Asianet Suvarna News Asianet Suvarna News

ಕೆಂಪೇಗೌಡರ ಸಮಾಧಿ ಸ್ಥಳ ಶೀಘ್ರ ಜಾಗತಿಕ ಪ್ರವಾಸಿ ತಾಣ

ಐದು ಶತಮಾನಗಳ ಹಿಂದೆ ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂದಕಾಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ನಗರವಾಗಿ ಐತಿಹಾಸಿಕ ಮನ್ನಣೆ ಪಡೆದಿದೆ. ಬೆಂದಕಾಳೂರಿಗೆ ರೂಪಕೊಟ್ಟ, ಕೆಂಪೇಗೌಡರ ದೂರದೃಷ್ಟಿಯ ನಗರಾಭಿವೃದ್ಧಿ ಯೋಜನೆಗಳು ಇಂದಿಗೂ ಪ್ರಸ್ತುತ. ಅವರ ಆಡಳಿತ ವೈಖರಿ, ರಾಜಕೀಯ, ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಅಧ್ಯಯನಗಳು ನಡೆಯಬೇಕಿದ್ದು, ಆ ಕಾರ್ಯ ಸಾಗುತ್ತಲೇ ಇದೆ.

DCM CN Ashwath Narayan interview on Kempegowda Jayanti
Author
Bengaluru, First Published Jun 27, 2020, 8:55 PM IST

ಬೆಂಗಳೂರು (ಜೂ. 27): ಐದು ಶತಮಾನಗಳ ಹಿಂದೆ ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂದಕಾಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ನಗರವಾಗಿ ಐತಿಹಾಸಿಕ ಮನ್ನಣೆ ಪಡೆದಿದೆ. ಬೆಂದಕಾಳೂರಿಗೆ ರೂಪಕೊಟ್ಟ, ಕೆಂಪೇಗೌಡರ ದೂರದೃಷ್ಟಿಯ ನಗರಾಭಿವೃದ್ಧಿ ಯೋಜನೆಗಳು ಇಂದಿಗೂ ಪ್ರಸ್ತುತ. ಅವರ ಆಡಳಿತ ವೈಖರಿ, ರಾಜಕೀಯ, ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಅಧ್ಯಯನಗಳು ನಡೆಯಬೇಕಿದ್ದು, ಆ ಕಾರ್ಯ ಸಾಗುತ್ತಲೇ ಇದೆ.

ಇದೀಗ ನಾಡುಪ್ರಭು ಕೆಂಪೇಗೌಡರ 511ನೇ ಜಯಂತಿಯ ಸಂಭ್ರಮದಲ್ಲಿ ನಾಡು ಇದೆ. ಇತಿಹಾಸ ಪುಟದಲ್ಲಿರುವ ಕೆಂಪೇಗೌಡರ ಅತಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್‌ ಪಾರ್ಕ್ ಅವರ ಹೆಸರಿನಲ್ಲೇ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಲೆ ಎತ್ತುತ್ತಿದ್ದು, ಜೂ.27ರಂದು (ಶನಿವಾರ) ಅಡಿಗಲ್ಲು ಹಾಕಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕೆಂಪೇಗೌಡರ ಇತಿಹಾಸ, ಸಾಧನೆ ಕುರಿತು ಉಪಮುಖ್ಯಮಂತ್ರಿಗಳೂ ಆಗಿರುವ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌ ಅವರು ‘ಕನ್ನಡಪ್ರಭ’ಕ್ಕೆ ಸಂದರ್ಶನ ನೀಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

108 ಅಡಿ ಕೆಂಪೇಗೌಡ ಪ್ರತಿಮೆಗೆ ಇಂದು ಶಂಕು: 23 ಎಕರೆ ಜಾಗದಲ್ಲಿ ಸೆಂಟ್ರಲ್‌ ಪಾರ್ಕ್!

* ಮತ್ತೊಂದು ಕೆಂಪೇಗೌಡ ಜಯಂತಿ ಆಚರಣೆ ಬಂದಿದೆ?

