ಬೆಂಗಳೂರು(ಜೂ.27): ನಾಡಪ್ರಭು ಕೇಂಪೇಗೌಡ ಅವರ 511ನೇ ಜಯಂತಿ ಪ್ರಯುಕ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಮತ್ತು 23 ಎಕರೆ ವಿಸ್ತೀರ್ಣದ ಸೆಂಟ್ರಲ್‌ ಪಾರ್ಕ್ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ಭೂಮಿಪೂಜೆ ನೆರವೇರಿಸಲಿದ್ದಾರೆ.

"

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೋವಿಡ್‌ 19 ಕಾರಣದಿಂದಾಗಿ ಶನಿವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ನೆರವೇರಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿಲ್ಲ. ಕೇವಲ 150 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಯಾವುದೇ ಗೊಂದಲವಿಲ್ಲದೆ ಕಾರ್ಯಕ್ರಮವನ್ನು ನಡೆಸಲಾಗುವುದು. ಇದೇ ವೇಳೆ ಕೆಂಪೇಗೌಡ ಅವರ ಮಾದರಿ ಪ್ರತಿಮೆಯನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.

ಏರ್‌ಪೋರ್ಟ್‌ನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ!

ಕಾರ್ಯಕ್ರಮವನ್ನು ವರ್ಚುವಲ್‌ ಲಿಂಕ್‌ ಮೂಲಕ ಆನ್‌ಲೈನ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಯೂಟ್ಯೂಬ್‌, ಫೇಸ್‌ಬುಕ್‌, ಟ್ವಿಟರ್‌, ಇನ್ಸ್ಟಾಗ್ರಾಮ್‌ಗಳಲ್ಲಿಯೂ https://bit.ly/kdbkar ಲಿಂಕ್‌ ಕ್ಲಿಕ್‌ ಮಾಡಿ ವೀಕ್ಷಿಸಬಹುದು. ಎಲ್ಲಾ ಸಂಸದರು, ಶಾಸಕರು ಆನ್‌ಲೈನ್‌ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಭೂಮಿಪೂಜೆ ನೆರೆವೇರಿದ ಒಂದೇ ವರ್ಷದಲ್ಲಿ ಇಡೀ ಕಾಮಗಾರಿಯನ್ನು ಮುಗಿಸಿ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುವುದು. ಈ ಯೋಜನೆಗೆ 78 ಕೋಟಿ ರು. ವೆಚ್ಚವಾಗಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರದವರೇ ನಿರ್ವಹಣೆ ಮಾಡಲಿದ್ದಾರೆ. ಪ್ರತಿಮೆ ಎತ್ತರವನ್ನು ವೈಜ್ಞಾನಿಕವಾಗಿ 108 ಅಡಿಗೆ ನಿಗದಿ ಮಾಡಲಾಗಿದೆ. ತಾಂತ್ರಿಕವಾಗಿಯೂ ತುಂಬಾ ಕೆಲಸ ಮಾಡಲಾಗಿದೆ. ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಸ್ಥಾಪಿಸಿರುವ ಮಹಾತ್ಮಗಾಂಧಿ ಹಾಗೂ ಗುಜರಾತ್‌ ರಾಜ್ಯದ ನರ್ಮದಾ ನದಿ ತೀರದಲ್ಲಿನ ಸರ್ದಾರ್‌ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ತಯಾರಿಸಿರುವ ಖ್ಯಾತ ಶಿಲ್ಪಿ ರಾಮಸುತಾರ ಅವರೇ ಕೆಂಪೇಗೌಡ ಅವರ ಪ್ರತಿಮೆ ವಿನ್ಯಾಸ ಸಿದ್ದಪಡಿಸಿದ್ದಾರೆ ಎಂದು ವಿವರಿಸಿದರು.

500 ವರ್ಷಗಳ ಹಿಂದೆಯೇ ಎಲ್ಲಾ ಜಾತಿ ಧರ್ಮದವರಿಗೂ ಸಲ್ಲುವ ಬೆಂಗಳೂರಿನಂತಹ ಆಧುನಿಕ ಮಹಾನಗರವನ್ನು ಕಟ್ಟಿದ ಮಹಾಪುರಷನನ್ನು ಮುಂದಿನ ತಲೆಮಾರಿಗೂ ಪರಿಚಯಿಸಬೇಕು ಎಂದ ಏಕೈಕ ಉದ್ದೇಶದಿಂದ ಈ ಸ್ಮಾರಕ ನಿರ್ಮಿಸಲಾಗುತ್ತಿದೆ. ನಗರವನ್ನು ಕಟ್ಟುವುದರ ಜತೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಈ ನಗರವನ್ನು ಜಾಗತಿಕ ಗಮನ ಸೆಳೆಯುವಂತೆ ರೂಪಿಸಿದವರು ಕೆಂಪೇಗೌಡರು ಎಂದು ಬಣ್ಣಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರವೇ ವಿಧಾನಮಂಡಲದಲ್ಲಿ ನಿರ್ಣಯವೊಂದನ್ನು ಅಂಗೀಕರಿಸಿ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಈ ಶಿಫಾರಸನ್ನು ಅಂಗೀಕರಿಸಿದ ಕೇಂದ್ರವು ವಿಮಾನ ನಿಲ್ದಾಣಕ್ಕೆ ನಾಡಪ್ರಭುಗಳ ಹೆಸರನ್ನೇ ಇಟ್ಟಿತ್ತು. ಬಳಿಕ ಆ ನಿಲ್ದಾಣದ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಬೇಕು ಎಂಬ ಒತ್ತಾಯ ಇತ್ತಾದರೂ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಯಡಿಯೂರಪ್ಪ ಅವರು ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ಕೂಡಲೇ ಪ್ರತಿಮೆ ಸ್ಥಾಪನೆ ಸೇರಿದಂತೆ ಸೆಂಟ್ರಲ್‌ ಪಾರ್ಕ್ ನಿರ್ಮಾಣಕ್ಕೂ ಅನುಮೋದನೆ ನೀಡಿ ಅನುದಾವನ್ನು ಒದಗಿಸಿದರು ಎಂದು ಹೇಳಿದರು.