ಬೆಂಗಳೂರು(ಆ.28): ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಆನಂದ್‌ರಾವ್‌ ಸರ್ಕಲ್‌ ಬಳಿ 25 ಮಹಡಿಗಳ ಅವಳಿ ಗೋಪುರ ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರಸ್ತಾವನೆಯ ಪ್ರಾತ್ಯಕ್ಷಿಕೆಯ ಮೂಲಕ ಚರ್ಚಿಸಿದರು. ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ (ಎನ್‌ಬಿಸಿಸಿ) ಪ್ರಸ್ತಾವನೆ ಹಾಗೂ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದೆ. ಪ್ರಸ್ತುತ ಸಿದ್ಧಪಡಿಸಿರುವ ಪ್ರಸ್ತಾವನೆ ನೆಲದ ವಿಸ್ತೀರ್ಣ ಅನುಪಾತ (ಎಫ್‌ಎಆರ್‌) 2:5 ಅನುಪಾತದಲ್ಲಿದೆ. ಆ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಳು ಎಫ್‌ಎಆರ್‌ 4:0 ಅನುಪಾತದಲ್ಲಿರುವುದರಿಂದ ಅದೇ ಮಾದರಿಯಲ್ಲಿ ಅವಳಿ ಗೋಪುರ ನಿರ್ಮಿಸಬೇಕಾಗುತ್ತದೆ ಹಾಗಾಗಿ ಪ್ರಸ್ತಾವನೆಯನ್ನು ಎಫ್‌ಎಆರ್‌ 4:0 ಅನುಪಾತದೊಂದಿಗೆ ಮರುವಿನ್ಯಾಸಗಳಿಸುವಂತೆ ಸೂಚಿಸಿದರು.

ಖಾಸಗಿ ಕೋವಿಡ್‌ ಆಸ್ಪತ್ರೆಗಳು ತೊಂದರೆ ಕೊಟ್ರೆ ಕಠಿಣ ಕ್ರಮ: ಕಮಲ್‌ ಪಂತ್‌

ಒಡಂಬಡಿಕೆ ಕರಡು ಪ್ರತಿಯನ್ನು ಸಿದ್ಧಪಡಿಸಿ ಆರ್ಥಿಕ ಇಲಾಖೆ ಮತ್ತು ಕಾನೂನು ಇಲಾಖೆಯ ಸಹಮತಿಯೊಂದಿಗೆ ಅನುಮೋದನೆ ಪಡೆಯಬೇಕು. ಈ ಪ್ರಸ್ತಾವನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಮುಂದಿನ 15 ದಿನದೊಳಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಕ್ರಮಕೈಗೊಳ್ಳಬೇಕು. ಅವಳಿ ಗೋಪುರ ನಿರ್ಮಾಣದಿಂದ ಬಾಡಿಗೆ ಕಟ್ಟಡಗಳಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಬರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಹಕಾರಿಯಾಗುತ್ತದೆ. ಸುಲಭವಾಗಿ ಏಕಕಾಲದಲ್ಲಿಯೇ ತಮಗೆ ಅಗತ್ಯ ಇರುವ ಕಚೇರಿಗಳಿಗೆ ಭೇಟಿಯಾಗಿ ಸೇವೆ ಪಡೆಯಲು ಅನುಕೂಲವಾಗುತ್ತದೆ ಎಂದರು.

ಎನ್‌ಬಿಸಿಸಿ ಉಪ ಪ್ರಧಾನ ವ್ಯವಸ್ಥಾಪಕ ವೇಣುಗೋಪಾಲ್‌, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್‌ ಪ್ರಸ್ತಾವನೆ ಕುರಿತು ವಿವರಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಮುಖ್ಯ ಅಭಿಯಂತರ ಶಿವಯೋಗಿ ಹಿರೇಮಠ, ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಪಿ.ಕುಮಾರ್‌, ಉಪಕಾರ್ಯದರ್ಶಿ ವಿಜಯಕುಮಾರಿ ಇತರರು ಉಪಸ್ಥಿತರಿದ್ದರು.