ಐಟಿ ದಾಳಿಯಾದ ಅಂಬಿಕಾಪತಿ 8 ವರ್ಷದಿಂದ ಗುತ್ತಿಗೆ ಮಾಡಿಲ್ಲ: ಕೆಂಪಣ್ಣ
ಸಾಕಷ್ಟು ಜನ ಗುತ್ತಿಗೆದಾರರು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದಲ್ಲೂ ಇದ್ದಾರೆ. ಬಿಜೆಪಿಯಲ್ಲಿದ್ದ ಗುತ್ತಿಗೆದಾರರೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಡೆದ 40 ಪರ್ಸೆಂಟ್ ಹೋರಾಟದಲ್ಲಿ ಭಾಗವಹಿಸಿದ್ದರು ಎಂದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಧ ಅಧ್ಯಕ್ಷ ಡಿ. ಕೆಂಪಣ್ಣ

ಬೆಂಗಳೂರು(ಅ.14): ಆದಾಯ ತೆರಿಗೆ ಇಲಾಖೆಯಿಂದ ದಾಳಿಗೆ ಒಳಗಾಗಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಧ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು.
ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೆಂಪಣ್ಣ, "ಕಳೆದ 8 ವರ್ಷಗಳಿಂದ ಅಂಬಿಕಾಪತಿಯವರು ಯಾವುದೇ ಗುತ್ತಿಗೆ ಕೆಲಸಗಳನ್ನು ಮಾಡಿಲ್ಲ. ಅವರಿಗೆ ಸರ್ಕಾರದಿಂದ ಯಾವುದೇ ಹಣ ಬಾಕಿ ಇಲ್ಲ. ಭೂಮಿ, ತೋಟ, ಕೃಷಿ, ಜಲ್ಲಿ ಕ್ರಷರ್ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಅವರ ಬ್ರದರ್ ಕಾಂಗ್ರೆಸ್ ಪಕ್ಷದಲ್ಲಿದ್ದರು. ಬಳಿಕ ಕಾಂಗ್ರೆಸ್ ಬಿಟ್ಟು ಬೇರೆ ಪಾರ್ಟಿ ಕಟ್ಟಿಕೊಂಡು ಸ್ಪರ್ಧಿಸಿ ಸೋತರು. ಸಾಕಷ್ಟು ಜನ ಗುತ್ತಿಗೆದಾರರು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದಲ್ಲೂ ಇದ್ದಾರೆ. ಬಿಜೆಪಿಯಲ್ಲಿದ್ದ ಗುತ್ತಿಗೆದಾರರೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಡೆದ 40 ಪರ್ಸೆಂಟ್ ಹೋರಾಟದಲ್ಲಿ ಭಾಗವಹಿಸಿದ್ದರು" ಎಂದರು.
ಕಾಂಗ್ರೆಸ್ ಪಾಲಿಗೆ ತಲೆನೋವಾಯ್ತಾ ಕಮಿಷನ್ ಕಂಟಕ..? ಶುರುವಾಯ್ತು ರಣ ರಾಜಕಾರಣ !
ಸರ್ಕಾರಕ್ಕೆ ಕಮಿಷನ್ ನೀಡಲು ಅಂಬಿಕಾಪತಿ ಹಣ ಇಟ್ಟುಕೊಂಡಿದ್ದರು ಎಂದು ಬಿಜೆಪಿ ಆರೋಪಿಸಿದೆ ಎಂಬ ಪ್ರಶ್ನೆಗೆ, "ಬಿಜೆಪಿಯವರು ಬೇಕಾದಷ್ಟು ಹೇಳುತ್ತಾರೆ. ಅಧಿಕಾರದಲ್ಲಿದ್ದ ಅವರ ವಿರುದ್ಧವೇ ಆರೋಪಗಳು ಕೇಳಿ ಬಂದಾಗ ಏನು ಮಾಡಿದ್ದರು? ಬಿಜೆಪಿಯ ಮುನಿರತ್ನ ಅವರು ಗುತ್ತಿಗೆದಾರರು. ಅವರ ಮೇಲೂ ಸಾಕಷ್ಟು ಆರೋಪಗಳು ಇವೆ. ದಾಳಿ ನಡೆಸಿದ ಐಟಿ ಅಧಿಕಾರಿಗಳು ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಿ. ತಪ್ಪು ಕಂಡು ಬಂದರೆ ನಾವು ಕೂಡ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದರು.
ಐಟಿ ದಾಳಿ ನಡೆದಿರುವ ಗುತ್ತಿಗೆದಾರರ ಪೈಕಿ, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ದೂರು ನೀಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆರೋಪ ಮಾಡಿದ್ದ ಹೇಮಂತ್ ಮನೆ ಮೇಲೂ ಐಟಿ ದಾಳಿ ನಡೆದಿದೆ.