ಫೆಂಗಲ್ ಎಫೆಕ್ಟ್ ಕೊಡಗು ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ ; ಆತಂಕದಲ್ಲಿ ಕಾಫಿ ಬೆಳೆಗಾರರು!

ಫೆಂಗಲ್ ಚಂಡ ಮಾರುತದ ಎಫೆಕ್ಟ್ ರಾಜ್ಯಾದ್ಯಂತ ಆಗಿದ್ದು ಕೊಡಗು ಜಿಲ್ಲೆಯಲ್ಲೂ ಜಿಟಿಜಿಟಿ ಮಳೆಯಾಗುತ್ತಿದೆ. ಪರಿಣಾಮ ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ

Cyclone Fengal effect on karnataka kodagu coffee growers rav

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು : ಫೆಂಗಲ್ ಚಂಡ ಮಾರುತದ ಎಫೆಕ್ಟ್ ರಾಜ್ಯಾದ್ಯಂತ ಆಗಿದ್ದು ಕೊಡಗು ಜಿಲ್ಲೆಯಲ್ಲೂ ಜಿಟಿಜಿಟಿ ಮಳೆಯಾಗುತ್ತಿದೆ. ಪರಿಣಾಮ ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಜಿಲ್ಲೆಯಲ್ಲಿ ಅರೇಬಿಕಾ ಕಾಫಿ ಹಣ್ಣಾಗಿದ್ದು ಕೊಯ್ಲಿಗೆ ಸಿದ್ಧವಾಗಿದೆ. ಆದರೆ ಮಂಗಳವಾರದಿಂದ ಸುರಿಯುತ್ತಿರುವ ತೀವ್ರ ಮಳೆಗೆ ಕಾಫಿ ಹಣ್ಣು ಉದುರಿ ಹೋಗುವ ಸ್ಥಿತಿ ತಲುಪಿದೆ. ಮಳೆ ಹೀಗೆ ಸುರಿದಲ್ಲಿ ಕಾಫಿ ನೆಲಕ್ಕೆ ಉದುರಿ ಸಂಪೂರ್ಣ ಕರಗಿ ಹೋಗುವ ಆತಂಕ ಎದುರಾಗಿದೆ. 

ಹಣ್ಣು ಉದುರಿ ಹೋಗಬಹುದೆಂದು ಕೊಯ್ಲು ಮಾಡಿದರೆ ಬಿಸಿಲು ಇಲ್ಲದೆ ಇರುವುದರಿಂದ ಒಣಗಿಸಲು ಸಾಧ್ಯವಾಗುದಿಲ್ಲ ಎನ್ನುವ ಭಯವಿದೆ. ಒಂದು ವೇಳೆ ಉದುರಿ ಹೋಗುವುದಕ್ಕಿಂತ ಕೊಯ್ಲು ಮಾಡುವುದು ಉತ್ತಮವೆಂದು ಕೊಯ್ಲು ಮಾಡಿದರೆ ಮಳೆ ಇರುವುದರಿಂದ ಒಣಗದೆ ಫಂಗಸ್ ಬಂದು ಕಾಫಿ ಕಪ್ಪಾಗುವ ಸಾಧ್ಯತೆ ಹೆಚ್ಚು. ಹೀಗೆ ಕಪ್ಪಾದಲ್ಲಿ ಕಾಫಿಯ ಬೆಲೆ ಕಡಿಮೆಯಾಗಲಿದೆ. ಇದರಿಂದ ಬೆಳೆಗಾರರಿಗೆ ತೀವ್ರ ನಷ್ಟವಾಗಲಿದೆ. ಒಟ್ಟಿನಲ್ಲಿ ಫೆಂಗಲ್ ಪರಿಣಾಮವಾಗಿ ಕೊಡಗಿನಲ್ಲಿ ಬೆಳೆಗಾರರು, ವಿವಿಧ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಸದ್ಯ ಕಾಫಿಗೆ ಉತ್ತಮ ಬೆಲೆ ಬಂದಿದ್ದು ಚೀಲಕ್ಕೆ 11 ಸಾವಿರಕ್ಕೂ ಹೆಚ್ಚು ಬೆಲೆ ಇದೆ. ಹೀಗಾಗಿ ಕಾಫಿ ಕೊಯ್ಲು ಮಾಡಿ ಮಾರಾಟ ಮಾಡೋಣ ಎನ್ನುವ ಆಸೆಯಲ್ಲಿದ್ದ ರೈತರಿಗೆ ಫೆಂಗಲ್ ತಣ್ಣೀರು ಎರಚಿದೆ. ಮಳೆಯ ಕಣ್ಣ ಮುಚ್ಚಾಲೆ ಆಟದಲ್ಲಿ ರೈತರು ಪರದಾಡುವಂತೆ ಆಗಿದೆ. ಈಗಾಗಲೇ ಪೂರ್ಣ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡಲಾಗಿದ್ದು ಕಣದಲ್ಲಿ ಒಣಗಲು ಹಾಕಲಾಗಿದೆ. ಆದರೆ ಅದನ್ನೂ ಒಣಗಿಸಲು ಆಗದೆ, ಮಳೆಯಿಂದ ಅದನ್ನು ರಕ್ಷಿಸಲು ಟಾರ್ಪಲ್ ಹೊದಿಸಿ ರಕ್ಷಣೆ ಮಾಡಲಾಗುತ್ತಿದೆ. ಆದರೆ ಬೂಸ್ಟ್ ಹಿಡಿದು ಹಾಳಾಗುವ ಆತಂಕವೂ ಎದುರಾಗಿದೆ ಎಂದು ಬೆಳೆಗಾರ ಪ್ರಸಾದ್ ಕುಟ್ಟಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಫೆಂಗಲ್ ಆರ್ಭಟಕ್ಕೆ 30 ವರ್ಷದಲ್ಲೇ ದಾಖಲೆ ಮಳೆ:16 ಗಂಟೆ ವಿಮಾನ ಹಾರಾಟ ನಿಲ್ಲಿಸಿದ್ದ ಚೆನ್ನೈ ಏರ್ ಪೋರ್ಟ್

