ಗಂಗಾ ಕಲ್ಯಾಣ ಯೋಜನೆಯಡಿ ಮೂರು ವರ್ಷದಲ್ಲಿ 19,862 ಕೊಳವೆ ಬಾವಿ ಕೊರೆಯಲು ಗುರಿ ಹಾಕಿಕೊಳ್ಳಲಾಗಿದ್ದು, ಕೇವಲ ಒಂದು ಸಾವಿರ ಕೊಳವೆ ಬಾವಿ ಕೊರೆದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ತಂಗಡಗಿ
ಬೆಂಗಳೂರು(ಜು.01): ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ನೀಡುವ ‘ಸ್ವಯಂ ಉದ್ಯೋಗ ವೈಯಕ್ತಿಕ ಸಾಲ’ ಯೋಜನೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಪ್ರತಿ ಜಿಲ್ಲೆಯಲ್ಲಿ ನೇರ ಸಾಲ ಯೋಜನೆಗೆ ಮಧ್ಯವರ್ತಿಗಳು ಹುಟ್ಟುಕೊಂಡಿದ್ದಾರೆ. ಫಲಾನುಭವಿ ಸಂಬಂಧಿಸಿದ ನಿಗಮ ಅಥವಾ ಅಧಿಕಾರಿಯ ಬಳಿ ಮಾಹಿತಿ ಪಡೆಯುವ ಮೊದಲೇ ಮಧ್ಯವರ್ತಿಗಳು ಫಲಾನುಭವಿಗಳ ಬಳಿ ಹೋಗುತ್ತಾರೆ. ವೈಯಕ್ತಿಕ ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವುದಾಗಿ ದೂರುಗಳೂ ಹೆಚ್ಚಿವೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕು. ನೇರ ಸಾಲದಲ್ಲಿ ನೀಡಲಾಗುವ ಸಂಪೂರ್ಣ 50 ಸಾವಿರ ರು. ಹಣವೂ ಫಲಾನುಭವಿಗೆ ನೇರ ಉಪಯೋಗಕ್ಕೆ ಬರಬೇಕು. ಈ ಯೋಜನೆಗೆ ಹೊಸ ರೂಪ ನೀಡಿ. ಕಂತಿನ ರೂಪದಲ್ಲಾದರೂ ಫಲಾನುಭವಿಗಳಿಗೆ ಹಣ ತಲುಪುವಂತೆ ಆಗಬೇಕು ಎಂದು ಹೇಳಿದರು.
ಸಚಿವ ತಂಗಡಗಿ ಜತೆ ಅಲೆಮಾರಿ ಸಮುದಾಯ ವಾಗ್ವಾದ: ಮತ ಹಾಕಿದ್ದೇವೆ, ಸೌಲಭ್ಯ ಕೊಡದಿದ್ದರೆ ಹೇಗೆ?
ಗಂಗಾ ಕಲ್ಯಾಣ ಯೋಜನೆಯಡಿ ಮೂರು ವರ್ಷದಲ್ಲಿ 19,862 ಕೊಳವೆ ಬಾವಿ ಕೊರೆಯಲು ಗುರಿ ಹಾಕಿಕೊಳ್ಳಲಾಗಿದ್ದು, ಕೇವಲ ಒಂದು ಸಾವಿರ ಕೊಳವೆ ಬಾವಿ ಕೊರೆದಿರುವುದಕ್ಕೆ ಸಚಿವರು ಇದೇ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಆಯುಕ್ತ ಕೆ.ದಯಾನಂದ್, ದೇವರಾಜ ಅರಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು, ಉಪ್ಪಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಕೆ.ಜಗದೀಶ್ ಕುಮಾರ್, ಅಧಿಕಾರಿಗಳಾದ ಮಧುಸೂದನ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