ಜಯಂತಿಯಂದು ಮಾತ್ರವಲ್ಲ, ನಾಡಿನ ಪ್ರತಿಯೊಬ್ಬರೂ ಅನುದಿನವೂ ಸ್ಮರಿಸಲೇಬೇಕಾದ ಸ್ಮರಣೀಯರಲ್ಲಿ ನಾಡಪ್ರಭು ಕೆಂಪೇಗೌಡರು ಅಗ್ರಮಾನ್ಯರು. ಅಪ್ರತಿಮ ಆಡಳಿತಗಾರರೂ, ಪ್ರಖರ ದೂರದೃಷ್ಟಿಯುಳ್ಳವರೂ ಆಗಿದ್ದ ಕೆಂಪೇಗೌಡರು ಐದು ಶತಮಾನಗಳ ಹಿಂದೆ ಕಟ್ಟಿದ ಬೆಂಗಳೂರೆಂಬ ಕನಸಿನ ನಗರಿಯಲ್ಲಿ ನಾವೆಲ್ಲರೂ ಇದ್ದೇವೆ. ನಾನು ಅವರ ಪ್ರಭಾವದಲ್ಲಿದ್ದೇನೆ. ಅಲ್ಲದೆ, ಅವರ ಅದೆಷ್ಟೋ ವಿಷಯಗಳ ಬಗ್ಗೆ ಚಕಿತನಾಗಿದ್ದೇನೆ.

* ನಿಮ್ಮ ಮೇಲೆ ಕೆಂಪೇಗೌಡರು ಹೇಗೆ ಪ್ರಭಾವ ಬೀರಿದ್ದಾರೆ?

ಕೆಂಪೇಗೌಡರ ಸಮಾಧಿಯುಳ್ಳ ಕೆಂಪಾಪುರಕ್ಕೆ ಅನತಿ ದೂರದ ಗ್ರಾಮದಲ್ಲಿ (ಚಿಕ್ಕಕಲ್ಯ) ಹುಟ್ಟಿದ ನಾನು ಬಾಲ್ಯದಿಂದಲೇ ಅವರ ಕಥೆ, ಸಾಹಸಗಾಥೆಗಳನ್ನು ಕೇಳುತ್ತ ಬೆಳೆದವನು. ನನ್ನ ಪೋಷಕರು ಹೇಳುತ್ತಿದ್ದ ಕಥೆಗಳು ನನ್ನ ಸ್ಮೃತಿಪಟಲದಲ್ಲಿ ಅಚ್ಚೊತ್ತಿವೆ. ಜೀವನದಲ್ಲಿ ನನ್ನ ಪಯಣದ ಪಥಗಳೂ ಬದಲಾಗುತ್ತಿದ್ದಂತೆಯೇ ನನಗೆ ಕೆಂಪೇಗೌಡರ ಕುರಿತಾದ ಆಸಕ್ತಿ, ಅವರ ಬಗ್ಗೆ ಅಧ್ಯಯನಶೀಲತೆಯ ಉತ್ಕಟತೆ ಹೆಚ್ಚಾಯಿತು. ಅದರಲ್ಲೂ ಶಾಸಕನಾದ ಮೇಲೆ, ಮಲ್ಲೇಶ್ವರ ಕ್ಷೇತ್ರದ ಜನತೆಯ ಆಶೋತ್ತರಗಳನ್ನು ಈಡೇರಿಸಲು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಾಗಲೆಲ್ಲ ಕೆಂಪೇಗೌಡರ ದಾರ್ಶನಿಕತೆ, ಅವರ ಅಭಿವೃದ್ಧಿಶೀಲತೆಯೂ ನನ್ನನ್ನು ಹೆಚ್ಚು ಕಾಡಿದ್ದರಲ್ಲಿ ಅತಿಶಯವಿಲ್ಲ. ಐದು ಶತಮಾನಗಳೇ ಆಗಿಹೋದ ಮೇಲೆಯೂ ಅವರ ಅಭಿವೃದ್ಧಿಯ ಕುರುಹುಗಳು ಅಚ್ಚಳಿಯದೇ ಉಳಿದಿವೆ ಎಂದರೆ ಅವರಿಂದ ಪ್ರಭಾವಕ್ಕೊಳಗಾಗದೇ ಇರಲು ಹೇಗೆ ಸಾಧ್ಯ ಹೇಳಿ.