 ಕೊಡಗಿನ ಕುಶಾಲನಗರ ತಾಲ್ಲೂಕಿನ ವ್ಯಾಪ್ತಿ, ಸುಂಟಿಕೊಪ್ಪ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದೆ. ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಜಿಟಿಜಿಟಿ ಮಳೆ ಸುರಿಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳವರೆಗೆ ಮಾತ್ರವೇ ಮಳೆ ಸುರಿಯುವುದು ಸಹಜ. ಆದರೆ ಇಂದು ಫೆಂಗಲ್ ಚಂಡಮಾರುತ್ತದ ಪರಿಣಾಮವಾಗಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಮಳೆ ಜೊತೆಗೆ ಮೈಕೊರೆವ ಚಳಿ, ಭಾರೀ ಗಾಳಿ ಬೀಸುತ್ತಿದ್ದು ಕೊಡಗಿನ ಜನರು ಮತ್ತೆ ಮಳೆಗಾಲದಂತೆ ಕೊಡೆ ಹಿಡಿದು ಓಡಾಡಬೇಕಾಗಿದೆ. 

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ: ಬಿಜೆಪಿ-ಜೆಡಿಎಸ್ ವಿರುದ್ಧ ಡಿಸಿಎಂ ವಾಗ್ದಾಳಿ

ತೀವ್ರ ಮಳೆ ಇರುವುದರಿಂದ ಪಟ್ಟಣ, ನಗರ ಪ್ರದೇಶಗಳಲ್ಲಿ ಜನರ ಓಡಾಟವೇ ಕಡಿಮೆ ಆಗಿದೆ. ಮಳೆಯಿಂದಾಗಿ ವಾಹನಗಳ ಸವಾರರು ಪರದಾಡುವಂತೆ ಆಗಿದೆ. ತೀವ್ರ ಚಳಿ ಇರುವುದರಿಂದ ಜನರು ನಡುಗುವಂತೆ ಆಗಿದ್ದು, ಜನರು ಸ್ಟೆಟರ್, ಜರ್ಕಿನ್ ಗಳ ಮೊರೆ ಹೋಗಿದ್ದಾರೆ. ಫೆಂಗಲ್ ಚಂಡಮಾರುತ್ತದ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ಕೊಡಗು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿದೆ.

Latest Videos
Follow Us:
Download App:
  • android
  • ios