ಬೆಂಗಳೂರು ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಸುರಂಗ ನಿರ್ಮಾಣ, ಎಲ್ಲೆಲ್ಲಿ ಬರಲಿದೆ ಸುರಂಗ ರಸ್ತೆ?
ಬೆಂಗಳೂರು ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಸುರಂಗ ರಸ್ತೆ ನಿರ್ಮಿಸಲು ಡಿಸಿಎಂ ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರು ಉಸ್ತುವಾರಿ ಡಿಸಿಎಂ ಡಿಕೆಶಿ ಸುರಂಗ ರಸ್ತೆ ಸಲಹಾ ಸಂಸ್ಥೆ ಜೊತೆ ಸಭೆ ನಡೆಸಿದ್ದಾರೆ.
ಬೆಂಗಳೂರು (ಜು.5): ‘ಬ್ರ್ಯಾಂಡ್ ಬೆಂಗಳೂರು’ ಹೆಸರಿಗೆ ಅರ್ಥ ಬರುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಸುರಂಗ ರಸ್ತೆ ನಿರ್ಮಿಸಲು ಡಿಸಿಎಂ ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರು ಉಸ್ತುವಾರಿ ಡಿಸಿಎಂ ಡಿಕೆಶಿ ಸುರಂಗ ರಸ್ತೆ ಸಲಹಾ ಸಂಸ್ಥೆ ಜೊತೆಗೆ ಮತ್ತೊಮ್ಮೆ ಸಭೆ ನಡೆಸಿದ್ದಾರೆ. ಬೆಂಗಳೂರು ಕೇಂದ್ರದ ಸುತ್ತಲ ಹೊರವಲಯಗಳಿಗೆ ಸುರಂಗ ಸಂಪರ್ಕ ರಸ್ತೆಗಳು ನಿರ್ಮಿಸಲು ಯೋಜಿಸಲಾಗಿದ್ದು, ಮೊದಲ ಹಂತದಲ್ಲಿ 50 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಖಾಸಗಿ ಸಹಭಾಗಿತ್ಬದಲ್ಲಿ 22 ಸಾವಿರ ಕೋಟಿ ವೆಚ್ಚದ ಸುರಂಗ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಈ ಮೂಲಕ ಎಲಿವೇಟೆಡ್ ಕಾರಿಡಾರ್ ಬದಲು ಸುರಂಗ ಕಾರಿಡಾರ್ ಮಾಡಲು ಡಿಕೆಶಿ ಯೋಜನೆ ಹಾಕಿದ್ದಾರೆ.
ಕಳೆದ ಜೂನ್ ನಲ್ಲಿ ಕೂಡ ಈ ಸಂಬಂಧ ಸಭೆ ನಡೆಸಲಾಗಿತ್ತು. ನಗರಾಭಿವೃದ್ಧಿ ಸಚಿವ ಡಿಕೆಶಿನೇತೃತ್ವದಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಕುರಿತು ಮೊದಲ ಸಭೆಯಲ್ಲಿ ವಿವಿಧ ಕ್ಷೇತ್ರದ 42 ಮಂದಿ ತಜ್ಞರು, ಗಣ್ಯರು ನಗರದ ಸಮಗ್ರ ಅಭಿವೃದ್ಧಿ ಸಂಬಂಧ ಬಗ್ಗೆ ಚರ್ಚೆ ನಡೆಸಲಾಗಿತ್ತು. ಸುರಂಗ ನಿರ್ಮಾಣಕ್ಕೆ ಸರ್ಕಾರ ಹಣ ನೀಡಬಾರದು, 50ರಿಂದ 60 ವರ್ಷ ಗುತ್ತಿಗೆ ಆಧಾರದಲ್ಲಿ ಖಾಸಗಿ ಕಂಪನಿಗಳೇ ಸುರಂಗ ರಸ್ತೆ ನಿರ್ಮಿಸಲಿವೆ. ಗುತ್ತಿಗೆ ಅವಧಿ ಮುಕ್ತಾಯಗೊಂಡ ಬಳಿಕ ಸರ್ಕಾರ ನಿರ್ವಹಣೆ ಮಾಡಬಹುದು ಎಂಬ ಸಲಹೆಗಳು ಅಂದಿನ ಸಭೆಯಲ್ಲಿ ಬಂದಿತ್ತು.
