ಧರ್ಮಸ್ಥಳದ ನೇತ್ರಾವದಿ ನದಿ ತೀರದಲ್ಲಿ ಪತ್ತೆಯಾದ ಡೆಬಿಟ್ ಮತ್ತು ಪಾನ್ ಕಾರ್ಡ್‌ಗಳು ಮೃತ ವ್ಯಕ್ತಿಯ ತಾಯಿಗೆ ಸೇರಿದ್ದೆಂದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. ಕಾರ್ಡ್‌ಗಳ ಮಾಲೀಕರು ಜೀವಂತವಾಗಿದ್ದು, ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.
ಬೆಳ್ತಂಗಡಿ:ಧರ್ಮಸ್ಥಳ ಸಮಾಧಿ ಪ್ರಕರಣ ಸಂಬಂಧ ನೇತ್ರಾವದಿ ನದಿ ದಂಡೆಯ ಸಮೀಪದ ಪಾಯಿಂಟ್ ನಂ. 1ರಲ್ಲಿ ಪತ್ತೆಯಾದ ಡೆಬಿಟ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇತ್ತೀಚೆಗೆ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದವು. ಈ ಪತ್ತೆಯಾದ ಕಾರ್ಡ್‌ಗಳು ಸಾವಿಗೀಡಾದ ವ್ಯಕ್ತಿಗೆ ಸೇರಿದ್ದಾಗಿರಬಹುದೆಂಬ ಅನುಮಾನಗಳು ವ್ಯಾಪಕವಾಗಿದ್ದವು. ಆದರೆ ಇದೀಗ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಪತ್ತೆಯಾದ ಡೆಬಿಟ್ ಕಾರ್ಡ್, ಮೃತ ವ್ಯಕ್ತಿಯ ತಾಯಿಗೆ ಸೇರಿದ್ದಾಗಿದ್ದು, ಅವರು ಇನ್ನೂ ಜೀವಂತವಾಗಿದ್ದಾರೆ ಎಂಬುದು ದೃಢಪಟ್ಟಿದೆ. ಈ ವಿಚಾರವನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ಸ್ವತಃ ಮಹಿಳೆಯನ್ನು ಸಂಪರ್ಕಿಸುವ ಮೂಲಕ ಖಚಿತಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಪತ್ತೆಯಾದ ಪಾನ್ ಕಾರ್ಡ್ ವಿಷಯದಲ್ಲೂ ಹಿಂದಿನ ವರದಿಗಳಲ್ಲಿ ಈ ಕಾರ್ಡ್ ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಗೆ ಸೇರಿದದ್ದೆಂದು ತಿಳಿದು ಬಂದಿದೆ. ಡೆಬಿಟ್ ಕಾರ್ಡ್ ಕೂಡ ಪಾನ್ ಕಾರ್ಡ್ ಪತ್ತೆಯಾದ ಅವರ ತಾಯಿಗೆ ಸೇರಿರುವುದು ದೃಢವಾಗಿದೆ.
ಪಾಯಿಂಟ್ ನಂಬರ್ 1ರಲ್ಲಿ ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿತ್ತು. ಈ ಬಗ್ಗೆ ಕೊಲೆಯಾದ ಅನನ್ಯಾ ಭಟ್ ಪರ ವಕೀಲ ಮಂಜುನಾಥ್ ಮಾಹಿತಿ ನೀಡಿದ್ದರು. ಒಂದರಲ್ಲಿ ಪುರುಷರ ಹೆಸರು, ಮತ್ತೊಂದರಲ್ಲಿ ಮಹಿಳೆಯ ಹೆಸರು ‘ಲಕ್ಷ್ಮಿ’ ಎಂದಿತ್ತು. ಇದೀಗ ಪ್ರಾಥಮಿಕ ಪರಿಶೀಲನೆಯ ನಂತರ, ಪಾನ್ ಕಾರ್ಡ್ ಹೊಂದಿರುವ ವ್ಯಕ್ತಿ 2025ರ ಮಾರ್ಚ್ ತಿಂಗಳಲ್ಲಿ ಜಾಂಡೀಸ್ ಕಾಯಿಲೆಯಿಂದ ಮೃತಪಟ್ಟಿರುವುದು ಬಹಿರಂಗವಾಗಿದೆ. ಮೃತಪಟ್ಟ ವ್ಯಕ್ತಿಯ ತಾಯಿಗೆ ಸೇರಿದ ಕಾರ್ಡ್ ಇದಾಗಿದೆ.
ಎಸ್‌ಐಟಿ ತಂಡವು ಕಾರ್ಡ್‌ಗಳ ಬಳಕೆದಾರರ ವಿವರಗಳನ್ನು ಪರಿಶೀಲಿಸಿ, ಎಲ್ಲ ರೀತಿಯ ಅನಧಿಕೃತ ಊಹಾಪೋಹಗಳಿಗೆ ತೆರೆ ಎಳೆದಿದೆ. ಈ ಮೂಲಕ, ಡೆಬಿಟ್ ಕಾರ್ಡ್ ಹಾಗೂ ಪಾನ್ ಕಾರ್ಡ್‌ಗಳ ಸುತ್ತಲಿನ ಗೊಂದಲವನ್ನು ನಿವಾರಿಸಿದ್ದು, ಪ್ರಕರಣದ ಇತರ ಅಂಶಗಳತ್ತ ತನಿಖೆಯನ್ನು ಮುಂದುವರೆಸಿದೆ.
