ಕುಮಾರಸ್ವಾಮಿ ಅವರು ನಾಡಿನ ಮುಖ್ಯಮಂತ್ರಿಗಳಿಗೆ ಮೀರ್‌ ಸಾಧಿಕ್‌ ಎಂದಿದ್ದಾರೆ. ಅವರು ಹಾರ್ವರ್ಡ್‌ ವಿ.ವಿಯಲ್ಲಿ ಡಾಕ್ಟರೇಟ್‌ ತೆಗೆದುಕೊಂಡಿರಬೇಕು. ಸರ್ಕಾರ ಬಿದ್ದಾಗ ಅದಕ್ಕೆ ಕಾರಣ ಯಾರು ಎಂಬ ಬಗ್ಗೆ ಅವರೇ ಅಧಿವೇಶನದಲ್ಲಿ ನುಡಿಮುತ್ತು ಉದುರಿಸಿದ್ದಾರೆ. ಎಲ್ಲದರ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆ ಮಾಡೋಣ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ಅ.26): ‘ನಿಮ್ಮನ್ನು ಅಧಿಕಾರದಿಂದ ಇಳಿಸಿದವರ ಜೊತೆ ಸೇರಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಮೀರ್‌ಸಾಧಿಕ್ ಎನ್ನುತ್ತಿದ್ದೀರಲ್ಲ. ಮಾಧ್ಯಮಗಳ ಎದುರು ಮಾಡುವ ಟೀಕೆಗಳು ಸಾಯುತ್ತವೆ. ಬನ್ನಿ ಕುಮಾರಣ್ಣ ನಿಜವಾದ ಮೀರ್‌ ಸಾಧಿಕ್‌ ಯಾರು ಎಂಬುದನ್ನು ಸದನದಲ್ಲೇ ಚರ್ಚೆ ಮಾಡೋಣ. ಎಲ್ಲವೂ ದಾಖಲೆಗಳಲ್ಲಿ ಉಳಿಯಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪಂಥಾಹ್ವಾನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನಾಡಿನ ಮುಖ್ಯಮಂತ್ರಿಗಳಿಗೆ ಮೀರ್‌ ಸಾಧಿಕ್‌ ಎಂದಿದ್ದಾರೆ. ಅವರು ಹಾರ್ವರ್ಡ್‌ ವಿ.ವಿಯಲ್ಲಿ ಡಾಕ್ಟರೇಟ್‌ ತೆಗೆದುಕೊಂಡಿರಬೇಕು. ಸರ್ಕಾರ ಬಿದ್ದಾಗ ಅದಕ್ಕೆ ಕಾರಣ ಯಾರು ಎಂಬ ಬಗ್ಗೆ ಅವರೇ ಅಧಿವೇಶನದಲ್ಲಿ ನುಡಿಮುತ್ತು ಉದುರಿಸಿದ್ದಾರೆ. ಎಲ್ಲದರ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆ ಮಾಡೋಣ ಎಂದು ಹೇಳಿದರು.

ಡಿಕೆಶಿ ಬೆಂಗಳೂರು ಪ್ಲ್ಯಾನ್‌: ರಾಮನಗರಕ್ಕೇನು ಲಾಭ?

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ತೆಗೆದವರು ಸಿದ್ದರಾಮಯ್ಯ ಎಂದು ಒಂದಷ್ಟು ದಿನ, ಡಿ.ಕೆ.ಶಿವಕುಮಾರ್ ಎಂದು ಮತ್ತೊಂದಷ್ಟು ದಿನ ಹೇಳುತ್ತಾರೆ. ಈ ಸರ್ಕಾರ ಬೀಳಲು ಯಡಿಯೂರಪ್ಪ ಅವರು ಮತ್ತು ಅವರ ಎಲ್ಲಾ ಸಹೋದ್ಯೋಗಿಗಳು ಹಣಕೊಟ್ಟು, ಪಿತೂರಿ ನಡೆಸಿದ್ದರು ಎಂದು ಕುಮಾರಸ್ವಾಮಿ ಅವರೇ ಸದನದಲ್ಲಿ ಹೇಳಿದ್ದರು. ಇವೆಲ್ಲಾ ಮರೆತು ಹೋಗಿದೆಯೇ ಎಂದು ತಿರುಗೇಟು ನೀಡಿದರು.

