ಡಿಸ್ನಿಲ್ಯಾಂಡ್ ಯೋಜನೆಯಿಂದ ಕೆಆರ್‌ಎಸ್ ಅಣೆಕಟ್ಟಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಈ ಬಗ್ಗೆ ಯಾರೂ ಕೂಡಾ ಆತಂಕ ಪಡಬೇಕಾಗಿಲ್ಲ: ಡಿ.ಕೆ.ಶಿವಕುಮಾರ್
ವಿಧಾನ ಪರಿಷತ್(ಜು.07): ಕೃಷ್ಣರಾಜ ಸಾಗರ ಜಲಾಶಯ (ಕೆಆರ್‌ಎಸ್) ಬಳಿ ಕಾವೇರಿ ಪ್ರತಿಮೆ ಹಾಗೂ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಉದ್ಯಾನ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಯೋಜನೆಯಿಂದ ಕೆಆರ್‌ಎಸ್ ಅಣೆಕಟ್ಟಿಗೆ ಯಾವುದೇ ರೀತಿ ಹಾನಿ ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಅಂದಾಜು ಮೊತ್ತ 1425 ಕೋಟಿ ರು.ಗಳನ್ನು ಸಹ ಬಜೆಟ್‌ನಲ್ಲಿ ಒದಗಿಸಲಾಗಿತ್ತು. ಆದರೆ ಕಾರಣಾಂತರಗಳಿಗೆ ನಿಂತುಹೋಗಿದೆ. ಬೆಂಗಳೂರು-ಮೈಸೂರು ಭಾಗದಲ್ಲಿ ಯಾವುದೇ ಮನರಂಜನಾ ಪಾರ್ಕ್‌ಗಳು ಇಲ್ಲ. ಹೀಗಾಗಿ ಗುಂಡೂರಾವ್ ಅವರ ಆಡಳಿತದ ಅವಧಿಯಲ್ಲಿ ಕೆಆರ್‌ಎಸ್ ಬಳಿ ಉದ್ಯಾನ ನಿರ್ಮಾಣ ಮಾಡಲಾಗಿದೆ. ಈಗ ಅಣೆಕಟ್ಟಿನಿಂದ ದೂರದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, 198 ಸರ್ಕಾರಿ ಭೂಮಿ ಸಹ ಇದೆ. ಪ್ರಸ್ತುತ ಯೋಜನಾ ವರದಿಯ ಅನುಮೋದನೆಗಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದು, ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನ ಸಮಿತಿ ವರದಿ ಸಲ್ಲಿಸಲು ಹಾಗೂ ಕೆಲವು ಮಾರ್ಪಡಿತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ. ಅದರಂತೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
'ಡಿಸ್ನಿಲ್ಯಾಂಡ್ ಯೋಜನೆಗೆ ಮತ್ತೆ ಚಾಲನೆ'
ಯೋಜನೆಯಿಂದ ಕೆಆರ್‌ಎಸ್ ಅಣೆಕಟ್ಟಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಈ ಬಗ್ಗೆ ಯಾರೂ ಕೂಡಾ ಆತಂಕ ಪಡಬೇಕಾಗಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
