* ಮಗುವನ್ನು ತನ್ನ ಸುಪರ್ದಿಗೆ ನೀಡಬೇಕೆಂದು ಕೋರಿದ್ದ ತಂದೆಗೆ 50 ಸಾವಿರ ರು. ದಂಡ* ಮಗುವಿನ ಪಾಲನೆ ತಾಯಿಯ ಹಕ್ಕು: ಹೈಕೋರ್ಟ್‌

ಬೆಂಗಳೂರು(ಡಿ.23): ಮುಸ್ಲಿಂ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಮಗುವಿನ ಪಾಲನೆ ಪೋಷಣೆಯು ತಾಯಿ ಹಕ್ಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಮಗುವಿನ ಸುಪರ್ದಿಗೆ ಕೋರಿದ್ದ ತಂದೆಯೊಬ್ಬರಿಗೆ 50 ಸಾವಿರ ರು. ದಂಡ ವಿಧಿಸಿದೆ. ಮಗನನ್ನು ತನ್ನ ಸುಪರ್ದಿಗೆ ಒಪ್ಪಿಸಲು ಪತ್ನಿಗೆ ಆದೇಶಿಸುವಂತೆ ಕೋರಿ ಬೆಂಗಳೂರು ನಿವಾಸಿ ಜಿ.ಕೆ.ಮೊಹಮ್ಮದ್‌ ಮುಷ್ತಾಕ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಈ ಆದೇಶ ನೀಡಿದರು.

ಅಲ್ಲದೆ, ನ್ಯಾಯಾಲಯದ ವಿಧಿಸಿರುವ ದಂಡ ಮೊತ್ತವನ್ನು ಒಂದು ತಿಂಗಳ ಒಳಗೆ ಪತ್ನಿಗೆ ನೀಡಬೇಕು. ತಪ್ಪಿದರೆ ಮಗನ ಭೇಟಿಗೆ ಕಲ್ಪಿಸಲಾಗಿರುವ ಅವಕಾಶವನ್ನು ಅಮಾನತು ಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಸಿದೆ. ಹಾಗೆಯೇ, ಪತಿ-ಪತ್ನಿ ಪರಸ್ಪರ ದಾಖಲಿಸಿರುವ ಎಂಟು ಪ್ರಕರಣಗಳನ್ನು ಮುಂದಿನ 9 ತಿಂಗಳೊಳಗಾಗಿ ಇತ್ಯರ್ಥಪಡಿಸಬೇಕು. ಆ ಕುರಿತ ವರದಿಯನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ತಲುಪಿಸಬೇಕು ಎಂದು ಅಧೀನ ನ್ಯಾಯಾಲಯಕ್ಕೆ ಇದೇ ವೇಳೆ ನಿರ್ದೇಶಿಸಿದೆ.

ತಾಯಿಯೇ ಸೂಕ್ತ:

ಮಕ್ಕಳ ಸುಪರ್ದಿ ಎಂಬುದು ಧರ್ಮ ಮತ್ತು ನಂಬಿಕೆಗೂ ಮಿಗಿಲಾದ ಸಂಕೀರ್ಣ ವಿಚಾರ. ಪ್ರಕರಣದಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಪತ್ನಿ ಸ್ವತಂತ್ರ ಜೀವನ ನಡೆಸುತ್ತಿದ್ದಾಳೆ. ಪತಿ 2ನೇ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಸಹ ಜನಿಸಿದೆ. ಹಾಗಾಗಿ ಮೊದಲ ಪತ್ನಿಯ ಮಗು, ತಾಯಿಯ ಮಮತೆಯಲ್ಲೇ ಇರುವುದು ಹೆಚ್ಚು ಸುರಕ್ಷಿತ. ಆದ್ದರಿಂದ, ಮಗುವನ್ನು ಆಕೆಯೇ ಪೋಷಿಸಬೇಕು. ಅದು ಆಕೆಯ ಹಕ್ಕು. ಮಲತಾಯಿಯ ಮಡಿಲಿಗೆ ಮಗುವನ್ನು ಒಪ್ಪಿಸುವುದು ನ್ಯಾಯ ಸಮ್ಮತವಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು?

ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯೋಗಿ ಮುಷ್ತಾಕ್‌ ದಾವಣಗೆರೆಯ ಅಯೇಷಾ ಭಾನುರನ್ನು 2009ರ ಏ.30ರಂದು ವಿವಾಹವಾಗಿದ್ದರು. ದಂಪತಿಗೆ 2013ರ ಆ.1ರಂದು ಗಂಡು ಮಗು ಜನಿಸಿತ್ತು. ನಂತರ ಉಂಟಾದ ಮನಸ್ತಾಪಗಳಿಂದ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ, ಜೀವನಾಂಶ, ಮಾನನಷ್ಟಮೊಕದ್ದಮೆ, ವರದಕ್ಷಿಣೆ ಕಿರುಕುಳ ಸೇರಿದಂತೆ ಇನ್ನಿತರ ವಿಚಾರ ಸಂಬಂಧ ಪತಿ-ಪತ್ನಿ ಎಂಟು ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಮುಷ್ತಾಕ್‌ ಮತ್ತೊಂದು ಮದುವೆಯಾಗಿದ್ದಾರೆ. ಎರಡನೇ ಹೆಂಡತಿಗೆ ಹೆಣ್ಣು ಮಗು ಜನಿಸಿದೆ.

ಸದ್ಯ ಅಯೇಷಾ ಮಗನನ್ನು ತನ್ನ ಬಳಿಯೇ ಉಳಿಸಿಕೊಂಡು ಪೋಷಿಸುತ್ತಿದ್ದಾರೆ. ಆದರೆ, ಪತ್ನಿ ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ನಾನು ಸ್ಥಿತಿವಂತನಾಗಿದ್ದು, ಮಗನಿಗೆ ಅತ್ಯುತ್ತಮ ಜೀವನ ನೀಡುತ್ತೇನೆ. ಹಾಗಾಗಿ ಮಗನನ್ನು ನನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸಬೇಕು ಎಂದು ಕೋರಿ ಮುಷ್ತಾಕ್‌ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅದನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ, ತಿಂಗಳ ಮೊದಲ ಮತ್ತು ಮೂರನೆಯ ಶನಿವಾರಗಳಂದು ನಾಲ್ಕು ಗಂಟೆಗಳ ಮಗನನ್ನು ಭೇಟಿ ಮಾಡಬಹುದು ಎಂದು ಮುಷ್ತಾಕ್‌ಗೆ ಅವಕಾಶ ಕಲ್ಪಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಎರಡನೇ ಪತ್ನಿಗೆ ಮಗು ಇದ್ದರೂ, ಮೊದಲ ಪತ್ನಿಯ ಮಗನ ಭೇಟಿಗೆ ಕೌಟುಂಬಿಕ ನ್ಯಾಯಾಲಯದ ಅವಕಾಶ ಕಲ್ಪಿಸಿದ್ದರೂ ಅನಗತ್ಯವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕಾರಣಕ್ಕೆ ಮುಷ್ತಾಕ್‌ಗೆ ದಂಡ ವಿಧಿಸಿ ಅರ್ಜಿ ವಜಾಗೊಳಿಸಲಾಗಿದೆ.