ಪತ್ರಿಕೆಗಳು ಪಕ್ಷದ ಮುಖವಾಣಿ ಆಗಬಾರದು: ಈಶ್ವರಪ್ಪ
ಸರ್ವಾಧಿಕಾರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಅದೇ ರೀತಿಯಲ್ಲಿ ಪತ್ರಿಕೆಗಳು ಕೂಡ ಒಬ್ಬ ವ್ಯಕ್ತಿ, ಪಕ್ಷದ ಮುಖವಾಣಿಯಾಗಿರಬಾರದು ಶಾಸಕ ಕೆ.ಎಸ್.ಈಶ್ವರಪ್ಪ ಅಭಿಪ್ರಾಯ.
ಶಿವಮೊಗ್ಗ (ಆ.8) : ಸರ್ವಾಧಿಕಾರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಅದೇ ರೀತಿಯಲ್ಲಿ ಪತ್ರಿಕೆಗಳು ಕೂಡ ಒಬ್ಬ ವ್ಯಕ್ತಿ, ಪಕ್ಷದ ಮುಖವಾಣಿಯಾಗಿರಬಾರದು ಎಂದು ಶಾಸಕ ಕೆ.ಎಸ್.ಈಶ್ವರಪ್ಪ(MLA K.S.Eshwarappa) ಹೇಳಿದರು. ಕೆಯುಡಬ್ಲ್ಯೂಜೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮೀಡಿಯಾ ಹೌಸ್ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಭಾರತೀಯರ ದೃಷ್ಟಿಯಲ್ಲಿ ಪತ್ರಿಕಾ ವೃತ್ತಿ ಪವಿತ್ರವಾದ ವೃತ್ತಿ. ಭಾರತ ಮಾತೆಯ ಸೇವೆ ದಿನನಿತ್ಯ ಹಾಗೂ ಪೂಜೆ ಮಾಡುತ್ತಿರುವ ಕ್ಷೇತ್ರ ಇದಾಗಿದೆ ಎಂದರು.
ಸ್ವಯಂ ಸೇವಕರ ಪಾದದ ಧೂಳಿಗೂ ಸಿದ್ದರಾಮಯ್ಯ ಸಮರಲ್ಲ: ಈಶ್ವರಪ್ಪ ಕಿಡಿ
ರಾಜಕೀಯ(Political) ಕ್ಷೇತ್ರ ಯಾವುದಾದರೂ ಒಬ್ಬ ವ್ಯಕ್ತಿಯ ಕೈಗೆ ಬಂದರೆ ಅದು ಸರ್ವಾಧಿಕಾರ ಆಗುತ್ತದೆ. ಅಂತಹ ಸರ್ವಾಧಿಕಾರಿಗಳು ಮಣ್ಣು ಮುಕ್ಕಿ ಹೋಗಿದ್ದಾರೆ. ಮಣ್ಣು ಮುಕ್ಕಿಸುವಂತಹ ಶಕ್ತಿಯನ್ನು ರೈತರು, ಜನಸಾಮಾನ್ಯರ ಕೈಗೆ ಪ್ರಜಾಪ್ರಭುತ್ವ ನೀಡಿದೆ. ಸರ್ವಾಧಿಕಾರಿಗಳನ್ನು ಜನ ಇತಿಹಾಸದ ಪುಟಗಳಿಗೆ ಸೇರಿದಂತೆ, ಮುಖವಾಣಿಯಾದ ಪತ್ರಿಗಳನ್ನು ಕೂಡ ಪಕ್ಕಕ್ಕೆ ಸರಿಸುವ ಕೆಲಸ ಓದುಗರು ಮಾಡಲಿದ್ದಾರೆ. ಹೀಗಾಗಿ ಪತ್ರಿಕೆಗಳು ಭ್ರಷ್ಟಾಚಾರವಿಲ್ಲದೆ, ಚಾರಿತ್ರ್ಯ ಇಟ್ಟುಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಸಮಾಜಕ್ಕೆ ಆಸ್ತಿಯಾಗಲಿದೆ ಎಂದು ಸಲಹೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ(B.Y.Raghavendra) ಮಾತನಾಡಿ, ಯಾವುದೇ ಕ್ಷೇತ್ರಗಳಲ್ಲಿ ಸಂಘಟನೆ ಪ್ರಬಲವಾಗಿದ್ದರೆ ಸಮರ್ಥವಾಗಿ ಕೆಲಸ ಮಾಡಬಹುದಾಗಿದೆ. ಇದರಿಂದಾಗಿ ಸಂಘಟನೆ ಬಲಗೊಳಿಸುವ ಕೆಲಸ ಆಗಬೇಕಿದೆ. ಯಾರಿಗೂ ಕೂಡ ಪ್ರತಿಷ್ಠೆ ಸರಿಯಲ್ಲ ಎಂದು ಹೇಳಿದರು.
