ದಲಿತರು, ಒಕ್ಕಲಿಗರ ಪತ್ರಿಕೆಗಳಿಗೂ ಜಾಹೀರಾತು ಸಿಗ್ತಿದೆ: ಬ್ರಾಹ್ಮಣ ಸಭೆ
ಪರಿಶಿಷ್ಟಜಾತಿ ಹಾಗೂ ಹಿಂದುಳಿದ ವರ್ಗದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೆ ನೀಡುವಂತೆ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೂ ‘ಪ್ರೋತ್ಸಾಹಕ ಜಾಹೀರಾತು’ ನೀಡಲು ಆದೇಶಿಸಿರುವ ರಾಜ್ಯ ಸರ್ಕಾರಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದನೆ ಸಲ್ಲಿಸಿದೆ.
ಬೆಂಗಳೂರು (ಜ.29) : ಪರಿಶಿಷ್ಟಜಾತಿ ಹಾಗೂ ಹಿಂದುಳಿದ ವರ್ಗದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೆ ನೀಡುವಂತೆ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೂ ‘ಪ್ರೋತ್ಸಾಹಕ ಜಾಹೀರಾತು’ ನೀಡಲು ಆದೇಶಿಸಿರುವ ರಾಜ್ಯ ಸರ್ಕಾರಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದನೆ ಸಲ್ಲಿಸಿದೆ.
ಇದೇ ವೇಳೆ, ಈ ಸವಲತ್ತು ಕೇವಲ ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗಷ್ಟೇ ಸೀಮಿತ ಎಂಬಂತೆ ಬಿಂಬಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಬ್ರಾಹ್ಮಣ ಸಮುದಾಯದ ಪತ್ರಿಕೆಗಳು ಸ್ವಾತಂತ್ರ್ಯಾ ನಂತರ ಈವರೆಗೆ ಯಾವುದೇ ಸರ್ಕಾರದ ಸವಲತ್ತನ್ನೂ ಪಡೆದಿಲ್ಲ. ಇದೇ ಮೊಟ್ಟಮೊದಲ ಬಾರಿಗೆ ಕೊರೋನಾ ಸಂಕಷ್ಟದಲ್ಲಿ ಬಳಲಿದ್ದ ಕನ್ನಡ ಪತ್ರಿಕೆಗಳಿಗೆ ನೀಡುವ ಪ್ರೋತ್ಸಾಹಕ ಜಾಹೀರಾತನ್ನು ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗೂ ನೀಡಲು ಸರ್ಕಾರ ಆದೇಶಿಸಿದೆ. ಈ ಬಗ್ಗೆ ಅಪಪ್ರಚಾರ ಮಾಡುವ ಬದಲು ಕನ್ನಡ ಮಾಧ್ಯಮ ಬೆಳೆಸುವ ನಿಟ್ಟಿನಲ್ಲಿ ಒಟ್ಟಾಗಿ ಶ್ರಮಿಸೋಣ ಎಂದು ಮಹಾಸಭಾ ಕರೆ ನೀಡಿದೆ.
ಪತ್ರಿಕೆಗಳು ಪಕ್ಷದ ಮುಖವಾಣಿ ಆಗಬಾರದು: ಈಶ್ವರಪ್ಪ
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಶ್ರೀಧರ ಮೂರ್ತಿ, ರಾಜ್ಯ ಸರ್ಕಾರವು ಈಗಾಗಲೇ ಹಲವು ವರ್ಷಗಳಿಂದ ಪರಿಶಿಷ್ಟಜಾತಿ, ಪಂಗಡದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೆ ಪ್ರೋತ್ಸಾಹಕ ಜಾಹೀರಾತು ನೀಡುತ್ತಿದೆ. ಕಳೆದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗಳಿಗೂ ಜಾಹೀರಾತು ಹಾಗೂ ಮಾಧ್ಯಮ ಕಿಟ್ ವಿಸ್ತರಿಸಲು ಕ್ರಮ ಕೈಗೊಂಡಿತ್ತು. ಇದರಿಂದ ಲಿಂಗಾಯತ, ಒಕ್ಕಲಿಗ ಸೇರಿದಂತೆ ಹಲವು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 450ಕ್ಕೂ ಹೆಚ್ಚು ಪತ್ರಿಕೆಗಳು ಉಳಿಯಲು ಕಾರಣವಾಯಿತು ಎಂದಿದ್ದಾರೆ.
ಮುದ್ರಣ ಕಾಗದದ ಜಿಎಸ್‌ಟಿ ಇಳಿಸಿ: ಪ್ರಧಾನಿ ಮೋದಿಗೆ ಸಿದ್ದು ಪತ್ರ
ಆದರೆ ಈ ಸವಲತ್ತಿನಿಂದ ಬ್ರಾಹ್ಮಣ ಸಮುದಾಯದ ಮಾಲೀಕತ್ವದ ಕೇವಲ 18ರಿಂದ 25 ರಷ್ಟಿರುವ ಪತ್ರಿಕೆಗಳು ವಂಚಿತವಾಗಿದ್ದವು. ಯಾವುದೇ ಸಮುದಾಯದ ಮಾಲೀಕತ್ವದ ಪತ್ರಿಕೆಗಳಿಗಾದರೂ ಮುದ್ರಣ ಕಾಗದ ದರ, ಮುದ್ರಣ ವೆಚ್ಚ, ಸರಬರಾಜು, ನೌಕರರ ಭತ್ಯೆ ವೆಚ್ಚಗಳು ಒಂದೇ ಆಗಿರುತ್ತವೆ. ಹೀಗಾಗಿ ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೂ ಈ ಸವಲತ್ತು ವಿಸ್ತರಿಸಬೇಕು ಎಂದು ಮಹಾಸಭಾ ಮನವಿ ಮಾಡಿತ್ತು. ಮಹಾಸಭಾ ಮನವಿಗೆ ಸ್ಪಂದಿಸಿದ ಸರ್ಕಾರವು ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೂ ಪ್ರೋತ್ಸಾಹಕ ಜಾಹೀರಾತು ನೀಡುವಂತೆ ಪೂರಕವಾಗಿ ಪ್ರತ್ಯೇಕ ಆದೇಶ ಮಾಡಿದೆ. ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.