ತಷ್ಟುಜನಸೇವೆ ಸಾಧನೆಯಾಗಿ ‘ದಿಗ್ವಿಜಯ ಪಥ’ ಅಭಿನಂದನ ಗ್ರಂಥ ಹೊರಬರಲಿ ಎಂದು ಆಶಿಸಿದರು. 

ಎಸ್ಸಿ, ಎಸ್ಟಿ ಮೀಸಲು ಹೆಚ್ಚಳಕ್ಕೆ ಸುಗ್ರೀವಾಜ್ಞೆ: ಸಂಪುಟ ನಿರ್ಧಾರ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸೋಮಣ್ಣ ಅವರು ಬೆಂಗಳೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಜನಸೇವೆಯಲ್ಲಿದ್ದಾರೆ. ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ಅವರು ಉದಾಹರಣೆ. ಪಾರದರ್ಶಕ ವ್ಯಕ್ತಿತ್ವ ಹೊಂದಿರುವ ಅವರು ಕ್ಲಿಷ್ಟಕರವಾದ ಸಂದರ್ಭದಲ್ಲಿ ಪಕ್ಷಕ್ಕಾಗಿ ಚುನಾವಣೆ ಗೆಲ್ಲಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಹತ್ತಕ್ಕೆ ಹತ್ತು ಅಂಕ ಪಡೆದಿದ್ದಾರೆ ಎಂದರು. ಕಂದಾಯ ಸಚಿವ ಆರ್‌.ಅಶೋಕ ಮಾತನಾಡಿ, ಬೆಂಗಳೂರಿಗೆ ಬರಿಗೈಯಲ್ಲಿ ಬಂದ ಸೋಮಣ್ಣ ಸ್ವ ಶಕ್ತಿಯಿಂದ ಬೆಳೆದಿದ್ದಾರೆ. ಸೋಮಣ್ಣ ಕನಸು ಕಾಣಲು ಬಯಸದೆ ಕೆಲಸದಲ್ಲೇ ಮಗ್ನರಾಗಿರುತ್ತಾರೆ. 

ವರ್ಚಸ್ಸಿನಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಸ್ಥಾನ ಪಡೆದು ಜನನಾಯಕರಾಗಿದ್ದಾರೆ ಎಂದು ಹೇಳಿದರು. ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದವನು. ರಾಜಕಾರಣ ಮುಳ್ಳಿನ ಹಾಸಿಗೆ. ಯಾರು ಜನರಿಗಾಗಿ ಅಧಿಕಾರ ಸಮರ್ಪಣೆ ಮಾಡುತ್ತಾರೋ ಅವರಿಗೆ ಜನತೆಯೇ ಆಶೀರ್ವದಿಸುತ್ತಾರೆ. ತಂದೆ ತಾಯಿ ನನ್ನ ಯಶಸ್ಸಿಗೆ ಕಾರಣ. ಪತ್ನಿ ಶೈಲಜಾ ಕಳೆದ 46 ವರ್ಷಗಳಿಂದ ಬೆನ್ನಿಗೆ ನಿಂತು ಸಹಕಾರ ನೀಡುತ್ತಿದ್ದಾರೆ. ಗೋವಿಂದರಾಜನಗರ ಕ್ಷೇತ್ರದ ಜನತೆಯನ್ನು ಉಸಿರಿರುವರೆಗೂ ಮರೆಯಲ್ಲ ಎಂದು ತಿಳಿಸಿದರು. 

ಒಕ್ಕಲಿಗರು ಹೆಚ್ಚು ಮೀಸಲು ಕೇಳುವುದು ತಪ್ಪಲ್ಲ: ಸಿಎಂ ಬೊಮ್ಮಾಯಿ

ಸಚಿವ ಸೋಮಣ್ಣ ದಂಪತಿಯನ್ನು ಅಭಿನಂದನಾ ಸಮಿತಿ ಪರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸನ್ಮಾನಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್‌ ಸ್ವಾಗತಿಸಿದರು. ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಕೃತಿಯ ಕುರಿತು ಮಾತನಾಡಿದರು. ಸಂಸದರಾದ ಜಿ.ಎಸ್‌.ಬಸವರಾಜ, ಪ್ರತಾಪ್‌ ಸಿಂಹ, ಉಮೇಶ ಜಾಧವ ಸೇರಿ, ಶಾಸಕ ಅರವಿಂದ್‌ ಬೆಲ್ಲದ, ಸೊಗಡು ಶಿವಣ್ಣ, ಸಾಹಿತಿ ದೊಡ್ಡರಂಗೇಗೌಡ, ಕರವೇ ನಾರಾಯಣ ಗೌಡ ಸೇರಿ ಹಲವರಿದ್ದರು.

Follow Us:
Download App:
  • android
  • ios