ಏರ್‌ಪೋರ್ಟ್‌ನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ!
ಏರ್ಪೋರ್ಟಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ: ಜೂ.27ಕ್ಕೆ ಶಂಕು| ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಘೋಷಣೆ
ಬೆಂಗಳೂರು(ಜೂ.06): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದ ಮುಂದೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಜೂ.27ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಬಿಐಎಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಜೂ.27ರಂದು ಕೆಂಪೇಗೌಡರ 511ನೇ ಜಯಂತಿ ಇದೆ. ಹೀಗಾಗಿ ಅದೇ ದಿನ ಬೃಹತ್ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲು ಚಿಂತಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ವಿಮಾನ ಹಾರಿದ್ದಕ್ಕಿಂತ ರದ್ದಾಗಿದ್ದೇ ಹೆಚ್ಚು: 1050ರ ಪೈಕಿ 630 ಸಂಚಾರ ರದ್ದು!
ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ನಿರ್ಮಾಣ ಮಾಡಿದ ಕಲಾವಿದ ಅನಿಲ್ ರಾಮ ಸುತಾರ್ ಅವರಿಗೇ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಗುತ್ತಿಗೆ ನೀಡಲಾಗುತ್ತಿದ್ದು, ಸದ್ಯದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಪ್ರತಿಮೆ ನಿರ್ಮಾಣಕ್ಕೆ ಅಂದಾಜು 66 ಕೋಟಿ ರು. ವೆಚ್ಚವಾಗಲಿದೆ. ಪ್ರತಿಮೆ ಸ್ಥಳಕ್ಕಾಗಿ ವಿಮಾನ ನಿಲ್ದಾಣ ಮುಂದಿನ 23 ಎಕರೆಯನ್ನು ಗುರುತಿಸಲಾಗಿದೆ. ಇದಲ್ಲದೆ ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ 41 ಕೋಟಿ ರು. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಪ್ರತಿಮೆ ಮಾದರಿ ಸಿದ್ಧವಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತೋರಿಸಿ ಅಂತಿಮಗೊಳಿಸಲಾಗುವುದು. ಪ್ರತಿಮೆ ಸುತ್ತಲಿನ ಅಭಿವೃದ್ಧಿ ಸೇರಿ ಒಟ್ಟು 80 ಕೋಟಿ ರು. ವೆಚ್ಚವಾಗಲಿದೆ. ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲೂ ಇದೂ ಒಂದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಧಿ ಜತೆಗೆ ಅದರ ಸುತ್ತಲಿನ ಪ್ರದೇಶ ಮತ್ತು ಊರಿನ ಕೆರೆಯನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಈ ಸಲುವಾಗಿ ಭೂಸ್ವಾಧೀನ ಮಾಡುತ್ತಿದ್ದು, ಇದಕ್ಕೆ ಅಂದಾಜು 17 ಕೋಟಿ ಬೇಕಾಗುತ್ತದೆ ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್, ಮೂಲಸೌಲಭ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಸೇರಿದಂತೆ ಹಲವರು ಹಾಜರಿದ್ದರು.