ಬೆಂಗಳೂರು [ಡಿ.24]:  ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಬಾಯಾರಿಕೆಯಿಂದ ಬಳಲದೆ ನೀರು ಕುಡಿಯಬೇಕು ಎಂಬ ಉದ್ದೇಶದಿಂದ ಕೇರಳ ಸರ್ಕಾರ ಜಾರಿಗೆ ತಂದಿದ್ದ ‘ವಾಟರ್‌ ಬೆಲ್‌’ ಯೋಜನೆಯನ್ನು ರಾಜ್ಯದಲ್ಲಿಯೂ ಅನುಷ್ಠಾನ ಮಾಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಅಗತ್ಯ ಪ್ರಮಾಣದ ಶುದ್ಧ ನೀರನ್ನು ಕುಡಿಯಲು ‘ಕುಡಿಯುವ ನೀರಿನ ಬೆಲ್‌’ ಎಂಬ ವಿಶೇಷ ಸಮಯ ನಿಗದಿ ಪಡಿಸುವಂತೆ ಶಾಲೆಗಳಿಗೆ ಸೂಚನೆ ನೀಡಿದೆ.

ಪ್ರತಿದಿನ ಶಾಲಾವಧಿಯ ಬೆಳಗ್ಗೆ ಎರಡು ಮತ್ತು ಮೂರನೇ ಅವಧಿ ನಡುವಿನ 10 ನಿಮಿಷ ಹಾಗೂ ಮಧ್ಯಾಹ್ನ ಮೂರು ಮತ್ತು ನಾಲ್ಕನೇ ಅವಧಿ ನಡುವೆ 10 ನಿಮಿಷ ಅವಧಿಯನ್ನು ಮಕ್ಕಳಿಗೆ ನೀರು ಕುಡಿಯಲು ಮೀಸಲಿಡುವಂತೆ ತಿಳಿಸಿದೆ. ಈ 10 ನಿಮಿಷವನ್ನು ಕುಡಿಯುವ ನೀರಿನ ಬೆಲ್‌ ಅವಧಿಯನ್ನಾಗಿ ನಿಗದಿಪಡಿಸಬೇಕು. ಕಡ್ಡಾಯವಾಗಿ ವಾಟರ್‌ ಬೆಲ್‌ ಬಾರಿಸಬೇಕು ಎಂದು ಸೂಚನೆ ನೀಡಿದೆ. ಕೇರಳ ಸರ್ಕಾರ ಯೋಜನೆ ಜಾರಿಗೊಳಿಸಿದ ಸಂದರ್ಭದಲ್ಲಿ ಅದನ್ನು ಸ್ವಾಗತಿಸಿ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಇದೀಗ ಅಧಿಕೃತವಾಗಿ ಯೋಜನೆಯನ್ನು ರಾಜ್ಯದಲ್ಲಿಯೂ ಜಾರಿಗೊಳಿಸಿದ್ದಾರೆ.

ಹೂ ಮಾರುವ ಹುಡುಗಿ ವಸತಿ ಶಾಲೆಗೆ ಸೇರಿಸಿದ ಸುರೇಶ್‌!...

ಶುದ್ಧ ನೀರಿನ ವ್ಯವಸ್ಥೆ ಶಾಲೆಯ ಹೊಣೆ:  ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂದು ಶಿಕ್ಷಕರು ಖಾತ್ರಿಪಡಿಸಿಕೊಳ್ಳಬೇಕು. ಮಕ್ಕಳೇ ಸ್ವತಃ ಬಾಟಲಿಯಲ್ಲಿ ನೀರು ತಂದು ಉಪಯೋಗಿಸುತ್ತಿದ್ದರೆ ಅವಕಾಶ ನೀಡಬೇಕು. ಜೊತೆಗೆ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಗ್ರಾಮ ಪಂಚಾಯತಿ, ದಾನಿಗಳ ನೆರವಿನೊಂದಿಗೆ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಬೇಕು. ಶಾಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ನೀರಿನ ಬೆಲ್‌ ಅವಧಿಯಲ್ಲಿ ಸಾಕಷ್ಟುಪ್ರಮಾಣದ ಶುದ್ಧ ಕುಡಿಯುವ ನೀರು ಸಂಗ್ರಹಿಸಿ ಲೋಟಗಳ ಮೂಲಕ ಮಕ್ಕಳು ಕುಡಿಯಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಿಗದಿಪಡಿಸಿರುವ ಅವಧಿ ಹೊರತಾಗಿಯೂ ಮಕ್ಕಳು ನೀರು ಕುಡಿಯಲು ಇಚ್ಛಿಸಿದರೆ ಅವಕಾಶ ಮಾಡಿಕೊಡಬೇಕೆಂದು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.