ಬೆಂಗಳೂರಿಗೂ ಡಿಕೆಶಿಗೂ ಏನು ಸಂಬಂಧ ಎಂದಿದ್ದ ಅಶ್ವತ್ಥ, 6ನೇ ವಯಸ್ಸಿಂದಲ ಬೆಂಗಳೂರಲ್ಲಿದ್ದೇನೆ: ಡಿಕೆಶಿ ಎದಿರೇಟು, ಚುಂಚನಗಿರಿ ಶ್ರೀಗಳೆದುರೇ ಮಾಜಿ ಸಚಿವನ ವಿರುದ್ಧ ಡಿ.ಕೆ. ಶಿವಕುಮಾರ್‌ ವಾಗ್ದಾಳಿ

ಬೆಂಗಳೂರು(ಜೂ.28):  ‘ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಸಚಿವನಾಗಲು ನನಗೂ ಬೆಂಗಳೂರಿಗೂ ಏನು ಸಂಬಂಧ? ಎಂದು ಕೇಳುವವರು ಮೊದಲು ನನ್ನ ಇತಿಹಾಸ ತಿಳಿದುಕೊಳ್ಳಬೇಕು. ನನ್ನ 6ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ರಾಜಕಾರಣಕ್ಕಾಗಿ ಯಾರೂ ಮಾತನಾಡಬಾರದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮಾಜಿ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಹೇಳಿಕೆಗೆ ತಿರುಗೇಟು ನೀಡಿದರು.

ಸದಾಶಿವನಗರದಲ್ಲಿ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿಯೇ ವೇದಿಕೆಯಲ್ಲಿದ್ದ ಡಾ. ಅಶ್ವತ್ಥನಾರಾಯಣ ಅವರ ಟೀಕೆಗೆ ಉತ್ತರ ನೀಡಿದ ಡಿ.ಕೆ. ಶಿವಕುಮಾರ್‌, ‘ಅಶ್ವತ್ಥನಾರಾಯಣ ಅವರು ಇತಿಹಾಸ ತಿಳಿದುಕೊಳ್ಳಬೇಕು. ನಾನು ರಾಜಾಜಿನಗರದ ಎನ್‌ಪಿಎಸ್‌ ಶಾಲೆಯಿಂದ ನನ್ನ ಶಿಕ್ಷಣ ಆರಂಭಿಸಿದೆ. ಬೆಂಗಳೂರಿಗೂ ನನಗೂ ಬಹಳ ನಂಟಿದೆ. ನೀವು ರಾಜಕೀಯವಾಗಿ ಮಾತನಾಡಿದ್ದೀರಿ. ಆದರೂ ನಿಮಗೆ ನನ್ನ ಇತಿಹಾಸ ಗೊತ್ತಿಲ್ಲ’ ಎಂದು ಹೇಳಿದರು.

Bengaluru: ಸಭೆಗೆ ಡಿಸಿಎಂ 1 ತಾಸು ತಡ: ಹೊರ ನಡೆದ ಬಿಜೆಪಿ ಶಾಸಕರು

‘ಕೆಂಪೇಗೌಡರು ಬೆಂಗಳೂರಿನಲ್ಲಿ ಏಕೆ ಹುಟ್ಟಿದರು? ಕೆಂಗಲ್‌ ಹನುಮಂತಯ್ಯ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಏಕೆ ಹುಟ್ಟಿದರು ಅಂತೆಲ್ಲ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ. ಅವರೆಲ್ಲ ಈ ಪುಣ್ಯಭೂಮಿಯಲ್ಲಿ ಹುಟ್ಟಿದ್ದಾರೆ, ಅವರವರ ಧರ್ಮಕಾರ್ಯ ನಡೆಸಿದ್ದಾರೆ. ಅದನ್ನು ಅರಿಯಬೇಕು’ ಎಂದರು.

‘ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿಲ್ಲ. ಕೆಲ ದಿನಗಳ ಹಿಂದೆ ನಡೆದ ಕಂಪೇಗೌಡ ಜಯಂತಿಗೆ ಸಂಬಂಧಿಸಿದ ಸಭೆಯಲ್ಲಿ ಶೇ. 75ರಷ್ಟು ಒಕ್ಕಲಿಗರೇ ಹಾಜರಿದ್ದರು. ಉಳಿದ ಸಮುದಾಯದವರು ಕಡಿಮೆಯಿದ್ದರೆ. ಕೆಂಪೇಗೌಡ ಅವರು ಜಾತಿ, ಧರ್ಮ ಮೀರಿದವರು. ಎಲ್ಲ ಸಮುದಾಯದವರು ಅಭಿವೃದ್ಧಿ ಹೊಂದಲಿ ಎಂದು ಜಾತಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದರು. ಅದು ಅವರ ದೂರದರ್ಶಿತ್ವ’ ಎಂದರು ತಿಳಿಸಿದರು.

ಡಿ.ಕೆ. ಶಿವಕುಮಾರ್‌ ಅವರು ವೇದಿಕೆಯಲ್ಲಾಡಿದ ಮಾತುಗಳಿಗೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉತ್ತರ ನೀಡಿದ ಡಾ ಅಶ್ವತ್ಥನಾರಾಯಣ್‌, ‘ಹಿಂದೆ ನಾನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ನನಗೂ ರಾಮನಗರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು. ಅದಕ್ಕಾಗಿಯೇ ನಾನು ಪ್ರಶ್ನೆ ಮಾಡಿದ್ದೆ. ಯಾವ ಸರ್ಕಾರವೂ ಕೊಡದಷ್ಟು ಯೋಜನೆಗಳನ್ನು ನಾವು ರಾಮನಗರಕ್ಕೆ ನೀಡಿದ್ದೇವೆ. ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನಾನು ಯಾವುದೇ ವ್ಯಕ್ತಿಗತವಾಗಿ ಮಾತನಾಡಿಲ್ಲ. ನಾಡಪ್ರಭು ಕೆಂಪೇಗೌಡರು ಮಾಡಿದ ಶೇ. 5ರಷ್ಟುಅಭಿವೃದ್ಧಿಯನ್ನು ಈ ಸರ್ಕಾರ ಮಾಡಲಿ. ಡಿ.ಕೆ. ಶಿವಕುಮಾರ್‌ ಅವರಿಗೆ ಶುಭ ಕೋರುತ್ತೇನೆ’ ಎಂದರು.