* ಕೆಂಪೇಗೌಡರ ಆಡಳಿತದ ಕುರಿತು ಸಮಗ್ರ ಮಾಹಿತಿಯ ಕೊರತೆ ಇದೆ ಅಂತ ಅನ್ನಿಸಿದೆಯೇ?

ವಿಜಯನಗರ, ಅದರಲ್ಲೂ ಶ್ರೀಕೃಷ್ಣದೇವರಾಯರ ಸಮಕಾಲೀನರಾಗಿ ಅವರ ಸಾಮ್ರಾಜ್ಯದ ದಕ್ಷಿಣದಲ್ಲಿ ರಾಮರಾಜ್ಯದಂತಹ ಆಡಳಿತ ನಡೆಸಿದ ಕೆಂಪೇಗೌಡರ ಬಗ್ಗೆ ಇನ್ನಷ್ಟುಆಳವಾದ ಅಧ್ಯಯನ ಅಗತ್ಯವಿದೆ. ಬೆಂಗಳೂರು ಕಟ್ಟಿದರೆಂಬ ವಿಷಯಕ್ಕಿಂತ ನಂಬಿಕೆ, ಆತ್ಮವಿಶ್ವಾಸ, ನಿಷ್ಠೆ ಮತ್ತು ಮೌಲ್ಯ ಎಂಬ ನಾಲ್ಕು ತತ್ವಗಳ ಮೇಲೆ ಆಡಳಿತವನ್ನು ನಿಲ್ಲಿಸಿದ್ದ ಅವರು, ಜನಪರವಾಗಿ ಕೆಲಸ ಮಾಡಿದ್ದು ಹಾಗೂ ಜೀವಿತದುದ್ದಕ್ಕೂ ಈ ತತ್ವಗಳನ್ನು ಮೀರಿ ನಡೆಯದಿರುವುದು ನನ್ನ ಯೋಚನೆಗಳಲ್ಲಿ ಬದಲಾವಣೆ ತಂದ ಅಂಶಗಳಲ್ಲಿ ಪ್ರಮುಖವಾದದ್ದು. ಕುಟಿಲತೆ ಇಲ್ಲದ ರಾಜನೀತಿ, ವಿಸ್ತಾರವಾದ ರಣನೀತಿ ಇವತ್ತಿಗೂ ಕೆಂಪೇಗೌಡರನ್ನು ರಾಜಕೀಯವಾಗಿಯೂ ಅಜರಾಮರರನ್ನಾಗಿಸಿದೆ.

ಅಭಿವೃದ್ಧಿಯ ಅಜೆಂಡಾದೊಂದಿಗೆ ಸಾಗಿದ ಅವರು ಯಾರೂ ಮಾಡಲು ಸಾಧ್ಯವಾಗದ್ದನ್ನು ನಮಗಾಗಿ ಮಾಡಿಟ್ಟು ಹೋಗಿದ್ದಾರೆ. 59 ವರ್ಷಗಳ ಅವರ ಅವಿಚ್ಛಿನ್ನ ಆಡಳಿತದಲ್ಲಿ ತಲೆತಲೆಮಾರು ಮರೆಯದ ಅದೆಷ್ಟೋ ಮೈಲುಗಲ್ಲು ಸ್ಥಾಪನೆಯಾಗಿವೆ. ಇವತ್ತಿನ ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ನಾಯಕನೂ ಕೆಂಪೇಗೌಡರಿಂದ ಕಲಿಯಲೇಬೇಕಾದ್ದು ಬಹಳಷ್ಟಿದೆ.

ಜತೆಗೆ, ಬೆಂಗಳೂರನ್ನು ಕಟ್ಟಿದ ಪರಿ, ಕೃಷಿ, ವ್ಯಾಪಾರ, ವಾಣಿಜ್ಯ ಚಟುವಟಿಕೆ, ನೀರಾವರಿ, ಮೂಲಸೌಕರ್ಯ, ನಗರ ಯೋಜನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರಿಗಿದ್ದ ಅಪಾರ ಜ್ಞಾನ, ಸ್ಪಷ್ಟವಾದ ದೂರದೃಷ್ಟಿವರ್ತಮಾನದ ನಮಗೆಲ್ಲರಿಗೂ ದಾರಿದೀಪ. ಪ್ರಸಕ್ತ ತಂತ್ರಜ್ಞಾನದ ಕಾಲವನ್ನೂ ಬೆರಗು ಮಾಡುವಂತೆ ನೂರಾರು ವರ್ಷಗಳ ಹಿಂದೆ ಪ್ರಜೆಗಳೇ ಊಹಿಸಲಾರದಷ್ಟುಪ್ರಗತಿ ಸಾಧಿಸಿದ್ದರು ಕೆಂಪೇಗೌಡರು. ಈ ಮಾದರಿಗಳನ್ನು ನಾವು ಹೆಕ್ಕಿ ತೆಗೆದು ಅಳವಡಿಸಿಕೊಳ್ಳಬೇಕಿದೆ.

