ಬೆಂಗಳೂರು(ನ.14): ರಾಜ್ಯದ ಎಲ್ಲ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಐದು ತಿಂಗಳ ಬಾಕಿ ವೇತನ ಬಿಡುಗಡೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಅತಿಥಿ ಉಪನ್ಯಾಸಕರ ಐದು ತಿಂಗಳ ಬಾಕಿ ವೇತನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ. ಅತಿಥಿ ಉಪನ್ಯಾಸಕರ ಆರ್ಥಿಕ ಭದ್ರತೆ ಹಾಗೂ ಹಿತರಕ್ಷಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಪ.ಪೂ. ಅತಿಥಿ ಉಪ​ನ್ಯಾ​ಸ​ಕ​ರಿಗೆ ಶೀಘ್ರ ಬಾಕಿ ವೇತ​ನ: ಸಿಎಂ

ಇದಕ್ಕೆ ಪ್ರತಿಕ್ರಿಯಿಸಿರುವ ಅತಿಥಿ ಉಪನ್ಯಾಸಕರು, ‘ಕೆಲವೆಡೆ ಕಳೆದ ಮಾರ್ಚ್‌ ತಿಂಗಳಿಂದ ವೇತನ ಬಾಕಿ ಇದ್ದು ಪ್ರಸ್ತುತ ಐದು ತಿಂಗಳ ವೇತನ ಬಿಡುಗಡೆ ಮಾಡಲಾಗಿದೆ. ಇನ್ನೂ ನಾಲ್ಕು ತಿಂಗಳ ವೇತನ ಬಿಡುಗಡೆ ಬಾಕಿ ಇದೆ. ಸರ್ಕಾರ ಉಳಿದ ಬಾಕಿ ಹಣ ಬಿಡುಗಡೆಗೆ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.