ನಾವು ಕೊಟ್ಟ ಬೆಂಬಲವನ್ನು ಉಳಿಸಿಕೊಳ್ಳಲಾಗದೆ, ಸರ್ಕಾರವನ್ನು ಉರುಳಿಸಲು ಹಗಲು-ರಾತ್ರಿ ಶ್ರಮಪಟ್ಟ ಬೆಳಗಾವಿ, ಚನ್ನಪಟ್ಟಣ ಹಾಗೂ ಬೆಂಗಳೂರಿನವನ ಜೊತೆ ಸೇರಿದ್ದೀರಿ. ಬೆನ್ನಿಗೆ ಚೂರಿ ಹಾಕಿದವರ ಜತೆ ಕೈ ಜೋಡಿಸಿದ್ದೀರಿ. ನಿಮ್ಮ ರಾಜಕಾರಣದ ಮೌಲ್ಯ ಏನಾಯಿತು? ಎಂದು ಪರೋಕ್ಷವಾಗಿ ರಮೇಶ್‌ ಜಾರಕಿಹೊಳಿ, ಯೋಗೇಶ್ವರ್‌ ಹಾಗೂ ಅಶ್ವತ್ಥನಾರಾಯಣ್‌ ಹೆಸರು ಹೇಳದೆ ಟೀಕಿಸಿದರು.

ನಿಮ್ಮ ಜೊತೆ ಹಗಲು- ರಾತ್ರಿ ಬೆನ್ನಿಗೆ ನಿಂತುಕೊಂಡ, ಅಂದು ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ರಾತ್ರೋರಾತ್ರಿ ರಾಜ್ಯಪಾಲರನ್ನು ಭೇಟಿಮಾಡಿ, ತಾವು ಯಾವುದೇ ಹುದ್ದೆಗಳನ್ನು ಅಲಂಕರಿಸದೆ, ಯಾವುದೇ ಷರತ್ತುಗಳನ್ನು ವಿಧಿಸದೆ, ಐದು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಗಳಾಗಿ ಎಂದು ಆಶೀರ್ವಾದ ಮಾಡಿದರು. ಅದಕ್ಕಾದರೂ ಕೃತಜ್ಞತೆ ಬೇಡವೇ? ಎಂದು ಕಿಡಿ ಕಾರಿದರು.

ಎಚ್‌ಡಿಕೆ ವಿರುದ್ಧ ತೊಡೆ ತಟ್ಟಿದ ಡಿಕೆಶಿ ಶಪಥದ ಹಿಂದಿದೆ ಭಾರೀ ರಾಜಕೀಯ ಲೆಕ್ಕಾಚಾರ!

ಟಿವಿಯಲ್ಲಿ ಬಹಿರಂಗ ಚರ್ಚೆಗೆ ಡಿಕೆಶಿ ಆಹ್ವಾನ

‘ನಾನು ಕೇವಲ ಉಪಮುಖ್ಯಮಂತ್ರಿ. ರಾಜ್ಯದ ಜನ ಎರಡು ಬಾರಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದಾರೆ. ರಾಮನಗರಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ವಿಧಾನಸಭೆಗೆ ತೆಗೆದುಕೊಂಡು ಬನ್ನಿ ಅಣ್ಣಾ’ ಎಂದು ಶಿವಕುಮಾರ್‌ ಅವರು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.

ಇದೇ ವೇಳೆ 1983 ಕ್ಕಿಂತ ಮುಂಚಿತವಾಗಿ ಅಂದರೆ ದೇವೆಗೌಡರು ಲೋಕೋಪಯೋಗಿ ಸಚಿವರಾಗುವುದಕ್ಕೆ ಮುಂಚಿತವಾಗಿ ಕನಕಪುರದಲ್ಲಿ ಒಂದೇ ಒಂದು ರಸ್ತೆ ಇರಲಿಲ್ಲ ಎಂದು ಟ್ವೀಟ್‌ ಮಾಡಿದ್ದೀರಿ. ಇದರ ಬಗ್ಗೆ ಎಲ್ಲೆಲ್ಲೊ ಚರ್ಚೆ ನಡೆಸಲು ಹೋಗುವುದಿಲ್ಲ. ಗಾಳಿಯಲ್ಲಿ ಗುಂಡು ಹೊಡೆದರೆ ಆಗುವುದಿಲ್ಲ. ಯಾವುದೇ ಟಿವಿ ಮಾಧ್ಯಮದಲ್ಲಿ ನಾನು ನೇರವಾಗಿ ಚರ್ಚೆಗೆ ತಯಾರಿದ್ದೇನೆ. ಎರಡು ಮೂರು ದಿನ ಸಮಯ ಕೊಡಿ, ನಾನು‌ ಬಹಿರಂಗ ಚರ್ಚೆಗೆ ಸಿದ್ದ ಎಂದು ಹೇಳಿದರು.