ಕೆಯುಡಬ್ಲ್ಯೂಜೆ(KUWJ) ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು(Shivananda Tagaduru) ಮಾತನಾಡಿ, ವ್ಯಕ್ತಿ ಮುಖ್ಯವಲ್ಲ. ಸಂಘಟನೆ ಮುಖ್ಯ. ಕೆಲವರ ಸ್ವಾರ್ಥದಿಂದ ಸಂಘಟನೆಯಲ್ಲಿ ಆಗಾಗ ಕೆಲವೊಂದು ಬೆಳವಣಿಗೆ ಆಗುತ್ತಿರುತ್ತವೆ. ಒಬ್ಬ ವ್ಯಕ್ತಿಗೆ ಈ ಸಂಘಟನೆ ಅಡ ಇಡುವ ಪ್ರಶ್ನೆಯೇ ಇಲ್ಲ ಎಂದರು. ಈ ಸಂದರ್ಭ ರಾಜ್ಯ ಸಂಘದ ಪದಾಧಿಕಾರಿಗಳಾದ ಅಜ್ಜಮಾಡು ರಮೇಶ್ ಕುಟ್ಟಪ್ಪ, ಸೋಮಶೇಖರ್ ಕರಗೋಡು ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ. ಪದ್ಮನಾಬ್ ಮತ್ತಿತರರು ಇದ್ದರು.
ವರಿಷ್ಠರು ಹೇಳಿದರೆ ಮಾತ್ರ ಚುನಾವಣೆಗೆ ಸ್ಪರ್ಧೆ:
ಈವರೆಗೆ ಪಕ್ಷ ಯಾವ ಜವಾಬ್ದಾರಿ ನೀಡಿದೆಯೋ ಅದನ್ನು ನಾನು ಶ್ರದ್ಧೆಯಿಂದ ನಿಭಾಯಿಸಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು, ಬಿಡುವುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷದ ವರಿಷ್ಠರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಥಮ ಬಾರಿಗೆ ಶಾಸಕ ಆಗಿದ್ದಾಗಲೂ ನಾನು ಹಟ ಹಿಡಿದು ಟಿಕೆಟ್ ಪಡೆದಿಲ್ಲ. ಆಗ ಪಕ್ಷದ ವರಿಷ್ಠರು ಗುರುತಿಸಿ ಟಿಕೆಟ್ ಕೊಟ್ಟಿದ್ದರು. ಗೆದ್ದ ನಂತರ ಪಕ್ಷದ ನಾಯಕರು ನೀಡಿದ ಎಲ್ಲ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತನಾಗಿದ್ದೇನೆ. ಮತ್ತೆ ನನಗೆ ಸಚಿವ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.
ಸಚಿವ ಸ್ಥಾನ ಬಗ್ಗೆ ವರಿಷ್ಠರು ತೀರ್ಮಾನಿಸ್ತಾರೆ: ಈಶ್ವರಪ್ಪ
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಆ ಪಕ್ಷದಲ್ಲಿ ಒಗ್ಗಟ್ಟು ಅಸಾಧ್ಯ ಎಂಬುದು ಪದೇಪದೆ ಸಾಬೀತಾಗುತ್ತಿದೆ. ಮೊನ್ನೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಆಲಿಂಗನ ಕೂಡ ಒಂದೇ ನಿಮಿಷದ್ದಾಗಿದೆ. ಇದು ರಾಹುಲ್ ಗಾಂಧಿ ಬಲವಂತಕ್ಕೆ ಆಗಿರುವ ಆಲಿಂಗನ. ಸಮಾವೇಶ ಮುಗಿಯುತ್ತಿದ್ದಂತೆ ಬೇರೆ ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ ಎಂದು ವ್ಯಂಗ್ಯವಾಡಿದರು.