ಬೆಂಗಳೂರು[ಡಿ.19]: ಸರ್ಕಾರಿ ಶಾಲೆಯಲ್ಲಿ ಓದಿಕೊಂಡು ಶಾಲೆ ಮುಗಿದ ಬಳಿಕ ಸಂಜೆ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂ ಮಾರುತ್ತಿದ್ದ ಬಾಲಕಿ ಸಂಗೀತಾಳನ್ನು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಆದೇಶದ ಮೇಲೆ ರಾಮನಗರದ ಕೈಲಾಂಚದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಗೆ ದಾಖಲಾತಿ ಮಾಡಿಸಲಾಗಿದೆ.

ಕೆಂಗೇರಿ ನಿವಾಸಿಯಾಗಿರುವ ಶ್ರೀನಿವಾಸ್‌ ಅವರು ತಮ್ಮ ಪುತ್ರಿ ಸಂಗೀತಾಳನ್ನು ನೆಪಮಾತ್ರಕ್ಕೆ ಎನ್ನುವಂತೆ ವರಗೆರಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಪೋಷಕರು ಕಡು ಬಡವರಾಗಿರುವುದರಿಂದ ವಿದ್ಯಾರ್ಥಿನಿಯು ನೆಪಮಾತ್ರಕ್ಕೆ ವಿದ್ಯಾಭ್ಯಾಸ ಮಾಡುತ್ತಿದ್ದಳು. ಶಾಲೆ ಮುಗಿದ ನಂತರ ಸಂಗೀತಾ ಹೂ ಹಾಗೂ ತರಕಾರಿ ಮಾರಾಟ ಮಾಡುತ್ತಿ​ದ್ದ​ಳು. ಈ ಬಗ್ಗೆ ಸಾರ್ವಜನಿಕರು ಪ್ರಾ ಸಚಿವ ಸುರೇಶ್‌ ಕುಮಾರ್‌ ಅವರ ಗಮನಕ್ಕೆ ತಂದಿದ್ದರು.

ನಂತರ ಈ ವಿಷಯವನ್ನು ಕಾರ್ಮಿಕ ಅಧಿಕಾರಿಗಳ ಗಮನ ಸಚಿವರು ತಂದಿದ್ದರು. ಹೀಗಾಗಿ ಬುಧವಾರ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ಪೋಷಕರನ್ನು ಒಪ್ಪಿಸಿ ರಾಮನಗರದ ಕೈಲಾಂಚದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಗೆ ದಾಖಲಾತಿ ಮಾಡಿಸಿದ್ದಾರೆ. ರಾಮನಗರದ ಬಟ್ಟೆಮಳಿಗೆಯೊಂದರಲ್ಲಿ ಅಗತ್ಯವಾದ ಬಟ್ಟೆ, ಪಠ್ಯ, ಪರಿಕರಗಳನ್ನು ಸಹ ಬಾಲಕಿಗೆ ಒದಗಿಸಲಾಗಿದೆ.

ಈ ಕುರಿತು ಮಾತನಾಡಿರುವ ಸಂಗೀತಾ, ಹೂ ಮಾರಾಟ ಮಾಡುವಾಗ ಶಾಲೆಯಿಂದ ಬಂದ ನಂತರ ಆಟವಾಡಲು ಹಾಗೂ ಮನೆಯಲ್ಲಿ ಓದಲು ಅವಕಾಶವಿರಲಿಲ್ಲ. ಈಗ ವಸತಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದು, ಮಕ್ಕಳೊಂದಿಗೆ ಆಟವಾಡುತ್ತಾ ಪಾಠಗಳನ್ನು ಕಲಿಯುತ್ತೇನೆ ಎಂದು ಹೇಳಿದಳು.