ಏರ್‌ಪೋರ್ಟ್‌ನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ!

* ಕೆಂಪೇಗೌಡರ ಅಂದಿನ ನಗರ ಯೋಜನೆಯ ದೃಷ್ಟಿಕೋನ ಇಂದಿಗೂ ಪ್ರಸ್ತುತವೇ?

ಬೆಂಗಳೂರು ಅಗಾಧವಾಗಿ ಬೆಳೆದಿದೆ. ನಗರದೊಳಗೆ ಅನೇಕ ನಗರ, ಪಾಳ್ಯಗಳು, ಕಾಲೋನಿಗಳಿವೆ. ಆದರೆ ಕೆಂಪೇಗೌಡರು ಬೆಂಗಳೂರನ್ನು ಮುಂದಿನ ಶತ-ಶತಮಾನಗಳ ಮುನ್ನೋಟದಿಂದ ನಿರ್ಮಿಸಿದ್ದರು. ಭವಿಷ್ಯದಲ್ಲಿ ಬೃಹತ್ತಾಗಿ ಬೆಳೆಯುವ ತಮ್ಮ ರಾಜಧಾನಿಯ ನಿರ್ವಹಣೆ ಬಗ್ಗೆಯೂ ಆಗಲೇ ಬೆಳಕು ಚೆಲ್ಲಿದ್ದರು. ಅವರು ಹಾಕಿಕೊಟ್ಟಮಾರ್ಗದಲ್ಲಿಯೇ ನಾವು ಸಾಗುತ್ತಿದ್ದೇವೆ. ಅಲ್ಲದೆ ಅವರು ಕಟ್ಟಿದ ಅನೇಕ ಪೇಟೆಗಳಲ್ಲಿ ಕೆಲವು ಈಗಲೂ ನಮ್ಮ ಕಣ್ಣಮುಂದಿವೆ. ಅಲ್ಲಿ ಆ ಕಾಲದ ಸೊಗಡನ್ನು ಸವಿಯುತ್ತಿದ್ದೇವೆ. ಹೀಗೆ, ಕೆಂಪೇಗೌಡರು 64 ಪೇಟೆಗಳನ್ನು ನಿರ್ಮಿಸಿದರೆಂದು ದಾಖಲೆಗಳು ಹೇಳುತ್ತವೆ. ಇವುಗಳಲ್ಲಿ 54 ಪೇಟೆಗಳ ಹೆಸರುಗಳು ಮಾತ್ರ ಇತಿಹಾಸಕಾರರಿಗೆ ಲಭ್ಯವಾಗಿವೆ. ಹೀಗಾಗಿ ಅವರ ನಗರ ಯೋಜನೆ ಬಗ್ಗೆ ಮತ್ತಷ್ಟುಸಂಶೋಧನೆ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಹೆಜ್ಜೆ ಇಡಲಿದೆ.

* ಆಧುನಿಕ ಯುಗದ ರಾಜಕಾರಣಿಗಳಿಗೆ ಕೆಂಪೇಗೌಡರ ರಾಜಕೀಯ ಮೌಲ್ಯಗಳು ಹೇಗೆ ಮಾಗದರ್ಶನೀಯ?

