ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಒಂದಷ್ಟು ಸೌಲಭ್ಯ ಕಲ್ಪಿಸಿದ್ದರು. ಬಳಿಕ ಬಂದ ಬಿಜೆಪಿ ಸರ್ಕಾರ ಕೆಲ ಸವಲತ್ತುಗಳನ್ನು ಹಿಂಪಡೆದಿತ್ತು. ಈ ನೋವನ್ನು ತೋಡಿಕೊಳ್ಳಲು ಜೋರಾಗಿ ಮಾತನಾಡಿದ್ದಾರೆ. ಜಗಳ ನಡೆದಿಲ್ಲ. ಅವರ ಧ್ವನಿಯೇ ಹಾಗೆ ಇದೆ’ ಎಂದು ಸ್ಪಷ್ಟಪಡಿಸಿದ ಶಿವರಾಜ ತಂಗಡಗಿ
ಬೆಂಗಳೂರು(ಜೂ.18): ‘ಸೌಲಭ್ಯಗಳನ್ನು ನೀಡಬೇಕು’ ಎಂದು ಒತ್ತಾಯಿಸಿ ಅಲೆಮಾರಿ, ಅರೆ ಅಲೆಮಾರಿ ಸಂಘದ ಪದಾಧಿಕಾರಿಗಳು ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಜೊತೆ ವಿಧಾನಸೌಧದಲ್ಲಿ ವಾಗ್ವಾದ ನಡೆಸಿರುವ ಘಟನೆ ನಡೆದಿದೆ.
‘ನಮಗೆ ವಸತಿಯಿಲ್ಲ. ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ನಾವು ನಿಮಗೆ ಮತ ಹಾಕಿದ್ದೇವೆ. ಆದರೂ ಸೌಲಭ್ಯಗಳನ್ನು ನೀಡದಿದ್ದರೆ ಹೇಗೆ?’ ಎಂದು ಸಂಘದ ಪದಾಧಿಕಾರಿಗಳು ವಿಧಾನಸೌಧದಲ್ಲಿ ಸಚಿವರನ್ನು ಭೇಟಿಯಾಗಿ ಏರು ಧ್ವನಿಯಲ್ಲಿ ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟಮಾತಿನಂತೆ ನಡೆದಿದೆ: ಸಚಿವ ಶಿವರಾಜ ತಂಗಡಗಿ
ಆದರೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ ತಂಗಡಗಿ, ‘ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಒಂದಷ್ಟುಸೌಲಭ್ಯ ಕಲ್ಪಿಸಿದ್ದರು. ಬಳಿಕ ಬಂದ ಬಿಜೆಪಿ ಸರ್ಕಾರ ಕೆಲ ಸವಲತ್ತುಗಳನ್ನು ಹಿಂಪಡೆದಿತ್ತು. ಈ ನೋವನ್ನು ತೋಡಿಕೊಳ್ಳಲು ಜೋರಾಗಿ ಮಾತನಾಡಿದ್ದಾರೆ. ಜಗಳ ನಡೆದಿಲ್ಲ. ಅವರ ಧ್ವನಿಯೇ ಹಾಗೆ ಇದೆ’ ಎಂದು ಸ್ಪಷ್ಟಪಡಿಸಿದರು.
‘ಹಿಂದುಳಿದ ವರ್ಗಗಳ ಸಚಿವರಾಗಿದ್ದೀರಿ. ನಮ್ಮ ಸಮಸ್ಯೆ ಪರಿಹರಿಸಿ ಎಂದು ಮನವಿ ಮಾಡಿದ್ದಾರೆ. ಶಿಕ್ಷಣ, ವಸತಿಗೆ ಸಂಬಂಧಿಸಿದಂತೆ ಕೆಲವು ಬೇಡಿಕೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದೇನೆ’ ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಶಿವಾನಂದ್ ಪಾಚಂಗಿ ಮಾತನಾಡಿ, ‘ಅಲೆಮಾರಿ ಬುಡಕಟ್ಟು ಜನಾಂಗ ಎಂದು ಜಾತಿ ಪ್ರಮಾಣ ಪತ್ರ ನೀಡಬೇಕು. ವಸತಿ ಸೌಲಭ್ಯ ಕಲ್ಪಿಸಬೇಕು. ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಬೇಕು. ಉಚಿತ ಶಿಕ್ಷಣ ನೀಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಸಭೆ ಕರೆಯಬೇಕು ಎಂದು ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.