Bengaluru: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ
ಫ್ಲೈಓವರ್ ಕಾರಿಡಾರ್ ನಿರ್ಮಿಸುವಾಗ ಜನರಿಗೆ ಕಿರಿಕಿರಿ, ಟ್ರಾಫಿಕ್ ಜಾಮ್ ಮಾತ್ರವಲ್ಲ ಇದಕ್ಕಾಗಿ ಭೂಸ್ವಾದೀನ ಕೂಡ ಮಾಡಬೇಕು. ಆದರೆ ಸುರಂಗ ರಸ್ತೆಗೆ ಫ್ಲೈಓವರ್ ನಷ್ಟು ಭೂಸ್ವಾದೀನ ಬೇಕಿಲ್ಲ, ಟ್ರಾಫಿಕ್ ಕಿರಿಕಿರಿಯೂ ಕಡಿಮೆಯಾಗಿರುತ್ತದೆ. ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ - ಖಾಸಗಿ ಸಹಭಾಗಿತ್ವ) ಅಥವಾ ಬಿಓಟಿ (ಬಿಲ್ಟ್ ಆಪರೇಟ್ ಟ್ರಾನ್ಸಫರ್ - ನಿರ್ಮಾಣ - ನಿರ್ವಹಣೆ) ಮಾದರಿಯಲ್ಲಿ ನಿರ್ಮಿಸಲು ಚಿಂತನೆ. ಸುರಂಗ ರಸ್ತೆಗೆ ಟೋಲ್ ವಿಧಿಸಿ ನಿರ್ಮಿಸಿದವರ ಹಣ ವಾಪಸ್ ಗೆ ಯೋಚನೆ ಮಾಡಲಾಗಿದೆ.
ಭೂಸ್ವಾದೀನ ಮತ್ತು ವ್ಯವಸ್ಥೆಯ ಸಹಕಾರ ಮಾತ್ರ ಸರ್ಕಾರದ ಜವಾಬ್ದಾರಿ, ಹಣ ಸಂಪೂರ್ಣ ಖಾಸಗಿಯದ್ದು, ಬೆಂಗಳೂರಿಗೆ 100 ಕಿಮೀ ಸುರಂಗ ರಸ್ತೆಯ ಅಗತ್ಯವಿದೆ, ಮೊದಲ ಹಂತದಲ್ಲಿ 50 ಕಿಮೀ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಎಲ್ಲೆಲ್ಲಿ ಬರಲಿದೆ ಸುರಂಗ ರಸ್ತೆ?
- ಉತ್ತರದಿಂದ ದಕ್ಷಿಣ ಕಾರಿಡಾರ್ - ಬಳ್ಳಾರಿ ರಸ್ತೆ ಟು ಹೊಸೂರು ರೋಡ್ - ಒಟ್ಟು 27 ಕಿ.ಮೀ - ಯಲಹಂಕ - ಮೇಖ್ರಿ ಸರ್ಕಲ್ ಮಾರ್ಗವಾಗಿ ಕೇಂದ್ರೀಯ ರೇಷ್ಮೆಮಂಡಳಿವರೆಗೆ.
- ಪೂರ್ವದಿಂದ ಪಶ್ಚಿಮ ಕಾರಿಡಾರ್ 1 - ಕೆ.ಆರ್ ಪುರದಿಂದ ಗೊರಗುಂಟೆ ಪಾಳ್ಯ - 29 ಕಿಮೀ - ಹಳೇ ಮದ್ರಾಸ್ ರಸ್ತೆ - ಐಟಿಪಿಎಲ್ - ವರ್ತುಲ ರಸ್ತೆ, ರಾಮಮೂರ್ತಿ ನಗರ ಕಡೆಯಿಂದ ಹೊರಗುಂಟೆ ಪಾಳ್ಯವರೆಗೆ
- ಪೂರ್ವದಿಂದ ಪಶ್ಚಿಮ ಕಾರಿಡಾರ್ 2 - ಓಲ್ಡ್ ಏರ್ ಪೋರ್ಟ್ ರೋಡ್ ನಿಂದ ಮೈಸೂರು ರಸ್ತೆ - 28.90 ಕಿಮೀ - ವರ್ತೂರು ಕೋಡಿಯಿಂದ ಜ್ಞಾನಭಾರತಿವರೆಗೂ.
- ಸಂಪರ್ಕ ಕಾರಿಡಾರ್ 1 - 4.5 ಕಿಮೀ - ಸೇಂಟ್ ಜಾನ್ ಆಸ್ಪತ್ರೆ ಜಂಕ್ಷನ್ ನಿಂದ ಅಗರವರೆಗು
- ಸಂಪರ್ಕ ಕಾರಿಡಾರ್ 2 - 2.8 ಕಿಮೀ - ಪೂರ್ವ ಪಶ್ಚಿಮ ಕಾರಿಡಾರ್ 1 ಮತ್ತು 2ಕ್ಕೂ ಸಂಪರ್ಕಿಸುವ ಸುರಂಗ
- ಸಂಪರ್ಕ ಕಾರಿಡಾರ್ 3 - 6.45 ಕಿಮೀ - ವೀಲರ್ಸ್ ರಸ್ತೆ ಜಂಕ್ಷನ್ ನಿಂದ ಹೊರವರ್ತುಲ ರಸ್ತೆಯ ಕಲ್ಯಾಣನಗರಕ್ಕೆ ಸಂಪರ್ಕ ಸುರಂಗ.