ಕೆಂಪೇಗೌಡರು ವಿಜಯನಗರದ ಅರಸರು ಹಿಂದಿನಿಂದಲೂ ತಮ್ಮ ವಂಶಸ್ಥರ ಮೇಲಿಟ್ಟಿದ್ದ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾರೆ. ಉಳಿದ ಸಾಮಂತರಂತೆ ಸ್ವತಂತ್ರರಾಗಲು ಯತ್ನಿಸಲಿಲ್ಲ. ಕುಟಿಲತೆ ತೋರಲಿಲ್ಲ. ವಿಜಯನಗರದಿಂದ ಕಿರುಕುಳ ಆದರೂ ಅವರು ತಮ್ಮ ನಂಬಿಕೆಗಳಿಂದ ಹಿಂದೆ ಸರಿಯಲಿಲ್ಲ. ಆ ಸಾಮ್ರಾಜ್ಯಕ್ಕೆ ತಮ್ಮ ನಿಷ್ಠೆಯನ್ನು ಮುಂದುವರಿಸುತ್ತಲೇ ಬೆಂಗಳೂರು ಮತ್ತದರ ಸುತ್ತಮುತ್ತಲಿನ ಪ್ರದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ದರು. ಅತ್ತ ರಾಜಕೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಲೇ ಮತ್ತೊಂದೆಡೆ ತಮ್ಮ ಪರಿಪಾಲನೆಯ ನೆಲದ ಅಭಿವೃದ್ಧಿಗೆ ಒತ್ತು ನೀಡಿದರು. ಹೀಗಾಗಿ ರಾಜಕೀಯವಾಗಿಯೂ ಕೆಂಪೇಗೌಡರು ವರ್ತಮಾನದ ಪ್ರತಿಯೊಬ್ಬ ನಾಯಕನಿಗೂ ಮಾರ್ಗದರ್ಶಿ ಮತ್ತು ಆದರ್ಶ. ರಾಜಕೀಯ ವಿದ್ಯಾರ್ಥಿಗಳು ಈ ಹಿನ್ನೆಲೆಯಲ್ಲಿ ಕೆಂಪೇಗೌಡರನ್ನು ಅಧ್ಯಯನ ಮಾಡಬೇಕಿದೆ.

* ಕೆಂಪೇಗೌಡ ಪ್ರಾಧಿಕಾರದ ಉದ್ದೇಶವೇನು?

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ. ನಾಡಪ್ರಭುಗಳ ವಿಷಯದಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದ್ದನ್ನು ಶಿರಸಾವಹಿಸಿ ಮಾಡುತ್ತಿದ್ದೇನೆ. ನನ್ನ ಬಹು ಆಸೆ ಎಂದರೆ ಕೆಂಪೇಗೌಡರನ್ನು ಈಗಿನ ಹಾಗೂ ನಂತರದ ತಲೆಮಾರಿನ ಯುವ ಜನತೆಗೆ ಪರಿಚಯಿಸಬೇಕು.

ಅದಕ್ಕಾಗಿ ಪ್ರಾಧಿಕಾರದಿಂದ ಮಹತ್ವದ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದೇವೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಮೇಲೆ ನಮ್ಮ ನಗರದ ಅಸ್ಮಿತೆಯಾದ ಅವರ ವಿರಾಜಮಾನ ಪ್ರತಿಮೆಯನ್ನು ಮಾಡಬೇಕು ಎಂದು ಬೇಡಿಕೆ ಬಂದಾಗ ಸರಕಾರ ಕೂಡಲೇ ಕಾರ್ಯೋನ್ಮುಖವಾಯಿತು. 23 ಎಕರೆ ಪ್ರದೇಶದಲ್ಲಿ ಸುಂದರವಾದ ಸೆಂಟ್ರಲ್‌ ಪಾರ್ಕ್ ಹಾಗೂ ಅದರಲ್ಲಿ 108 ಅಡಿ ಎತ್ತರದ ಪ್ರಭುಗಳ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಕೇವಲ ಇದು ಸಾಂಕೇತಿಕ ಪ್ರತಿಮೆಯಾಗಿರದೆ, ಅವರ ಇತಿಹಾಸ ಮತ್ತು ಪರಂಪರೆಯನ್ನು ಸಾರುವ ಸಾಕ್ಷಿಯ ಪಾರ್ಕಿನಂತೆ ಮೂಡಿಬರಲಿದೆ.

* ಭವಿಷ್ಯದಲ್ಲಿ ಕೆಂಪಾಪುರ ಪ್ರವಾಸಿ ತಾಣವಾಗಲಿದೆಯೇ?

