ಬೆಂಗಳೂರು[ಫೆ.12]: ನಮ್ಮನ್ನು ಕಾಯುವ ಸೈನಿಕರು ತಮ್ಮ ಕುಟುಂಬದಿಂದ ದೂರ, ಹಗಲಿರುಳೆನ್ನದೆ ದೇಶದ ಗಡಿಯಲ್ಲಿ ನಿಂತು ಶತ್ರುಗಳಿಂದ ನಮಗೇನೂ ಆಗದಂತೆ ರಕ್ಷಣೆ ನೀಡುತ್ತಾರೆ. ಶತ್ರುಗಳು ದಾಳಿ ನಡೆಸಿದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೆಣಸಾಡುತ್ತಾರೆ. ಇದೇ ರೀತಿ 2016ರಲ್ಲಿ ಕನ್ನಡಿಗ ಯೋಧ ಮೇಜರ್ ಅಕ್ಷಯ್ ಗಿರೀಶ್ ಉಗ್ರರ ವಿರುದ್ಧ ಹೋರಾಡುತ್ತಾ ಹುತಾತ್ಮರಾಗಿದ್ದರು. ಈ ಘಟನೆ ನಡೆದು ಮೂರು ವರ್ಷಗಳೇ ಕಳೆದಿವೆ. ಸದ್ಯ ಅವರ ಪುಟ್ಟ ಮಗಳು ನೈನಾ ತನ್ನ ತಂದೆಯೊಂದಿಗೆ ಮಾತನಾಡಿದ್ದ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡು ತನ್ನ ತೊದಲ್ನುಡಿಯಲ್ಲೇ ಅದನ್ನು ಪುನರುಚ್ಚರಿಸಿದ್ದಾರೆ. ಅಲ್ಲದೇ ಸೇನೆ ಎಂದರೆ ಏನು ಎಂಬುವುದನ್ನೂ ತಿಳಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಹೌದು 2016ರ ನವೆಂಬರ್ 30ರಂದು ಜಮ್ಮುವಿನ ನಗ್ರೋಟಾದಲ್ಲಿ ನಡೆದಿದ್ದ ದಾಳಿಯಲ್ಲಿ, ಕನ್ನಡಿಗ ಮೇಜರ್ ಅಕ್ಷಯ್ ಗಿರೀಶ್ ಉಗ್ರರ ವಿರುದ್ದ ಹೋರಾಡುತ್ತಾ ಹುತಾತ್ಮರಾಗಿದ್ದರು. ಅಂದು ಅವರ ಪುಟ್ಟ ಮಗಳು ನೈನಾಗೆ ಎರಡುವರೆ ವರ್ಷವಾಗಿತ್ತು. ಅಂದು ತಂದೆಗೇನಾಗಿದೆ ಎಂದು ತಿಳಿದುಕೊಳ್ಳಲಾಗದ ವಯಸ್ಸು. ಹೀಗಿದ್ದರೂ ಪುಟ್ಟ ಕಂದಮ್ಮ ತನ್ನ ಅಪ್ಪ ಹೇಳಿಕೊಟ್ಟಿದ್ದ ಮಾತುಗಳನ್ನು ಮಾತ್ರ ಮರೆತಿಲ್ಲ. 5 ವರ್ಷದ ನೈನಾ ಸೈನ್ಯ ಎಂದರೆ ಏನು? ಎಂಬ ಪ್ರಶ್ನೆಗೆ ತನ್ನ ತಂದೆ ತನಗೆ ಹೇಳಿಕೊಟ್ಟಿರುವುದನ್ನು ನೆನಪಿಸಿಕೊಂಡು, ತೊದಲ್ನುಡಿಯಲ್ಲೇ ಇಡೀ ಜಗತ್ತಿಗೆ ತಿಳಿಸಿಕೊಟ್ಟಿದ್ದಾಳೆ.

ಸೈನ್ಯ ಎಂದರೆ ಎಂದು ಆರಂಭಿಸುವ ಪುಟ್ಟ ಹುಡುಗಿ ನೈನಾ 'ಸೈನ್ಯ ಪ್ರತಿಯೊಬ್ಬ ಭಾರತೀಯನ ಬದುಕಲ್ಲಿ ಮಹತ್ವದ ಪಾತ್ರ ಹೊಂದಿರುತ್ತದೆ. ಸೈನ್ಯ ಎಂದರೆ ಪ್ರೀತಿ, ಸೈನ್ಯ ಕೆಟ್ಟ ಅಂಕಲ್‌ಗಳ ವಿರುದ್ಧ ಹೋರಾಡುವುದು, ನಮ್ಮ ಭಯವನ್ನು ನಿವಾರಿಸುವುದು' ಎಂದಿದ್ದಾಳೆ. ಅಲ್ಲದೇ ಂತಿಮವಾಗಿ ಜೈ ಹಿಂದ್ ಎಂದು ಉದ್ಘರಿಸಿದ್ದಾಳೆ. ಇನ್ನು ಇದೆನ್ನೆಲ್ಲಾ ನಿನಗೆ ಯಾರು ಹೇಳಿ ಕೊಟ್ರು ಎಂದು ಕೇಳಿದಾಗ, ಈ ಪುಟ್ಟ ಕಂದಮ್ಮ ಮುಗ್ಧವಾಗಿ 'ನನ್ನ ಅಪ್ಪ' ಎನ್ನುತ್ತಾಳೆ.

ಈ ವಿಡಿಯೋವನ್ನು ನೈನಾ ತಾಯಿ ಹಾಗೂ ಮೇಜರ್ ಗಿರೀಶ್ ಪತ್ನಿ ಮೇಘನಾ ಶೇರ್ ಮಾಡಿಕೊಂಡಿದ್ದಾರೆ.