ಕೆಂಪೇಗೌಡರ ವೀರ ಸಮಾಧಿಯುಳ್ಳ ಮಾಗಡಿ ತಾಲೂಕಿನ ಕೆಂಪಾಪುರವನ್ನು ಜಾಗತಿಕ ಮಟ್ಟದ ಐತಿಹಾಸಿಕ ಪ್ರವಾಸಿ ತಾಣವಾಗಿ ರೂಪಿಸುವುದು ನನ್ನ ಮತ್ತೊಂದು ಮಹತ್ವಾಕಾಂಕ್ಷೆ. ಇಡೀ ಗ್ರಾಮವನ್ನು ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಮಾಡಲಾಗುವುದು. ಸ್ಥಳೀಯರು ಬೆಳೆದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ, ಕೆಂಪಾಪುರ ಕೆರೆಯ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಈ ತಾಣವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಬೇಕೆಂಬ ಕನಸನ್ನು ಸಾಕಾರ ಮಾಡಲು ಪ್ರಯತ್ನ ಆರಂಭಿಸಲಾಗಿದೆ. ತಜ್ಞರು ಈಗಾಗಲೇ ಈ ನಿಟ್ಟಿನಲ್ಲಿ ಅಧ್ಯಯನಶೀಲರಾಗಿದ್ದು, ಅವರು ವರದಿ ಕೊಟ್ಟನಂತರ ಸಮಗ್ರ ಯೋಜನೆಯನ್ನು ರೂಪಿಸಿ ಜಾರಿಗೆ ತರಲಾಗುವುದು. ಹಾಗೆಯೇ ಯಲಹಂಕ, ಬೆಂಗಳೂರು, ಮಾಗಡಿ, ಶಿವಗಂಗೆ ಸೇರಿದಂತೆ ಕೆಂಪೇಗೌಡರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆಯೋ ಆ ಎಲ್ಲ ಪ್ರದೇಶಗಳನ್ನು ಆಮೂಲಾಗ್ರ ಅಭಿವೃದ್ಧಿಪಡಿಲಾಗುವುದು.

* ಯುವ ಜನರಿಗೆ ಏನನ್ನು ಹೇಳಲು ಬಯಸುತ್ತೀರಿ?

ಮುಂದಿನ ತಲೆಮಾರುಗಳು ಕೆಂಪೇಗೌಡರ ಬಗ್ಗೆ ಮಾತನಾಡಬೇಕು. ನವಯುಗದ ಯುವಕ-ಯುವತಿಯರಿಗೆ, ದೇಶ ವಿದೇಶಗಳ ಜನರು ನಾಡಪ್ರಭುಗಳ ಬಗ್ಗೆ ತಿಳಿಯಬೇಕು. ಅವರ ಅಭಿವೃದ್ಧಿಯ ಮಾದರಿ, ಜನಪರ ಆಡಳಿತ, ರಾಜಕೀಯ ಮೌಲ್ಯಗಳು, ವ್ಯಾಪಾರ- ವಾಣಿಜ್ಯ ಚಟುವಟಿಕೆ, ಪರಿಸರ ಪ್ರೀತಿ ಇತ್ಯಾದಿಗಳು ಚಿರಸ್ಥಾಯಿಯಾಗಿ ಉಳಿಯಬೇಕು. ಇಷ್ಟುಸಾಕಾರವಾದರೆ ಅದಕ್ಕಿಂತ ಧನ್ಯತೆ ಬೇರೆನಿದೆ?

 

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಬಳಿಕ ಅಲ್ಲಿ ನಾಡಪ್ರಭುಗಳ ಬೃಹತ್‌ ಪ್ರತಿಮೆಯನ್ನು ಸ್ಥಾಪಿಸಿ ಅವರ ಹೆಸರನಲ್ಲಿ ವಿಶೇಷ ಸ್ಮಾರಕ ಮಾಡಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದ ಇತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು 2019-20ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿ ಅನುದಾನ ಕಾಯ್ದಿರಿಸಿದ್ದಾರೆ. ಇದೀಗ ಈ ಯೋಜನೆಯನ್ನು ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕಾರ್ಯಗತ ಮಾಡಲಾಗುತ್ತಿದೆ.

-ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌, ಉಪಮುಖ್ಯಮಂತ್ರಿ

 

Follow Us:
Download App:
  • android
  • ios